ಕಾಲಿನ ಬೆರಳನ್ನು ಕೈಗೆ ಜೋಡಿಸಿದ ವೈದ್ಯರು! – ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಕಾಲಿನ ಬೆರಳನ್ನು ಕೈಗೆ ಜೋಡಿಸಿದ ವೈದ್ಯರು! – ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ನವದೆಹಲಿ: ಉತ್ತರಾಖಂಡದ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯರು ವ್ಯಕ್ತಿಯೊಬ್ಬನ ಕಾಲಿನ ಹೆಬ್ಬೆರಳನ್ನು ಕೈಗೆ ಜೋಡಿಸುವ ಮೂಲಕ ಅಪರೂಪದ ಶಸ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.

ಉತ್ತರಾಖಂಡದ 44 ವರ್ಷದ ವ್ಯಕ್ತಿಯೊಬ್ಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಆತನ ಕೈಯ ನಾಲ್ಕು ಬೆರಳುಗಳನ್ನು ಕಳೆದುಕೊಂಡಿದ್ದ. ಸುಮಾರು ಎಂಟು ಗಂಟೆಯ ಬಳಿಕ ಆತನ ಸಹೋದ್ಯೋಗಿಗಳು ಆಸ್ಪತ್ರೆಗೆ ಕರೆತಂದಿದ್ದಾರೆ. ಈ ವೇಳೆಗಾಗಲೇ ಆತನ ಸ್ಥಿತಿ ಚಿಂತಾಜನಕವಾಗಿತ್ತು. ಆದರೂ ಆತನ ಸಹೋದ್ಯೋಗಿಗಳು ಗಾಯಾಳುವಿನ ತುಂಡಾದ ತೋರುಬೆರಳು, ಮಧ್ಯ, ಉಂಗುರ ಬೆರಳು ಮತ್ತು ಹೆಬ್ಬೆರಳನ್ನು ಪಾಲಿಥೀನ್ ಚೀಲದಲ್ಲಿ ತಂದಿದ್ದರು.

ಇದನ್ನೂ ಓದಿ: ಆಕಾಶದಲ್ಲಿ ನಿಗೂಢ ಸುರುಳಿಯಾಕೃತಿ –  ಏನಿದು ವಿಜ್ಞಾನ ವಿಸ್ಮಯ?

ಈ ವೇಳೆ ಶರೀರದಿಂದ ತುಂಡಾಗಿ ಕ್ರಷ್ ಆಗಿರುವ ಮೂರು ಬೆರಳುಗಳನ್ನು ಮತ್ತೆ ಕೈಗೆ ಸೇರಿಸುವುದು ಮಾತ್ರವಲ್ಲ, ಸಂಪೂರ್ಣ ನಜ್ಜುಗುಜ್ಜಾದ ಹೆಬ್ಬೆರಳನ್ನು ಮರು ಜೋಡಿಸುವುದು ವೈದ್ಯರಿಗೆ ಸವಾಲಾಗಿತ್ತು. ಬಳಿಕ ಪ್ಲಾಸ್ಟಿಕ್ ಮತ್ತು ಕಾಸ್ಕೆಟಿಕ್ ಸರ್ಜರಿ ವಿಭಾಗದ ಅಧ್ಯಕ್ಷ ಡಾ.ಮಹೇಶ್ ಮಂಗಲ್ ಅವರ ನೇತೃತ್ವದ ವೈದ್ಯರ ತಂಡ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ. ಸಂಪೂರ್ಣ ವಿರೂಪಗೊಂಡ ಹೆಬ್ಬೆರಳಿಗೆ ಗಾಯಾಳುವಿನ ಬಲಗಾಲಿನ ಎರಡನೇ ಬೆರಳನ್ನು ಜೋಡಿಸಲು ತಿರ್ಮಾನಿಸಿದ್ದಾರೆ. ಸುಮಾರು 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕಾಲಿನ ಬೆರಳನ್ನು ತುಂಡಾದ ಕೈಯ ಹೆಬ್ಬೆರಳು ಇದ್ದ ಸ್ಥಳದಲ್ಲಿ ಕಸಿ ಮಾಡಿದ್ದಾರೆ.

ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ಡಾ.ಮಹೇಶ್ ಮಂಗಲ್, ಪ್ಲಾಸ್ಟಿಕ್ ಸರ್ಜರಿ ಮತ್ತು ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ವಿಭಾಗದ ಡಾ.ಎಸ್.ಎಸ್.ಗಂಭೀರ್, ಡಾ.ನಿಖಿಲ್ ಜುಂಜುನ್ವಾಲಾ ಮತ್ತು ಡಾ.ಪೂಜಾ ಗುಪ್ತಾ ಮತ್ತು ಮೂಳೆಚಿಕಿತ್ಸಾ ವಿಭಾಗದ ಡಾ.ಮನೀಶ್ ಧವನ್ ಇದ್ದರು.

“ಬೆರಳುಗಳು, ಕಾಸ್ಟೆರಳುಗಳು, ನೆತ್ತಿ ಕಿವಿ, ಕೈಕಾಲುಗಳು ಮುಂತಾದ ದೇಹದ ಮರುಜೋಡಣೆ ಶಸ್ತ್ರಚಿಕಿತ್ಸೆಯನ್ನು500 ಕ್ಕೂ ಹೆಚ್ಚು ಮಾಡಿದ್ದೇವೆ. ಆದರೆ ಇದು ಅಪರೂಪದ ಕೇಸ್ ಆಗಿತ್ತು. ಏಕೆಂದರೆ ಗಾಯಾಳುವಿನ ಹೆಬ್ಬೆರಳು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇದನ್ನು ಮರು ಜೋಡಿಸುವುದು ಕನಸಿನ ಮಾತಾಗಿತ್ತು. ಬಳಿಕ ವೈದ್ಯರ ತಂಡದೊಂದಿಗೆ ಚರ್ಚಿಸಿ ಗಾಯಾಳುವಿನ ಕಾಲಿನ ಬೆರಳನ್ನು ಕೈಯ ಹೆಬ್ಬೆರಳಿಗೆ ಜೋಡಿಸುದಾಗಿ ತೀರ್ಮಾನ ಕೈಗೊಳ್ಳಲಾಯಿತು. ನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು ಈ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದು ಡಾ.ಮಹೇಶ್ ಮಂಗಲ್ ಹೇಳುತ್ತಾರೆ.

“ಕತ್ತರಿಸಿದ ಭಾಗಗಳನ್ನು ವಾಪಸ್ ಜೋಡಿಸುವ ಮಹತ್ವವನ್ನು ನಾವು ಪದೇ ಪದೆ ಹೇಳಲು ಬಯಸುತ್ತೇವೆ. ರೋಗಿಗಳು ಮತ್ತು ಸಂಬಂಧಿಕರು ಯಾವಾಗಲೂ ಅಪಘಾತದ ಸ್ಥಳದಲ್ಲಿ ದೇಹದ ತುಂಡಾದ ಭಾಗವನ್ನು ಹುಡುಕಲು ಪ್ರಯತ್ನಿಸಬೇಕು. ರೋಗಿ ಮತ್ತು ಸಂರಕ್ಷಿಸಲ್ಪಟ್ಟ ತುಂಡಾದ ದೇಹದ ಭಾಗವನ್ನು ಸಕಾಲಿಕವಾಗಿ ಆಸ್ಪತ್ರೆಗೆ ಸಾಗಿಸುವುದರಿಂದ ಒಂದು ಜೀವ ಉಳಿಯುತ್ತದೆ. ಅಪಘಾತ ಸಂಭವಿಸಿದಾಗ ತುಂಡಾದ ದೇಹದ ಭಾಗವನ್ನು ತೊಳೆದು ಸ್ವಚ್ಛಗೊಳಿಸಬೇಕು. ನಂತರ ಅದನ್ನು ಸ್ವಚ್ಛವಾದ ಪಾಲಿಥಿನ್ ಚೀಲದಲ್ಲಿ ಹಾಕಬೇಕು. ಬಿಗಿಗೊಳಿಸಿದ ನಂತರ ಈ ಮೊದಲ ಚೀಲವನ್ನು ಮಂಜುಗಡ್ಡೆಯಿಂದ ತುಂಬಿದ ಎರಡನೇ ಪಾಲಿಥಿನ್ ಚೀಲಕ್ಕೆ ವರ್ಗಾಯಿಸಬೇಕಾಗುತ್ತದೆ. ಕತ್ತರಿಸಿದ ಭಾಗವು ಮಂಜುಗಡ್ಡೆಯೊಂದಿಗೆ ಸಂಪರ್ಕಕ್ಕೆ ಬರದಂತೆ ತೀವ್ರ ಕಾಳಜಿ ವಹಿಸಬೇಕಾಗಿದೆ. ನಂತರ ರೋಗಿಯನ್ನು ಪಾಲಿಥಿನ್ ಚೀಲಗಳೊಂದಿಗೆ ಮೈಕ್ರೋಸರ್ಜಿಕಲ್ ಪ್ಲಾಸ್ಟಿಕ್ ಸರ್ಜರಿ ತಂತ್ರಗಳು ಲಭ್ಯವಿರುವ ದೊಡ್ಡ ಆಸ್ಪತ್ರೆಗೆ ವರ್ಗಾಯಿಸಬೇಕಾಗುತ್ತದೆ’ ಎಂದು ಡಾ.ಮಂಗಲ್ ಹೇಳಿದ್ದಾರೆ.

suddiyaana