ಆಗಸದಲ್ಲಿಂದು ಗ್ರಹಗಳ ಜಾತ್ರೆ – ಬರಿಗಣ್ಣಿಗೆ ಕಾಣುತ್ತೆ 7 ಗ್ರಹಗಳು
ಮಿಸ್‌ ಆದ್ರೆ 2040ರ ತನಕ ಕಾಯ್ಬೇಕು

ಆಗಸದಲ್ಲಿಂದು ಗ್ರಹಗಳ ಜಾತ್ರೆ – ಬರಿಗಣ್ಣಿಗೆ ಕಾಣುತ್ತೆ 7 ಗ್ರಹಗಳುಮಿಸ್‌ ಆದ್ರೆ 2040ರ ತನಕ ಕಾಯ್ಬೇಕು

ನಾವು ಇರುವೆಗಳನ್ನ ನೋಡಿದ್ರೆ ಶಿಸ್ತು ಅಂದ್ರೆ ಏನ್ ಅಂತಾ ಗೊತ್ತಾಗುತ್ತೆ.. ನೂರಾರು ಇರುವೆಗಳು ಒಂದೇ ಸಾಲಿನ ಹೋಗ್ತಾವೆ.. ಎಲ್ಲೂ ಕೂಡ ಇರುವೆಗಳ ಸಾಲು ಮಿಸ್ ಆಗೋದಿಲ್ಲ.. ಆದ್ರೆ ಈಗ ಈ ಇರುವೆಗಳಂತೆ ನಮಗೆ ಗ್ರಹಗಳ ಸಾಲು ಆಗಸದಲ್ಲಿ ಕಾಣಲಿದೆ. ಇದರರ್ಥ ನಮ್ಮ ಸೌರವ್ಯೂಹದಲ್ಲಿನ ಗ್ರಹಗಳ ಜೋಡಣೆಯು ಸೂರ್ಯನ ಒಂದು ಬದಿಯಲ್ಲಿ ಸಾಲಾಗಿ ನಿಂತು ಸುಂದರವಾದ ಗ್ರಹ ಮೆರವಣಿಗೆಯನ್ನು ಸೃಷ್ಟಿಸುತ್ತದೆ.

ಆಗಸದಲ್ಲಿ ಗ್ರಹಗಳ ರಾಶಿ ಪೆರೇಡ್​ ನೋಡುವುದಕ್ಕೆ ಯಾವುದೇ ವಿಶೇಷ ಉಪಕರಣಗಳನ್ನು ಬಳಸುವ ಅವಶ್ಯಕತೆ ಇಲ್ಲ. ಶನಿ, ಗುರು, ಮಂಗಳ ಮತ್ತು ಶುಕ್ರ ಸೇರಿದಂತೆ ಮುಂತಾದ ಗ್ರಹಗಳನ್ನು ನಮ್ಮ ಕಣ್ಣುಗಳಿಂದ ಸ್ಪಷ್ಟವಾಗಿ ಕಾಣಬಹುದು. ಆದರೂ ನೆಪ್ಚೂನ್ ಮತ್ತು ಯುರೇನಸ್ ಅನ್ನು ದೂರದರ್ಶಕದ ಮೂಲಕ ಮಾತ್ರ ನೋಡಲು ಸಾಧ್ಯವಾಗುತ್ತದೆ.  ಈ ಬಾರಿ ಗ್ರಹಗಳ ಮೆರವಣಿಗೆ ನೋಡುವುದನ್ನ ತಪ್ಪಿಸಿಕೊಂಡರೆ, 2040 ರವರೆಗೆ ಅಂತಹ ಅಪರೂಪದ ದೃಶ್ಯವನ್ನು ಮತ್ತೆ ನೋಡಲಾಗುವುದಿಲ್ಲ ಅಂತ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಜನವರಿ 21 ರಂದು ಬಾಹ್ಯಾಕಾಶದಲ್ಲಿ 6 ಗ್ರಹಗಳ ಮೆರವಣಿಗೆ ಕಂಡುಬಂದಿತು. ಆದರೆ, ಈ ಬಾರಿ ಏಳು ಗ್ರಹಗಳು ಒಂದೇ ಸಾಲಿನಲ್ಲಿರುತ್ತವೆ ಮತ್ತು ಅವು ಕಣ್ಣಿಗೆ ಕಾಣುತ್ತೆ. ಸೌರವ್ಯೂಹದ ಆರು ಗ್ರಹಗಳಾದ ಶನಿ, ಗುರು, ಮಂಗಳ, ಶುಕ್ರ, ನೆಪ್ಚೂನ್ ಮತ್ತು ಯುರೇನಸ್ ಈಗಾಗಲೇ ಒಂದೇ ಸಾಲಿನಲ್ಲಿ ಸೇರಿಕೊಂಡಿವೆ. ಈಗ ಬುಧ ಗ್ರಹವು ಈ ಸಾಲಿನಲ್ಲಿ ಹೊಸದಾಗಿ ಸೇರಿಕೊಂಡಿದೆ. ಐದು ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಯನ್ನು ಬರಿಗಣ್ಣಿನಿಂದ ಬಹಳ ಸ್ಪಷ್ಟವಾಗಿ ಕಾಣಬಹುದು. ಆದಾಗ್ಯೂ, ಯುರೇನಸ್ ಮತ್ತು ನೆಪ್ಯೂನ್ ತುಂಬಾ ದುರ್ಬಲ ಗ್ರಹಗಳಾಗಿರುವುದರಿಂದ, ಅವುಗಳನ್ನು ನೋಡಲು ಬೈನಾಕ್ಯುಲರ್‌ಗಳು ಅಥವಾ ದೂರದರ್ಶಕ ಅಗತ್ಯವಿದೆ. ಸಂಜೆ ಸೂರ್ಯಾಸ್ತದ ನಂತರದಿಂದ ಬೆಳಿಗ್ಗೆ ಸೂರ್ಯೋದಯದ ಮೊದಲು ವೀಕ್ಷಣೆಗೆ ಉತ್ತಮ ಸಮಯವಾಗಿದೆ. ಈ ಸಮಯದಲ್ಲಿ, ಗ್ರಹಗಳು ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ಅಪರೂಪದ ಆಕಾಶ ಘಟನೆಯು ಖಗೋಳಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುವುದಲ್ಲದೆ, ಮಹಾ ಕುಂಭಮೇಳದ ಬೆನ್ನಲ್ಲೇ ಸಂಭವಿಸುತ್ತಿರುವುದರಿಂದ ಇದು ತುಂಬಾ ವಿಶೇಷವಾಗಿದೆ.

 ಭಾರತದಲ್ಲಿ ಯಾವಾಗ ಗೋಚರಿಸುತ್ತದೆ?

ಈ ಗ್ರಹಗಳ ಮೆರವಣಿಗೆ ನಮ್ಮ ದೇಶದಲ್ಲೂ ಗೋಚರಿಸುತ್ತದೆ. ಏಳು ಗ್ರಹಗಳ ಮೆರವಣಿಗೆ ಇಂದು ರಾತ್ರಿ 8:30 ರ ನಂತರ ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅಪರೂಪದ ಘಟನೆಯನ್ನು ವೀಕ್ಷಿಸಲು ಕತ್ತಲೆಯಾದ, ಸ್ಪಷ್ಟವಾದ, ಮೋಡರಹಿತ ಆಕಾಶದ ಅಗತ್ಯವಿದೆ. ಇದರರ್ಥ ಈ ದೃಶ್ಯಗಳ ಸ್ಪಷ್ಟತೆಯು ಹವಾಮಾನ ಪರಿಸ್ಥಿತಿಗಳು ಮತ್ತು ಮಾಲಿನ್ಯದ ಮಟ್ಟವನ್ನು ಅವಲಂಬಿಸಿರುತ್ತದೆ.

 ಗ್ರಹ ಮೆರವಣಿಗೆ ಸ್ಪಷ್ಟವಾಗಿ ನೋಡುವುದು ಹೇಗೆ?

ಈ ಗ್ರಹ ಮೆರವಣಿಗೆಯನ್ನು ವೀಕ್ಷಿಸಲು ಹಲವು ಅಪ್ಲಿಕೇಶನ್‌ಗಳಿವೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ‘ಸ್ಟಾರ್ ವಾಕ್ 2’ ಮತ್ತು ‘ಸ್ಟೆಲ್ಲೇರಿಯಮ್’ ಎಂಬ ಎರಡು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ ವೀಕ್ಷಿಸಬಹುದು. ಈ ಅಪ್ಲಿಕೇಶನ್‌ಗಳಲ್ಲಿ ಗ್ರಹ ಮೆರವಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ವರದಿಯ ಪ್ರಕಾರ ಆಗಸ್ಟ್ 2025 ರಲ್ಲಿ ಮತ್ತೊಂದು ಗ್ರಹ ಮೆರವಣಿಗೆ ನಡೆಯುವ ಸಾಧ್ಯತೆಯಿದೆ. ಆದರೆ ಆಗ ಒಂದೇ ನೇರ ರೇಖೆಯಲ್ಲಿ ಕೇವಲ 4 ಗ್ರಹಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಆರರಿಂದ ಏಳು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಬಹಳ ಅಪರೂಪದ ಘಟನೆ. ಏಳು ಗ್ರಹಗಳನ್ನು ಸರಳ ರೇಖೆಯಲ್ಲಿ ನೋಡಲು ಇದು ಅತ್ಯುತ್ತಮ ಸಮಯ.

Kishor KV