ಉತ್ತರಾಖಂಡ ವಿರುದ್ಧ ದಾಖಲೆಯ ರನ್ ಗಳಿಸಿಯೂ ಪಂದ್ಯ ಡ್ರಾ – ರಣಜಿ ಫೈನಲ್ ಗೆ ಕರ್ನಾಟಕ!

ರಣಜಿ ಟ್ರೋಫಿ. ಭಾರತದ ಪ್ರತಿಷ್ಠಿತ ದೇಶೀಯ ಟೂರ್ನಿ. ರೆಡ್ ಬಾಲ್ ಮಾದರಿಯ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಅದ್ಭುತ ಪ್ರದರ್ಶನ ನೀಡಿ ಫೈನಲ್ ಗೇರಿದೆ. ಅದೂ ಕೂಡ ಬರೋಬ್ಬರಿ 11 ವರ್ಷಗಳ ಬಳಿಕ ಫೈನಲ್ ಗೆ ಲಗ್ಗೆ ಇಟ್ಟಿದೆ. ದಾಖಲೆಯ ಮೊತ್ತದಲ್ಲಿ ರನ್ಸ್ ಕಲೆ ಹಾಕಿ ಉತ್ತರಾಖಂಡ್ ಬೌಲರ್ ಗಳ ಬೆವರಿಳಿಸಿದ್ದ ಕರ್ನಾಟಕ ತಂಡದ ಆಟಗಾರರು ಚರಿತ್ರೆ ಬರೆದಿದ್ದಾರೆ. ಈಗ ಫೈನಲ್ ನಲ್ಲೂ ಇಂಥದ್ದೇ ಪ್ರದರ್ಶನದೊಂದಿಗೆ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ : ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ! – ಟಿಕೆಟ್ ಮಶಿನ್ ಕದ್ದೊಯ್ದ ಖದೀಮರು!
ಕರ್ನಾಟಕ ಮತ್ತು ಉತ್ತರಾಖಂಡ್ ನಡುವೆ ಫೆಬ್ರವರಿ 15ರಿಂದ ಆರಂಭವಾಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ನಾಯಕತ್ವದ ಕರ್ನಾಟಕ ಪಡೆ ಭರ್ಜರಿ ಪ್ರದರ್ಶನ ನೀಡಿತ್ತು. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಉತ್ತರಾಖಂಡ್ ತಂಡದ ನಾಯಕ ಕುನಾಲ್ ಚಂಡೆಲಾ ಬೌಲಿಂಗ್ ಆಯ್ದುಕೊಂಡಿದ್ದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಎದುರಾಳಿ ಪಡೆಯ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿತ್ತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಕೆಎಲ್ ರಾಹುಲ್ (141) ಶತಕ ಬಾರಿಸಿದರೆ, ನಾಯಕ ದೇವದತ್ ಪಡಿಕ್ಕಲ್ (232) ದ್ವಿಶತಕ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಮರಣ್ ರವಿಚಂದ್ರನ್ 135 ರನ್ಗಳ ಇನಿಂಗ್ಸ್ ಆಡಿದ್ರು. ಹಾಗೇ ಕೃತಿಕ್ ಕೃಷ್ಣ 60 ರನ್ ಗಳಿಸಿದರೆ, ಕೆಳ ಕ್ರಮಾಂಕದಲ್ಲಿ ವಿದ್ಯಾಧರ್ ಪಾಟೀಲ್ 54 ರನ್ಗಳ ಸಾಥ್ ನೀಡಿದ್ರು. ಈ ಮೂಲಕ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡ 194.4 ಓವರ್ಗಳಲ್ಲಿ ಬರೋಬ್ಬರಿ 736 ರನ್ಗಳಿಸಿ ಆಲೌಟ್ ಆಯಿತು. ರನ್ ಗಳ ರಾಶಿ ನೋಡಿಯೇ ಕಂಗೆಟ್ಟಿದ ಉತ್ತರಾಖಂಡ ಚೇಸಿಂಗ್ ಆರಂಭಿಸಿತ್ತು. ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 233 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 503 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಫಾಲೋ ಆನ್ ಹೇರದೇ ಮತ್ತೆ ಬ್ಯಾಟಿಂಗ್ ಮಾಡಿದ್ದ ಕರ್ನಾಟಕ
ಮೊದಲ ಇನ್ನಿಂಗ್ಸ್ ನಲ್ಲೇ 503 ರನ್ಗಳ ಬೃಹತ್ ಮುನ್ನಡೆ ಪಡೆದಿದ್ರೂ ಕರ್ನಾಟಕ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಫಾಲೋ ಆನ್ ಹೇರದೇ ತಾವೇ ಬ್ಯಾಟಿಂಗ್ ಆರಂಭ ಮಾಡಿದ್ರು. ದ್ವಿತೀಯ ಇನಿಂಗ್ಸ್ನಲ್ಲಿ ಕರ್ನಾಟಕ ಪರ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಹಾಗೂ ಕೆಎಲ್ ರಾಹುಲ್ 86 ರನ್ ಬಾರಿಸಿದರು. ಈ ಮೂಲಕ ಸೆಕೆಂಡ್ ಇನಿಂಗ್ಸ್ನಲ್ಲಿ 323 ರನ್ಗಳಿಸಿ ಆಲೌಟ್ ಆದ್ರು. ಮೊದಲ ಇನಿಂಗ್ಸ್ನಲ್ಲಿನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 827 ರನ್ಗಳ ಗುರಿ ಪಡೆದ ಉತ್ತರಾಖಂಡ್ ತಂಡವು 5ನೇ ದಿನದಾಟದ ಅಂತ್ಯಕ್ಕೆ ಕಲೆಹಾಕಿದ್ದು 260 ರನ್ಗಳು ಮಾತ್ರ. ಇದರೊಂದಿಗೆ ಕರ್ನಾಟಕ-ಉತ್ತರಾಖಂಡ್ ನಡುವಣ ಸೆಮಿಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿದೆ. ಆದ್ರೆ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಫೆಬ್ರವರಿ 24 ರಿಂದ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜುಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿದೆ. ಜಮ್ಮು ಕಾಶ್ಮೀರ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಐದು ದಿನಗಳ ಹೈವೋಲ್ಟೇಜ್ ರಣಜಿ ಟ್ರೋಫಿ ಫೈನಲ್ ಪಂದ್ಯ ಹುಬ್ಬಳಿಯಲ್ಲಿ ನಡೆಯಲಿದೆ. ಫೆಬ್ರವರಿ 24 ರಿಂದ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ತವರಿನಲ್ಲಿ ಕರ್ನಾಟಕ ತಂಡವನ್ನು ಬೆಂಬಲಿಸಲು ಅಭಿಮಾನಿಗಳ ಬಳಗವೇ ಸೇರುವ ನಿರೀಕ್ಷೆ ಇದೆ.
ಕರ್ನಾಟಕ ತಂಡ ಕೂಡ ಬಲಿಷ್ಠವಾಗಿದ್ದು, ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಮಯಾಂಕ್ ಅರ್ಗವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃತಿಕ್ ಕೃಷ್ಣ ಕರ್ನಾಟಕದ ಬ್ಯಾಟಿಂಗ್ ಬಲವಾಗಿದ್ದಾರೆ. ಇನ್ನೂ ಬೌಲಿಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ ಘಟಾನುಘಟಿಗಳಿದ್ದಾರೆ. ಕರ್ನಾಟಕ 9ನೇ ಬಾರಿಗೆ ರಣಜಿ ಟ್ರೋಫಿಯ್ನು ಎತ್ತಿ ಹಿಡಿಯಲು ಸಜ್ಜಾಗಿದೆ.

ನೋಡಿರಿ

