ಟೀಂ ಹಾಳು ಮಾಡಿದ್ದೇ BCCI – ಸಚಿನ್ ಗಿದ್ದ ಶ್ರದ್ಧೆ ರೋಹಿತ್, ಕೊಹ್ಲಿ, ರಾಹುಲ್ ಗೆ ಇಲ್ವಾ?
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ. ಅದೂ ಅಲ್ದೇ ತವರಿನಲ್ಲೇ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಆಗಿತ್ತು. ಸೋ ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ ಒಂದು ಪಂದ್ಯ ಅಷ್ಟೇ ಗೆದ್ದಿರೋದು. ಹಾಗೇ 1 ಪಂದ್ಯ ಡ್ರಾ ಆಗಿದೆ. ಭಾರತ ತಂಡದ ಈ ಹೀನಾಯ ಪ್ರದರ್ಶನಕ್ಕೆ ಪ್ರಮುಖ ಕಾರಣವೇ ಸ್ಟಾರ್ ಆಟಗಾರರ ಕಳಪೆ ಪ್ರದರ್ಶನ. ಆಸ್ಟ್ರೇಲಿಯಾ ಸರಣಿಯಲ್ಲಿ ಸೋಲಿಗೆ ಕಾರಣ ಸೀನಿಯರ್ ಪ್ಲೇಯರ್ಸ್ ಫೇಲ್ಯೂರ್ ಅನ್ನೋದು ಗೊತ್ತಿರೋ ವಿಚಾರ. ಕ್ರಿಕೆಟ್ ಅಭಿಮಾನಿಗಳ ಜೊತೆ ದಿಗ್ಗಜ ಕ್ರಿಕೆಟಿಗರೂ ಕೂಡ ಇದನ್ನೇ ಹೇಳ್ತಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶುಭ್ ಮನ್ ಗಿಲ್ ರಂತಹ ಆಟಗಾರರನ್ನ ಫ್ರೀ ಬಿಟ್ಟಿದ್ದೇ ತಪ್ಪಾಯ್ತಾ ಎನ್ನುವಂಥ ಪ್ರಶ್ನೆ ಮೂಡಿದೆ. ಅಂದ್ರೆ ರಣಜಿ ಪಂದ್ಯ ಸೇರಿದಂತೆ ದೇಶೀ ಟೂರ್ನಿಗಳಿಗೆ ಕೈಬಿಟ್ಟಿದ್ದೇ ತಪ್ಪಾಯ್ತಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಇದನ್ನೂ ಓದಿ : RCB ಬೆನ್ನೆಲುಬು ಟಿಮ್ ಡೇವಿಡ್ – IPLಗೂ ಮುನ್ನವೇ ಬೆಸ್ಟ್ ಫಿನಿಶರ್ ಹವಾ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೀಂ ಇಂಡಿಯಾ ಸೇರಿದ್ಮೇಲೆ ರಣಜಿ ಕಡೆ ಮುಖನೇ ಮಾಡಿಲ್ಲ. ವಿರಾಟ್ ಕೊಹ್ಲಿ ಕೊನೆಯದಾಗಿ 2012ರಲ್ಲಿ ರಣಜಿ ಪಂದ್ಯ ಆಡಿದ್ದರು. ಘಾಜಿಯಾಬಾದ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ನವೆಂಬರ್ 2-5ರವರೆಗೆ ಈ ಪಂದ್ಯ ನಡೆದಿತ್ತು. ಇದರಲ್ಲಿ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಆಶೀಶ್ ನೆಹ್ರಾ, ಇಶಾಂತ್ ಶರ್ಮಾ, ಸುರೇಶ್ ರೈನಾ, ಮೊಹಮ್ಮದ್ ಕೈಫ್, ಭುವನೇಶ್ವರ್ ಕುಮಾರ್ ಮೊದಲಾದವರೂ ಆಟವಾಡಿದ್ದರು. ಬಟ್ ಅದಾದ್ಮೇಲೆ ವಿರಾಟ್ ಕೊಹ್ಲಿ ರಣಜಿ ಪಂದ್ಯಗಳನ್ನ ಆಡಿಯೇ ಇಲ್ಲ. ಬಿಸಿಸಿಐ ಕೂಡ ಆಡುವಂತೆ ತಾಕೀತು ಕೂಡ ಮಾಡಿಲ್ಲ. ಹಾಗೇ ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಕೊನೆಯದಾಗಿ 2015ರಲ್ಲಿ ರಣಜಿ ಪಂದ್ಯ ಆಡಿದ್ದರು. ಬಳಿಕ ಅವರು ಅತ್ತ ಮುಖ ಮಾಡಿಲ್ಲ. ಇದಾದ ಬಳಿಕ 2017ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಎ ತಂಡದ ಪರವಾಗಿ ಒಮ್ಮೆ ಕೊಹ್ಲಿ ಆಡಿದ್ದರೆ, 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಎ ತಂಡದಲ್ಲಿ ರೋಹಿತ್ ಶರ್ಮಾ ಆಡಿದ್ದರು.
ವಿಶೇಷವೆಂದರೆ 2013ರ ನವೆಂಬರ್ 16ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅದೇ ವರ್ಷದ ಅಕ್ಟೋಬರ್‌ನಲ್ಲಿ ಹರ್ಯಾಣ ವಿರುದ್ಧ ಕೊನೆಯ ರಣಜಿ ಪಂದ್ಯವನ್ನು ಆಡಿದ್ದರು. ಅಂದರೆ ನಿವೃತ್ತಿಗೂ ಒಂದು ತಿಂಗಳು ಮೊದಲಿನವರೆಗೂ ದೇಶೀಯ ಕ್ರೀಡೆಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್‌ಪಟು ಭಾಗಿಯಾಗಿದ್ದರು. ಆದ್ರೆ ಈಗಿನ ಯಾವ ಪ್ಲೇಯರ್ಗೂ ಕೂಡ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ಆಸಕ್ತಿ ಇಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಅದನ್ನ ಬಿಟ್ರೆ ಕೋಟಿ ಕೋಟಿ ಕೊಡುವಂತ ಐಪಿಎಲ್ ಅಂದ್ರೆ ಮಾತ್ರ ಕಣಕ್ಕಿಳಿಯುತ್ತಾರೆ. ಭಾರತ ತಂಡದ ಪ್ರಮುಖ ಆಟಗಾರರಾದ ಶುಭ್ಮನ್ ಗಿಲ್, ರವೀಂದ್ರಾ ಜಡೇಜಾ, ಮೊಹಮ್ಮದ್ ಸಿರಾಜ್ ಹಾಗೂ ಕೆಎಲ್ ರಾಹುಲ್ ರಣಜಿ ಪಂದ್ಯಗಳನ್ನು ಆಡುತ್ತಿದ್ದಾರೆ. ಆದರೆ ನಿರಂತರವಾಗಿ ಆಡುತ್ತಿಲ್ಲ. ಒಂದೆರಡು ಪಂದ್ಯಗಳಲ್ಲಿ ಭಾಗಿಯಾಗಿ ಉಳಿದ ಪಂದ್ಯಗಳಿಗೆ ಗೈರಾಗ್ತಾರೆ. ಹೀಗಾಗಿ ಈ ಹಿಂದೆ ಬಿಸಿಸಿಐ ಕಾರ್ಯದರ್ಶಿ ಆಗಿದ್ದ ಜಯ್ ಶಾ ದೇಶೀಯ ಟೂರ್ನಿ ಆಡದ ಆಟಗಾರರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದ್ರೆ ಯಾರೊಬ್ರೂ ಕೇರ್ ಮಾಡಲಿಲ್ಲ. ಈ ಎಚ್ಚರಿಕೆಯ ಬಳಿಕ ಹಲವು ಪ್ರಮುಖ ಆಟಗಾರರ ಮೇಲೆ ಬಿಸಿಸಿಐ ಕ್ರಮ ಕೈಗೊಂಡಿತ್ತು. ಕೇಂದ್ರೀಯ ಕಾಂಟ್ರಾಕ್ಟ್‌ನಿಂದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶಾನ್ ಅವರನ್ನು ಹೊರಗಿಟ್ಟು ಆಟಗಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು. ಆದರೆ ಪ್ರಮುಖ ಆಟಗಾರರ ಮೇಲೆ ಮಾತ್ರ ಯಾವ ಎಫೆಕ್ಟ್ ಆಗಿಲ್ಲ.