ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ – ನಾಲ್ವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ – ನಾಲ್ವರು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಪೋಟ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇಂದಿರಾ ನಗರದ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ 10 ಸೆಕೆಂಡ್‌ ಅಂತರದಲ್ಲಿ 2 ಬಾರಿ ಬಾಂಬ್‌ ಸ್ಪೋಟಗೊಂಡಿತ್ತು. ಇದೀಗ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.ಗುಪ್ತಚರ ಇಲಾಖೆ ಅಧಿಕಾರಿಗಳು ನಾಲ್ವರ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಇನ್ನುಮುಂದೆ ಟ್ರಾಫಿಕ್​​ ರೂಲ್ಸ್​ ಬ್ರೇಕ್‌ ಮಾಡಿದ್ರೆ ದಂಡದ ಜೊತೆಗೆ ಬರಲಿದೆ ಕ್ಯೂಆರ್​​ ಕೋಡ್!

ಇನ್ನು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಪೊಲೀಸ್​ ಮಹಾ ನಿರ್ದೇಶಕ ಅಲೋಕ್​ ಮೋಹನ್​, ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿ ಹಲವರು ಭಾಗಿಯಾಗಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 9 ಜನರಿಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್​ ತಿಳಿಸಿದ್ದಾರೆ. ಸದ್ಯ ಯಾರ ಪ್ರಾಣಕ್ಕೂ ತೊಂದರೆ ಇಲ್ಲ. ಸ್ಥಳದಲ್ಲಿ ಬಾಂಬ್ ಸ್ಯಾಂಪಲ್‌ಗಳನ್ನು ಸಂಗ್ರಹ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಇಲಾಖೆಯ ವರದಿ ಬರುವ ತನಕ ಏನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅಬ್ದುಲ್​ ಕಲಾಂ ಅವರ ಸ್ಪೂರ್ತಿಯಿಂದ ತೆರೆದಂತಹ ರಾಮೇಶ್ವರಂ ಕೆಫೆ, ಭಾರತದಾದ್ಯಂತ ಬ್ರಾಂಚ್​ಗಳನ್ನ ಹೊಂದಿದೆ. ರಾಮೇಶ್ವರಂ ಕೆಫೆ ದೇಗುಲದ ಕಾನ್ಸೆಪ್ಟ್​ನಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲೂ ಹಲವು ಬ್ರಾಂಚ್​ಗಳಿದ್ದು, ಜನ ಸಾಮಾನ್ಯರ ಜೊತೆಗೆ ಐಟಿ ಸಿಬ್ಬಂದಿಯ ಹಾಟ್​ ಫೇವರೆಟ್ ಕೂಡ ಆಗಿದೆ. ಇಂತಹ ಕೆಫೆಯಲ್ಲಿ ಶುಕ್ರವಾರ(01) ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಬಾಂಬ್ ಬ್ಲಾಸ್ಟ್ ಆಗಿದೆ. ವಿವಿಧ ತನಿಖಾ ತಂಡಗಳು ರಾತ್ರಿಯೆಲ್ಲಾ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Shwetha M