ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಮುಕ್ಕಾಲು ಗಂಟೆಯಲ್ಲಿ ಬರೋಬ್ಬರಿ 10 ಬಸ್ಸಿನಲ್ಲಿ ಬಾಂಬ್ ಬ್ಲಾಸ್ಟರ್ ಸಂಚಾರ!
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡು 5 ದಿನಗಳೇ ಕಳೆದಿವೆ. ಪೊಲೀಸರು ಎಷ್ಟೇ ತನಿಖೆ ನಡೆಸಿದ್ರು ಆರೋಪಿಯ ಸುಳಿವು ಮಾತ್ರ ಸಿಗುತ್ತಿಲ್ಲ. ಆ ಖತರ್ನಾಕ್ನ ಪ್ಲಾನ್ಗೆ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ. ಬಾಂಬ್ ಇಡಲು ಐಟಿಪಿಎಲ್ ಬಸ್ಸಿನಲ್ಲಿ ಆಗಮಿಸಿದ್ದ ಬಾಂಬರ್ ಬಾಂಬ್ ಇಟ್ಟ ಬಳಿಕ ಬರೋಬ್ಬರಿ 10 ಬಿಎಂಟಿಸಿ ಬಸ್ಸಿನಲ್ಲಿ ಸಂಚಾರ ನಡೆಸಿದ್ದಾನೆ ಎಂಬ ಸ್ಫೋಟಕ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ.
ಮಾರ್ಚ್ 1 ರಂದು ಶುಕ್ರವಾರ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಈ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಪ್ರಕರಣದ ಆರೋಪಿ ಖತರ್ನಾಕ್ ಪ್ಲ್ಯಾನ್ ಮಾಡಿ ತೆರಳಿದ್ದಾನೆ. ಕಳೆದ ಶುಕ್ರವಾರ ಬೆಳಗ್ಗೆ ಐಟಿಪಿಎಲ್ನಿಂದ ಬಸ್ನಲ್ಲಿ ಆಗಮಿಸಿದ್ದ ಆತ ಬಸ್ಸು ಹತ್ತಿ ಇಳಿದು ಮತ್ತೆ ಹತ್ತಿ ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾನೆ ಎಂದು ಮೂಲಗಳು ಹೇಳುತ್ತಿವೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ನೀರಿನ ಸಮಸ್ಯೆ – ಬೆಂಗಳೂರಿನಲ್ಲಿ ಹೊಸ ನಿಯಮ, ಒಬ್ಬರಿಗೆ ಒಂದೇ ಕ್ಯಾನ್ ನೀರು!
ಕೆಫೆಯಿಂದ ತೆರಳಿದ ಬಳಿಕ ಕುಂದಲಹಳ್ಳಿ ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿ ಮುಂದಿನ ನಿಲ್ದಾಣದಲ್ಲಿ ಇಳಿದಿದ್ದಾನೆ. ಕೇವಲ ಮುಕ್ಕಾಲು ಗಂಟೆಯಲ್ಲೇ ಬರೋಬ್ಬರಿ 10 ಬಸ್ ಬದಲಾಯಿಸಿದ್ದಾನೆ. ಯಾವ ಬಸ್ಸು ಹತ್ತಬೇಕು? ಯಾವ ಬಸ್ಸಿನಲ್ಲಿ ಇಳಿಯಬೇಕು? ಮುಂದಿನ ನಿಲ್ದಾಣ ಯಾವುದು? ಎಲ್ಲ ವಿಚಾರಗಳು ಆತನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಹತ್ತು ಬಸ್ಸು ಬದಲಾಯಿಸಿದ್ದರಿಂದ ಆತ ಸ್ಥಳೀಯ ನಿವಾಸಿಯೇ ಆಗಿರಬೇಕು ಅಥವಾ ಹಲವು ಬಾರಿ ಈ ಜಾಗದಲ್ಲಿ ಆ ವ್ಯಕ್ತಿ ಓಡಾಡಿರಬಹುದು ಎಂಬ ಬಲವಾದ ಅನುಮಾನವನ್ನು ಪೊಲೀಸರು ಈಗ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಖತರ್ನಾಕ್ ಅನ್ನು ಪತ್ತೆ ಹಚ್ಚಲು ಪೊಲೀಸರು ರೂಟ್ ಮ್ಯಾಪಿಂಗ್ಗೆ ಇಳಿದಿದ್ದಾರೆ. ಶಂಕಿತ ಓಡಾಡಿದ ಅಷ್ಟೂ ಸಣ್ಣ ಸಣ್ಣ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮ್ಯಾಪ್ ಮಾಡಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ. ಮುಖ್ಯ ರಸ್ತೆಯಿಂದ ಸಣ್ಣ ರಸ್ತೆಯನ್ನು ಸಹ ಪೊಲೀಸರು ಕವರ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಕೆಫೆಗೆ ಬಾಂಬ್ ಇಟ್ಟ ಬಳಿಕ ಆರೋಪಿ ಕುಂದಲಹಳ್ಳಿಯಲ್ಲಿ ಬಸ್ ಹತ್ತಿ ಕಾಡುಗೋಡಿಯಲ್ಲಿ ಇಳಿದಿದ್ದಾನೆ. ಬಳಿಕ ಆತ ಎಲ್ಲಿಗೆ ಹೋದ ಎಂಬ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಹೀಗಾಗಿ ಕುಂದಲಹಳ್ಳಿ, ಕೆ.ಆರ್.ಪುರ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ, ಮಾರತ್ತಹಳ್ಳಿ, ಹೆಬ್ಬಾಳ ಹಾಗೂ ಎಚ್ಎಎಲ್ ಸೇರಿ ರಾಮೇಶ್ವರಂ ಕೆಫೆಗೆ ವ್ಯಾಪ್ತಿಯ 4-5 ಕಿ.ಮೀ. ಸುತ್ತಲಿನ ಮಾರ್ಗದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ.
ಇನ್ನು ಬಾಂಬರ್ ರಸ್ತೆಯಲ್ಲಿ ಬರುವಾಗ ಹೋಟೆಲ್ ಪ್ರವೇಶದ ವೇಳೆ, ಹೋಟೆಲ್ ಒಳಗಡೆ, ನಂತರ ಹೋಟೆಲಿನಿಂದ ತೆರಳುವಾಗ ಮೊಬೈಲಿನಲ್ಲಿ ಮಾತನಾಡಿಕೊಂಡು ಬಂದಿದ್ದಾನೆ. ಈತ ಮಾತನಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದಂತೆ ಪೊಲೀಸರು ಟವರ್ ಡಂಪ್ ಮಾಡಿ ಆ ಸಮಯದಲ್ಲಿ ಆ ಜಾಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್ಗಳನ್ನು ಪರೀಕ್ಷೆ ಮಾಡಿದ್ದಾರೆ. ಕೆಫೆಯ ಬಳಿ ಆ ಸಮಯದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಕರೆಗಳನ್ನು ಪರಿಶೀಲಿಸಿದ್ದಾರೆ. ಎಲ್ಲಾ ತನಿಖೆಯ ನಂತರ ಆತ ಸಿಮ್ ಸಕ್ರಿಯವಾಗಿರದ ಡಮ್ಮಿ ಮೊಬೈಲ್ ಫೋನ್ ಬಳಸಿದ್ದ ವಿಚಾರ ಗೊತ್ತಾಗಿದೆ.