ರಮೇಶ್ ಜಾರಕಿಹೊಳಿಯಿಂದ ಕೋಟಿ ಕೋಟಿ ಅವ್ಯವಹಾರ! – ಸರ್ಕಾರಕ್ಕೆ ಸುಳ್ಳು ಲೆಕ್ಕಪತ್ರ ಕೊಟ್ಟಿದ್ದರಾ ಮಾಜಿ ಸಚಿವ?

ರಮೇಶ್ ಜಾರಕಿಹೊಳಿಯಿಂದ ಕೋಟಿ ಕೋಟಿ ಅವ್ಯವಹಾರ! – ಸರ್ಕಾರಕ್ಕೆ ಸುಳ್ಳು ಲೆಕ್ಕಪತ್ರ ಕೊಟ್ಟಿದ್ದರಾ ಮಾಜಿ ಸಚಿವ?

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕಾನೂನು ಸಂಕಷ್ಟ ಮುಂದುವರಿದಿದೆ. ಸಕ್ಕರೆ ಕಾರ್ಖಾನೆಗೆ 232 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪದ ಅವರ ಮೇಲೆ ಕೇಸ್‌ ದಾಖಲಾದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ವಿರುದ್ಧ ಮತ್ತೊಂದು ಅವ್ಯವಹಾರದ ಆರೋಪ ಕೇಳಿಬಂದಿದೆ.

ಕಾಂಗ್ರೆಸ್ ಮುಖಂಡ ಡಾ.ಮಹಾಂತೇಶ್ ಕಡಾಡಿ ಅವರು ರಮೇಶ್‌ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಮೇಶ್‌ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯಲ್ಲಿ ಅವ್ಯವಹಾರ ನಡೆದಿದೆ. ಅಲ್ಲದೇ ಆದಾಯ ತೆರಿಗೆಯ ಬಗ್ಗೆ ಸರ್ಕಾರಕ್ಕೆ ಸುಳ್ಳು ಲೆಕ್ಕಪತ್ರ ಕೊಟ್ಟಿದ್ದಾರೆ. ಸಕ್ಕರೆ ಕಾರ್ಖಾನೆ ಚಾಲ್ತಿಯಲ್ಲಿ ಇದ್ದರೂ ಚಾಲ್ತಿಯಲ್ಲಿ ಇಲ್ಲ ಎಂದು ಸುಳ್ಳು ದಾಖಲೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಓಟಕ್ಕೆ ಬ್ರೇಕ್  ಹಾಕಲಿದ್ಯಾ ಸಿದ್ದು ಆಪ್ತ ಬಣ?  – ಸುರ್ಜೇವಾಲ ಮುಂದೆ 3 ಡಿಸಿಎಂ ಹುದ್ದೆ ಬೇಡಿಕೆ ಇಟ್ಟ ಪಕ್ಷದ ಹಲವು ನಾಯಕರು!

ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ಕಾರ್ಖಾನೆಗೆ 700 ಎಕರೆ ಜಮೀನು ಖರೀದಿಯಲ್ಲೂ ಅವ್ಯವಹಾರವಾಗಿದೆ. 3,500 ಟನ್ ಕ್ರಷಿಂಗ್ ಸಾಮಥ್ರ್ಯದ ಕಾರ್ಖಾನೆಗೆ 300ಕೋಟಿ ರೂ. ಹಣ ವೆಚ್ಚವಾಗುತ್ತದೆ. ಇದಕ್ಕೆ ಜಾರಕಿಹೊಳಿಯವರು 500ರಿಂದ 600 ಕೋಟಿ ರೂ. ಸಾಲ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕಾರ್ಖಾನೆಯಲ್ಲಿ ಡಿಸ್ಟಿಲರಿ ಮಾಡುವುದಾಗಿ 60ಕೋಟಿ ಸಾಲ ಪಡೆದಿದ್ದಾರೆ. ಡಿಸ್ಟಿಲರಿ ನಿರ್ಮಾಣ ಮಾಡಿಲ್ಲ. ಬಳಿಕ 2019ರಲ್ಲಿ ದಿವಾಳಿ ಆಗಿದೆಯೆಂದು ಎನ್‌ಸಿಇಆರ್‌ಟಿಗೆ ಮನವಿ ಮಾಡಿದ್ದಾರೆ. ಆಗ ಎನ್‌ಸಿಇಆರ್‌ಟಿ ಇದು ಲಾಭದಾಯಕವಲ್ಲ ಎಂದು ಹೇಳಿದೆ. 2021-22ರಲ್ಲಿ 5ಸಾವಿರ ಮೆಟ್ರಿಕ್ ಟನ್ ಕಬ್ಬಿನಿಂದ ಸಕ್ಕರೆ ಉತ್ಪಾದನೆ ಮಾಡಿದ್ದಾರೆ. ಕಾರ್ಖಾನೆಗೆ ಬರುವ ಲಾಭವನ್ನು ತಾವೇ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಪ್ರತಿ ಹಂತದಲ್ಲೂ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

435ಕೋಟಿ ರೂ. ಹಣವನ್ನು ಡಿಸಿಸಿ ಬ್ಯಾಂಕ್‍ನಲ್ಲಿ ರಮೇಶ್ ಜಾರಕಿಹೊಳಿ ಸಾಲ ಮಾಡಿದ್ದಾರೆ. ಐಡಿಬಿಐ ಬ್ಯಾಂಕ್, ಅರಿಹಂತ ಭೀರೆಶ್ವರ ಬ್ಯಾಂಕ್, ಎಸ್.ಬಿಐ ಬ್ಯಾಂಕ್‍ನಲ್ಲಿ ಒಟ್ಟಾರೆ 1ಸಾವಿರ ಕೋಟಿ ರೂ. ಸಾಲ ಇದೆ. ಈ ಸಾಲವನ್ನು ಮನ್ನಾ ಮಾಡಲು ದಿವಾಳಿತನ ಘೋಷಣೆ ಮಾಡಿಕೊಂಡಿದ್ದಾರೆ. ದಿವಾಳಿತನ ಘೋಷಣೆ ಮಾಡಿ ಕುಟುಂಬಸ್ಥರಿಗೆ ಮಾರಾಟ ಮಾಡಿದ್ದಾರೆ. ಈ ಮೂಲಕ ಸಾವಿರ ಕೋಟಿ ರೂ. ಹಣವನ್ನು ಮುಳುಗಿಸಲು ಪ್ಲ್ಯಾನ್ ಮಾಡಿದ್ದಾರೆ. ಇದರಲ್ಲಿ ನೇರವಾಗಿ ಕೇಂದ್ರದ ಬಿಜೆಪಿ ಸರ್ಕಾರ ಭಾಗಿಯಾಗಿದೆ. ಹೀಗಾಗಿ ಸೌಭಾಗ್ಯಲಕ್ಷ್ಮೀ ಕಾರ್ಖಾನೆ ವಿರುದ್ಧ ಸಿಬಿಐ ಅಥವಾ ಸಿಓಡಿ ತನಿಖೆ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Shwetha M