‘ಆದಿಪುರುಷ್’ ಸಿನಿಮಾಗೆ ಪೌರಾಣಿಕ ಧಾರಾವಾಹಿಯ ಟಕ್ಕರ್- ದೂರದರ್ಶನದಲ್ಲಿ ಮತ್ತೆ ಬರಲಿದೆ ‘ರಾಮಾಯಣ’..!
ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ‘ಆದಿಪುರುಷ್’ ಸಿನಿಮಾ ನೋಡಿದವರಿಗೆ ಭಕ್ತಿಯ ಕಥೆಯಾದ ‘ರಾಮಾಯಣ’ದ ಮೂಲಕಥೆಯೇ ಮರೆತುಹೋದರೂ ಆಶ್ಚರ್ಯವಿಲ್ಲ ಬಿಡಿ. ‘ಆದಿಪುರುಷ್’ ಸಿನಿಮಾದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ರಾವಣ ಎಲ್ಲಾ ಪಾತ್ರಗಳು ಬರುತ್ತವೆ. ಆದರೆ, ಆ ಪಾತ್ರಗಳನ್ನು ನೋಡಿದರೆ, ಭಕ್ತರ ಮನಸಿನಲ್ಲಿ ನೆಲೆ ನಿಂತಿರುವ ರಾಮ, ಸೀತೆ, ಲಕ್ಷ್ಣಣ ಹೀಗೂ ಇದ್ದಿರಬಹುದಾ ಅನ್ನೋ ರೀತಿ ಬೇಸರವಾಗುತ್ತದೆ. ರಾವಣನ ಪಾತ್ರವಂತೂ ನಗಬೇಕೋ, ಅಳಬೇಕೋ ಅನ್ನೋ ರೀತಿಯಲ್ಲಿ ಮೂಡಿಬಂದಿದೆ. ಲಂಕೆಯಲ್ಲಿರುವ ರಾಕ್ಷಸರಂತೂ ಅನ್ಯಗ್ರಹ ಜೀವಿಗಳಂತೆ ತೋರಿಸಿರುವುದು ನೋಡಿ ಆದಿಪುರುಷ್ ಸಿನಿಮಾದ ಮೇಲೆ ಸಾಕಷ್ಟು ನೆಗೆಟಿವ್ ಕಾಮೆಂಟ್ಸ್ ಸಿಕ್ಕಿದೆ. ರಾಮಾಯಣ ಕಥೆಯಾಧಾರಿತ ಸಿನಿಮಾ ಹಾಗೂ ಸೀರಿಯಲ್ ಕಥೆಗಳು ಕೂಡಾ ಈ ಹಿಂದೆ ಸಾಕಷ್ಟು ಬಂದಿವೆ. ಜೊತೆಗೆ ಪ್ರಸಾರವಾಗಿವೆ. ಆದರೆ ಆದಿಪುರುಷ್ ಸಿನಿಮಾ ಮಾತ್ರ ರಾಮಾಯಣದ ಕಥೆಯನ್ನೇ ತಿರುಚಿರುವ ಆರೋಪಕ್ಕೆ ಗುರಿಯಾಗಿದೆ. ಅಷ್ಟೇ ಅಲ್ಲ ಕೆಲ ಪಾತ್ರಧಾರಿಗಳ ನಿಜಕ್ಕೂ ವಿಚಿತ್ರವಾಗಿವೆ. ಈ ವಿವಾದಗಳು, ಚರ್ಚೆಗಳ ನಡುವೆಯೇ ಆದಿಪುರುಷ್ ಸಿನಿಮಾಗೆ ಟಕ್ಕರ್ ಕೊಡುವ ಹಾಗೆ ಎವರ್‌ಗ್ರೀನ್ ಧಾರಾವಾಹಿ, ಅಭಿಮಾನಿಗಳ ನೆಚ್ಚಿನ ರಾಮಾಯಣ, ದೂರದರ್ಶನದಲ್ಲಿ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಆದಿಪುರುಷ್ ಸಿನಿಮಾದ ಗ್ರಾಫಿಕ್ಸ್ ನೋಡಿ ಸಿಟ್ಟಿಗೆದ್ದ ಫ್ಯಾನ್ಸ್ – ರಾವಣನ ಹತ್ತು ತಲೆ ನೋಡಿ ಅಭಿಮಾನಿಗಳು ಹೇಳಿದ್ದೇನು?
ಆದಿಪುರುಷ್ ಚಿತ್ರದ ವಿರುದ್ಧ ದೇಶ, ವಿದೇಶಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಿರುವಾಗಲೇ 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರದರ್ಶನಗೊಂಡಿದ್ದ ಖ್ಯಾತ ನಿರ್ದೇಶಕ ರಮಾನಂದ ಸಾಗರ್ ಅವರ ‘ರಾಮಾಯಣ’ ಧಾರಾವಾಹಿ ಒಟಿಟಿ ಹಾಗೂ ಚಾನೆಲ್ ಮೂಲಕ ಪ್ರಸಾರ ಮಾಡಲು ಶೆಮಾರೂ ಸಂಸ್ಥೆ ಸಿದ್ಧತೆ ನಡೆಸಿದೆ. ಇದೇ ಜುಲೈ 3ರಿಂದ ರಾಮಾಯಣ ಧಾರಾವಾಹಿ ಪ್ರಸಾರವಾಗಲಿದೆ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಲಿಯಾ ಹಾಗೂ ಲಕ್ಷ್ಮಣನಾಗಿ ಸುನೀಲ್ ಲಹ್ರಿ ಅವರು ಅಭಿನಯಿಸಿದ್ದಾರೆ. ಜುಲೈ 3ರಿಂದ ನಿತ್ಯ ಸಂಜೆ 7.30ಕ್ಕೆ ರಾಮಾಯಣ ಪ್ರಸಾರವಾಗಲಿದೆ ಎಂದು ಶೆಮಾರೂ ಹೇಳಿದೆ. ದೂರದರ್ಶನದಲ್ಲಿ ಪ್ರಥಮ ಬಾರಿಗೆ ಧಾರಾವಾಹಿ ರೂಪದಲ್ಲಿ ಪ್ರಸಾರವಾದ ರಾಮಾಯಣವನ್ನು ಮರು ಪ್ರಸಾರ ಮಾಡುತ್ತಿರುವ ವಿಷಯವನ್ನು ಶೆಮಾರೂ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಆದಿಪುರುಷ್ ರಿಲೀಸ್ ಆದಾಗಿಂದನೂ ರಮಾನಂದ್ ಸಾಗರ್ ಅವರ ರಾಮಾಯಣ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜನರು ರಾಮಾಯಣ ಧಾರಾವಾಹಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಆದಿಪುರುಷ್ ಸಿನಿಮಾವನ್ನು ತರಾಟೆ ತೆಗೆದುಕೊಂಡಿದ್ದರು. ರಾಮ ಹಾಗೂ ಸೀತೆ ಹೇಗಿರಬೇಕೆಂದು ರಾಮಾಯಣ ನೋಡಿ ಕಲಿಯಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದರು. ನಿರ್ದೇಶಕ ಓಂ ರಾವತ್ ರಾಮಾಯಣ ನೋಡಿ ಕಲಿಯಬೇಕು ಎಂದು ಕ್ಲಾಸ್ ತೆಗೆದುಕೊಂಡಿದ್ದರು. ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕೆಲವು ಕಲಾವಿದರೂ ಕೂಡ ಆದಿಪುರುಷ್ ಬಗ್ಗೆ ಬೇಸರ ಹೊರಹಾಕಿದ್ದರು. ಆದಿಪುರುಷ್ ವಿವಾದದ ಬೆನ್ನಲ್ಲೇ ಈಗ ರಾಮಾಯಣ ಧಾರಾವಾಹಿ ನೋಡುವ ಅವಕಾಶ ವೀಕ್ಷಕರಿಗೆ ಸಿಗಲಿದೆ. ‘ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ‘ ಎಂದು ಈಗಾಗಲೇ ಪ್ರೋಮೊ ರಿಲೀಸ್ ಮಾಡಲಾಗಿದೆ.