2 ಕೆಜಿ ಬೆಳ್ಳಿ.. 5,000 ಅಮೆರಿಕನ್ ವಜ್ರಗಳು – ರಾಮಮಂದಿರ ಮಾದರಿಯಲ್ಲೇ ತಯಾರಾಯ್ತು ಅಪರೂಪದ ಹಾರ
ದೇಶದ ತುಂಬೆಲ್ಲಾ ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಜಪ ಜೋರಾಗಿದೆ. ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಉದ್ಘಾಟನೆಗೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ರಾಮಮಂದಿರಕ್ಕೆ ಹಲವರು ವಿಶೇಷ ರೀತಿಯ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಈಗಾಗಲೇ ಘಂಟೆ, ಬಾಗಿಲು, ಕೀ ಸೇರಿದಂತೆ ವಿಭಿನ್ನ ರೀತಿಯಲ್ಲಿ ಕೆಲವರು ಉಡುಗೊರೆಗಳನ್ನು ನೀಡಿದ್ದಾರೆ. ಇದೀಗ ಅತ್ಯುತ್ತಮ ಕರಕುಶಲತೆಯ ಪ್ರದರ್ಶನದಲ್ಲಿ, ವಜ್ರದ ವ್ಯಾಪಾರಿಯೊಬ್ಬರು 5,000ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಬಳಸಿ ರಾಮಮಂದಿರದ ಥೀಮ್‌ನಲ್ಲಿ ಹಾರವನ್ನು ಮಾಡಿರುವುದು ಎಲ್ಲರ ಗಮನ ಸೆಳೀತಿದೆ. ಸೂರತ್ ಮೂಲದ ವಜ್ರದ ವ್ಯಾಪಾರಿಯೊಬ್ಬರು ರಾಮಮಂದಿರದ ಥೀಮ್‌ನಲ್ಲಿ ಹಾರವನ್ನು ಸಿದ್ಧಪಡಿಸಿದ್ದಾರೆ. ಅದನ್ನು ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ. 5,000 ಕ್ಕೂ ಹೆಚ್ಚು ಅಮೆರಿಕನ್ ವಜ್ರಗಳನ್ನು ಹಾರ ತಯಾರಿಕೆಗೆ ಬಳಸಲಾಗಿದೆ. ಹಾಗೇ 2 ಕೆಜಿ ಬೆಳ್ಳಿಯಿಂದ ಮಾಡಲಾಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಿಂದ ನಾವು ಸ್ಫೂರ್ತಿ ಪಡೆದು ಇದನ್ನು ತಯಾರಿಸಿದ್ದೇವೆ ಎಂದು ವ್ಯಾಪಾರಿ ಹೇಳಿದ್ದಾರೆ. ಅಲ್ಲದೆ ಇದು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಸಿದ್ಧಪಡಿಸಿರುವ ಹಾರ ಅಲ್ಲ, ನಾವು ಇದನ್ನು ರಾಮ ಮಂದಿರಕ್ಕೆ ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ರಾಮ ಮಂದಿರಕ್ಕೆ ಏನನ್ನಾದರೂ ಉಡುಗೊರೆಯಾಗಿ ನೀಡಬೇಕೆಂಬ ಉದ್ದೇಶದಿಂದ ನಾವು ಈ ಅಪರೂಪದ ಹಾರವನ್ನು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ₹12 ಲಕ್ಷ ಖರ್ಚು ಮಾಡಿ ಶ್ವಾನದಂತೆ ಬದಲಾದ – ನಾಯಿಯಂತೆ ಬದಲಾದ ಮೇಲೆ ಆತನ ಪಾಡು ಅಯ್ಯೋಪಾಪ
ಇನ್ನು ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳನ್ನು ಹಾರದ ದಾರದಲ್ಲಿ ಕೆತ್ತಲಾಗಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಂದಿನ ವರ್ಷ ಜನವರಿ 16ರಂದು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಪ್ರಾರಂಭವಾಗುತ್ತವೆ. ವಾರಣಾಸಿಯ ವೈದಿಕ ಪುರೋಹಿತರಾದ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಜನವರಿ 22ರಂದು ರಾಮ್ ಲಲ್ಲಾನ ಮಹಾಮಸ್ತಕಾಭಿಷೇಕದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜನವರಿ 14 ರಿಂದ ಜನವರಿ 22ರ ವರೆಗೆ ಅಯೋಧ್ಯೆಯು ಅಮೃತ ಮಹೋತ್ಸವ ನಡೆಯಲಿದೆ. 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಪ್ರಕಾರ, 10,000-15,000 ಜನರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದುಬಂದಿದೆ. ಇನ್ನು ಆಗಸ್ಟ್ 5, 2020 ರಂದು, ಪ್ರಧಾನಿ ಮೋದಿ ಅವರು ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ರಾಮ ಮಂದಿರದ ಸಮೀಪವಿರುವ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ಗಣೇಶ ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ನಿರ್ಮಿಸಲಾಗುತ್ತಿದೆ.