ಮೈಸೂರು ಕೃಷ್ಣಶಿಲೆ..ಕನ್ನಡದ ಕೈ! – ರಾಮಲಲ್ಲಾ ಆಯ್ಕೆ ಹೇಗಾಯ್ತು?

ಮೈಸೂರು ಕೃಷ್ಣಶಿಲೆ..ಕನ್ನಡದ ಕೈ! – ರಾಮಲಲ್ಲಾ ಆಯ್ಕೆ ಹೇಗಾಯ್ತು?

ಇಡೀ ದೇಶ ಜನವರಿ 22ರ ಐತಿಹಾಸಿಕ ದಿನಕ್ಕಾಗಿ ಕಾಯ್ತಾ ಇದೆ. ಕೋಟ್ಯಂತರ ಭಕ್ತರು ರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಎದುರು ನೋಡ್ತಾ ಇದ್ದಾರೆ. ಜನವರಿ 23ರ ಬಳಿಕ ರಾಮನ ದರ್ಶನಕ್ಕೆ ನಿತ್ಯವೂ ಲಕ್ಷಾಂತರ ಜನರು ತೆರಳಲಿದ್ದಾರೆ. ಅದ್ರಲ್ಲೂ ಅಯೋಧ್ಯೆಗೆ ತೆರಳುವ ಕನ್ನಡಿಗರಿಗಂತೂ ರಾಮನ ದರ್ಶನ ಜೀವನದಲ್ಲಿ ಎಂದೂ ಮರೆಯೋಕೆ ಆಗದಂಥಾ ಕ್ಷಣವಾಗಲಿದೆ. ಉಳಿದೆಲ್ಲಾ ರಾಜ್ಯದ ಜನರಿಗಿಂತಲೂ ಕನ್ನಡಿಗರಿಗೆ ಅಯೋಧ್ಯೆಯಲ್ಲಿ ರಾಮನ ದರ್ಶನ ನಿಜಕ್ಕೂ ತುಂಬಾ ಸ್ಪೆಷಲ್ ಆಗಿರಲಿದೆ. ಅದಕ್ಕೆ ಕಾರಣ ರಾಮ ಲಲ್ಲಾನ ಮೂರ್ತಿಯ ನಿರ್ಮಾಣವಾಗಿರೋದು ಕನ್ನಡದ ನೆಲದ ಕಲ್ಲಿನಿಂದಲೇ. ಮೂರ್ತಿಯನ್ನ ಕೆತ್ತನೆ ಮಾಡಿರೋದು ಕೂಡ ಕನ್ನಡಿಗನೇ. ಇವತ್ತಿನ ಈ ಎಪಿಸೋಡ್​​ನಲ್ಲಿ ರಾಮನ ಮೂರ್ತಿ ಕೆತ್ತಿದ ಕನ್ನಡಿಗನ ಬಗ್ಗೆ ಮತ್ತು ಯಾಕೆ ಇದೇ ಮೂರ್ತಿಯನ್ನ ಪ್ರತಿಷ್ಠಾನೆಗೆ ಆಯ್ಕೆ ಮಾಡಲಾಗಿದೆ? ಆಯ್ಕೆ ಪ್ರಕ್ರಿಯೆ ಹೇಗಿತ್ತು? ಮೂರ್ತಿ ಕೆತ್ತನೆ ಎಷ್ಟು ಸವಾಲಿನಿಂದ ಕೂಡಿತ್ತು? ಏನೆಲ್ಲಾ ಮಾನದಂಡಗಳಿದ್ದವು? ಯಾಕೆ ಕನ್ನಡಿಗ ನಿರ್ಮಿಸಿದ ರಾಮಲಲ್ಲಾನಿಗೇ ಪಟ್ಟಾಭಿಷೇಕ ಮಾಡೋಕೆ ನಿರ್ಧರಿಸಲಾಗಿದೆ? ಇವೆಲ್ಲದರ ಬಗ್ಗೆಯೂ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ರೈಲಿನ ಬೋಗಿಯಲ್ಲಿ ನೇತಾಡಿದ್ರೆ ಹುಷಾರ್‌! – ಒಳಗೆ ಹೋಗಿ ಅಂತಾ ಪ್ರಯಾಣಿಕರಿಗೆ ನಿಯಮ ಹೇಳಿಕೊಡುತ್ತೆ ಈ ಶ್ವಾನ!

ಅಯೋಧ್ಯೆಗೆ ಹೋಗಬೇಕು.. ರಾಮಮಂದಿರಕ್ಕೆ ಭೇಟಿ ನೀಡಬೇಕು.. ರಾಮ ಲಲ್ಲಾನನ್ನ ಕಣ್ತುಂಬಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಹಿಂದೂವಿನ ಕನಸು. ಇದ್ರ ಜೊತೆಗೆ ಅಯೋಧ್ಯೆಗೆ ತೆರಳೋ ಎಲ್ಲಾ ರಾಜ್ಯಗಳ ಭಕ್ತರ ಮನಸ್ಸಲ್ಲೂ ಒಂದು ಪ್ರಶ್ನೆ ಇದ್ದೇ ಇರುತ್ತೆ. ನಮ್ಮ ರಾಜ್ಯದ ಯಾವ ವಸ್ತು ರಾಮಮಂದಿರ ನಿರ್ಮಾಣದಲ್ಲಿ ಬಳಕೆಯಾಗಿದೆ. ಐತಿಹಾಸಿಕ ದೇಗುಲಕ್ಕೆ ನಮ್ಮ ರಾಜ್ಯದ ಕೊಡುಗೆ ಏನು ಅನ್ನೋ ಭಾವನೆ ಎಲ್ಲರ ಮನಸ್ಸಲ್ಲೂ ಇದ್ದೇ ಇರುತ್ತೆ. ದೇಶಾದ್ಯಂತ ಎಲ್ಲಾ ರಾಜ್ಯಗಳಿಂದಲೂ ಒಂದಲ್ಲಾ ಒಂದು ಸಾಮಗ್ರಿಯನ್ನ ಮಂದಿರ ನಿರ್ಮಾಣದಲ್ಲಿ ಬಳಸಲಾಗಿದೆ. ಆದ್ರೆ ಈ ವಿಚಾರದಲ್ಲಿ ನಾವು ಕನ್ನಡಿಗರು ಮಾತ್ರ ನಿಜಕ್ಕೂ ಪುಣ್ಯವಂತರು..ಅದೃಷ್ಟವಂತರು. ನಿಮಗೆ ಗೊತ್ತಿರೋ ಹಾಗೆ ರಾಮಮಂದಿರದಲ್ಲಿ ವಿರಾಜಮಾನವಾಗ್ತಿರೋ ರಾಮಲಲ್ಲಾನ ಮೂರ್ತಿ ನಿರ್ಮಾಣಗೊಂಡಿದ್ದೇ ಕನ್ನಡದ ಕಲ್ಲಿನಿಂದ..ಕನ್ನಡಿಗನ ಕೈಯಿಂದ. ಅರುಣ್ ಯೋಗಿರಾಜ್.. ಮೈಸೂರು ಮೂಲದ ಅರುಣ್ ಯೋಗಿರಾಜ್ ಭಾರತದ ಅತ್ಯುತ್ತಮ್ಮ ಶಿಲ್ಪಕಲಾಕಾರರಲ್ಲಿ ಒಬ್ಬರು. ಕಳೆದ ಹಲವು ದಶಕಗಳಿಂದ ಯೋಗರಾಜ್ ಕುಟುಂಬ ಮೂರ್ತಿ ವಿನ್ಯಾಸದಲ್ಲಿ ತೊಡಗಿದೆ. ಅರುಣ್ ತಂದೆ ಯೋಗಿರಾಜ್ ಮತ್ತು ತಾತ ಬಸವಣ್ಣ ಶಿಲ್ಪಿ ಕೂಡ ಶಿಲ್ಪಕಲೆಯಲ್ಲೇ ತಮ್ಮನ್ನ ತಾವು ತೊಡಗಿಸಿಕೊಂಡಿದ್ರು. ಹೀಗಾಗಿ ಮೂರ್ತಿ ಕೆತ್ತನೆ ಅನ್ನೋದು ಅರುಣ್ ಯೋಗಿರಾಜ್ ಅವರಿಗೆ ರಕ್ತದಲ್ಲೇ ಬಂದಂತಾ ಕಲೆ. 11ನೇ ವಯಸ್ಸಿಗೇ ಅರುಣ್ ಅವರು ಮೂರ್ತಿ ಕೆತ್ತನೆಯನ್ನ ಆರಂಭಿಸಿದ್ರು. ಎಂಬಿಎ ಓದಿದ್ದ ಅರುಣ್ ಯೋಗಿರಾಜ್ ಕೆಲ ಕಾಲ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ರು. ಆದ್ರೆ ಶಿಲ್ಪಕಲೆ ಅನ್ನೋದುಅರುಣ್ ಯೋಗಿರಾಜ್​​ರನ್ನ ಸೆಳೆಯುತ್ತಲೇ ಇತ್ತು. ರಕ್ತದಲ್ಲೇ ಬಂದಿರೋ ಕಾರಣ ಕಲೆ ನಂಟು ಬಿಟ್ಟಿರೋಕೆ ಹೇಗೆ ಸಾಧ್ಯ ಹೇಳಿಕೆ. ತಮ್ಮ ತಂದೆ, ಅಜ್ಜ ಮಾಡಿದ ವೃತ್ತಿಯನ್ನ, ಅವರು ಮಾಡಿಕೊಟ್ಟ ಮಾರ್ಗವನ್ನ ಮುಂದುವರಿಸಬೇಕು ಅನ್ನೋದು ಅರುಣ್ ಯೋಗಿರಾಜ್ ​ರ ಅಂತಿಮ ಗುರಿಯಾಗಿತ್ತು. ಆದ್ರೆ ಈ ಉದ್ಯೋಗ ಬಿಟ್ಟು ಶಿಲ್ಪಕಲೆಗೆ ಇಳಿಯೋದು ಅರುಣ್ ಅವರಿಗೆ ಸುಲಭ ಇರಲಿಲ್ಲ. ಯಾಕಂದ್ರೆ ಫುಲ್​ಟೈಮ್ ಮೂರ್ತಿಕೆತ್ತನೆಗೆ ಇಳಿಯೋಕೆ ಅರುಣ್ ತಾಯಿ ಒಪ್ಪಿರಲಿಲ್ಲ. ಆದ್ರೆ ತಂದೆ ಮಗನ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದ್ರು. ಅದಕ್ಕೆ ಸರಿಯಾಗಿ 2014ರಲ್ಲಿ ದಕ್ಷಿಣ ಭಾರತದ ಯಂಗ್ ಟ್ಯಾಲೆಂಟ್ ಪ್ರಶಸ್ತಿ ಕೂಡ ಅರುಣ್ ಅವರಿಗೆ ಸಿಕ್ಕಿತ್ತು. ಇದ್ರಿಂದಾಗಿ ತಾಯಿಯನ್ನ ಮನವೊಲಿಸುವಲ್ಲಿ ಅರುಣ್ ಯಶಸ್ವಿಯಾಗಿದ್ರು.. ಡೆಸ್ಟಿನಿ ಅನ್ನೋದು ಯಾರನ್ನ ಎಲ್ಲಿಗೆ ತಲುಪಿಸಬೇಕೋ ಅಲ್ಲಿಗೇ ತೆಗೆದುಕೊಂಡು ಹೋಗುತ್ತೆ. ಅದ್ರಂತೆ ಅರುಣ್ ಯೋಗಿರಾಜ್ ಶಿಲ್ಪಕಲೆಯನ್ನೇ ತಮ್ಮ ಪ್ರಮುಖ ಉದ್ಯೋಗವಾಗಿ ಮಾಡಿಕೊಂಡ್ರು. ಪ್ಯಾಶನ್​​ನನ್ನೇ ಪ್ರೊಫೆಶನ್​ನ್ನಾಗಿಸಿಕೊಂಡ್ರು. ಅರುಣ್ ಅರುಣ್ ಯೋಗಿರಾಜ್ ವೃತ್ತಿಗೆ ಟರ್ನಿಂಗ್ ಪಾಯಿಂಟ್ ಕೊಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್​ಚಂದ್ರಬೋಸ್ ಪ್ರತಿಮೆ. ದೆಹಲಿಯ ಇಂಡಿಯಾ ಗೇಟ್​​ನಲ್ಲಿ ಅಮರ್ ಜವಾನ್ ಜ್ಯೋತಿ ಬಳಿ ಸ್ಥಾಪನೆ ಮಾಡಲಾಗಿರೋ ಸುಭಾಷ್​ಚಂದ್ರ ಬೋಸ್​ರ 30 ಅಡಿ ಎತ್ತರದ ಪ್ರತಿಮೆಯನ್ನ ಕೂಡ ನಿರ್ಮಾಣ ಮಾಡಿರೋದು ಇದೇ ಅರುಣ್ ಯೋಗಿರಾಜ್. ಅವರ ಕಲೆಗೆ ಪ್ರಧಾನಿ ಮೋದಿ ಕೂಡ ಮಾರು ಹೋಗಿದ್ರು. ಪ್ರಧಾನಿ ಮೋದಿಗೂ ಸುಭಾಷ್​ಚಂದ್ರ ಬೋಸ್​ರ ಮೂರ್ತಿಯನ್ನ ಉಡುಗೊರೆಯಾಗಿ ನೀಡಿದ್ರು.

ಇನ್ನು ಕೇದಾರನಾಥದಲ್ಲಿರುವ 12 ಅಡಿ ಎತ್ತರದ ಆದಿಶಂಕರಾಚಾರ್ಯರ ಪ್ರತಿಮೆಯನ್ನ ಕೂಡ ನಿರ್ಮಾಣ ಮಾಡಿರೋದು ಅರುಣ್ ಯೋಗಿರಾಜ್. ಮೈಸೂರಿನಲ್ಲಿ ಚುಂಚನಕಟ್ಟೆಯಲ್ಲಿರುವ 21 ಅಡಿ ಎತ್ತರದ ಹನುಮನ ಪ್ರತಿಮೆ ಕೂಡ ಅರುಣ್ ಯೋಗಿರಾಜ್​ ಕೈಯಲ್ಲೇ ಮೂಡಿ ಬಂದಿರೋದು. ಹಾಗೆಯೇ 15 ಅಡಿ ಎತ್ತರದ ಡಾ.ಬಿ.ಆರ್​.ಅಂಬೇಡ್ಕರ್ ಪ್ರತಿಮೆಯನ್ನ ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದ್ರು.

ರಾಮಲಲ್ಲಾ ಮೂರ್ತಿ ಅಂತಿಮ ಆಯ್ಕೆಯಾಗಿದ್ದು ಹೇಗೆ?

ಈಗ ಅರುಣ್ ಯೋಗಿರಾಜ್ ನಿರ್ಮಿಸಿರೋ ರಾಮಲಲ್ಲಾ ಮೂರ್ತಿಯನ್ನ ಆಯ್ಕೆ ಮಾಡೋಕೆ ಕಾರಣ ಏನು? ಆಯ್ಕೆ ಪ್ರಕ್ರಿಯೆ ಹೇಗಿತ್ತು ಅನ್ನೋದು ಕೂಡ ತುಂಬಾ ಕುತೂಹಲದ ವಿಚಾರ. ಅಯೋಧ್ಯೆ ರಾಮಮಂದಿರಕ್ಕಾಗಿ 51 ಇಂಚು ಎತ್ತರದ ರಾಮಲಲ್ಲಾ ಮೂರ್ತಿ ನಿರ್ಮಾಣಕ್ಕೆ ಟ್ರಸ್ಟ್ ಕರೆ ಕೊಟ್ಟಿತ್ತು. ದೇಶದ ವಿವಿಧ ಮೂರ್ತಿ ವಿನ್ಯಾಸಕಾರರು ರಾಮಲಲ್ಲಾ ಮೂರ್ತಿಯನ್ನ ಸಿದ್ಧಪಡಿಸಿ ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ರು. ಈ ಪೈಕಿ ಅಂತಿಮ ಮೂರು ಪುತ್ಥಳಿಗಳನ್ನ ಆಯ್ಕೆ ಮಾಡಲಾಗಿತ್ತು. ಈ ಮೂರು ಪುತ್ಥಳಿಗಳ ಪೈಕಿ ಕನ್ನಡಿಗ ಅರುಣ್ ಯೋಗಿರಾಜ್ ನಿರ್ಮಾಣ ಮಾಡಿದ ಪುತ್ಥಳಿ ಕೂಡ ಇತ್ತು. ಇನ್ನು ಪ್ರಾಣ ಪ್ರತಿಷ್ಠಾಪನೆಯಾಗಲಿರುವ ಮೂರ್ತಿ ಆಯ್ಕೆಗೂ ಒಂದಷ್ಟು ಮಾನದಂಡಗಳಿದ್ದವು. ಕಮಲದ ದಳಗಳನ್ನ ನೆನಪಿಸುವಂಥಾ ಕಣ್ಣುಗಳು. ಬೆಳದಿಂಗಳ ಕಾಂತಿಯುತ ಮುಖ. ಮೊಣಕಾಲುಗಳಿಗೆ ವಿಸ್ತರಿಸುವಂತಾ ಉದ್ದನೆಯ ತೋಳುಗಳು, ಮಂದಹಾಸದಿಂದ ನಗುವಂತಾ ತುಟಿ, ಮಾತನಾಡುವಂತಾ ಕಣ್ಣುಗಳು, ಅಂತರ್ಗತವಾಗಿ ದೈವಿಕವಾಗಿ ಸೆಳೆಯುವಂತಾ ಬಾಲ ರಾಮನ ಮುಖಚರ್ಯೆ ಮೂರ್ತಿಗೆ ಇರಬೇಕಿತ್ತು. ಅಷ್ಟೇ ಅಲ್ಲ, ಕನಿಷ್ಠ ಒಂದು ಸಾವಿರ ವರ್ಷಗಳ ಕಾಲ ಬಾಳಿಕೆ ಬರುವಂತಾ ಮೂರ್ತಿಯಾಗಿರಬೇಕಿತ್ತು. ಇವೆಲ್ಲವನ್ನೂ ಮನಸ್ಸಲ್ಲಿಟ್ಟುಕೊಂಡೇ ಅರುಣ್ ಯೋಗಿರಾಜ್ ಸುಮಾರು ಏಳು ತಿಂಗಳ ಹಿಂದೆ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ರು. ಮೂರ್ತಿಯನ್ನ ನೋಡಿದ ಕೂಡಲೇ ಜನರಿಗೆ ದೈವತ್ವದ ಭಾವನೆ ಬರಬೇಕು ಅನ್ನೋದು ಅಅರುಣ್ ಯೋಗಿರಾಜ್ ​​ರ ಗುರಿಯಾಗಿತ್ತು. ಸುಮಾರು ತಿಂಗಳು ಶ್ರದ್ಧೆಯಿಂದ, ಭಕ್ತಿಯಿಂದ ಇನ್ಯಾವುದೇ ಕೆತ್ತನೆಗಳನ್ನ ಮಾಡದೆ ರಾಮಲಲ್ಲಾನ ಮೂರ್ತಿ ನಿರ್ಮಾಣದಲ್ಲೇ ಅರುಣ್ ಯೋಗಿರಾಜ್ ​ ತಮ್ಮನ್ನ ತಾವು ಸಮರ್ಪಿಸಿಕೊಂಡಿದ್ರು. 24 ಗಂಟೆಯೂ ಮೂರ್ತಿ ಕೆತ್ತನೆಯಲ್ಲೇ ತೋಡಗಿದ್ರಂತೆ. ವಾರಕ್ಕೆ 2 ದಿನವಷ್ಟೇ ಮನೆಗೆ ಬರ್ತಿದ್ರಂತೆ. ಕೆಲವೊಮ್ಮೆ ವಾರಪೂರ್ತಿ ಮೂರ್ತಿ ಕೆತ್ತನೆ ಮಾಡುವ ಸ್ಥಳದಲ್ಲೇ ಉಳಿದುಕೊಳ್ತಿದ್ರಂತೆ. ಇಷ್ಟೆಲ್ಲಾ ಶ್ರಮಪಟ್ಟು, 7 ತಿಂಗಳುಗಳ ಕಾಲ ರಾಮಲಲ್ಲಾನ ಮೂರ್ತಿಯನ್ನ ಕೆತ್ತಿ ನಂತರ ಅಯೋಧ್ಯೆಗೆ ಖುದ್ದು ಅರುಣ್​ ಯೋಗರಾಜ್ ತೆಗೆದುಕೊಂಡು ಹೋಗಿದ್ರು. ಕೊನೆಗೆ ಒಟ್ಟು ಮೂರು ಪುತ್ಥಳಿಗಳನ್ನ ಮುಂದಿಟ್ಟುಕೊಂಡು ಪ್ರಾಣಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯ ಆಯ್ಕೆಗೆ ರಾಮಮಂದಿರ ಟ್ರಸ್ಟ್ ಮುಂದಾಗಿತ್ತು. ಡಿಸೆಂಬರ್​ 29ರಂದು ಒಟ್ಟು ಮೂರು ಪುತ್ಥಳಿಗಳ ಮೇಲೆ ವೋಟಿಂಗ್ ನಡೆಸಲಾಗಿತ್ತು. ಅಂತಿಮವಾಗಿ ಅರುಣ್ ಯೋಗರಾಜ್ ನಿರ್ಮಿಸಿದ ರಾಮಲಲ್ಲಾನಿಗೆ ಪಟ್ಟಾಭಿಷೇಕ ಮಾಡಲು ತೀರ್ಮಾನಿಸಲಾಗಿದೆ. ಕನ್ನಡಿನ ಕೆತ್ತನೆ ಮಾಡಿದ ರಾಮಲಲ್ಲಾನ ಆಯ್ಕೆಗೆ ಕಾರಣ ಏನು ಅನ್ನೋ ಬಗ್ಗೆ ರಾಮಮಂದಿರ ಟ್ರಸ್ಟ್ ಸದಸ್ಯರೊಬ್ಬರು ಮಾತನಾಡಿದ್ದು, ರಾಮಲಲ್ಲಾನ ಮೂರ್ತಿ ನಮ್ಮ ಜೊತೆಗೆ ಮಾತನಾಡುವಂತೆಯೇ ಇದೆ. ನೋಡಿದ ಕೂಡಲೇ ಮಂತ್ರಮುಗ್ಧರನ್ನಾಗಿಸುತ್ತೆ ಅಂತಾ ಹೇಳಿದ್ದಾರೆ.

ಇನ್ನು 51 ಇಂಚಿನ ರಾಮಲಲ್ಲಾ ವಿಗ್ರಹ ನಿರ್ಮಾಣಕ್ಕಾಗಿ ಅರುಣ್ ಯೋಗಿರಾಜ್ ಬಳಸಿರೋದು ಅತ್ಯಂತ ವಿಶಿಷ್ಟವಾದ ಕೃಷ್ಣ ಶಿಲೆಯನ್ನ. ಮೈಸೂರಿನಲ್ಲಿರುವ ಬುಜ್ಜೆಗೌಡನಪುರ ಅನ್ನೋ ಗ್ರಾಮದಲ್ಲಿದ್ದಂತಾ ಕೃಷ್ಣ ಶಿಲೆಯನ್ನ ಕೆತ್ತಿ ರಾಮಲಲ್ಲಾನ ಮೂರ್ತಿ ನಿರ್ಮಿಸಲಾಗಿದೆ. ನೋಡಿ.. ಕನ್ನಡ ನೆಲದ ಕಲ್ಲಿನಿಂದ ಕನ್ನಡಿಗನ ಕೈಯಲ್ಲೇ ರಾಮಲಲ್ಲಾ ಮೂರ್ತಿ ನಿರ್ಮಾಣವಾಗಿದೆ ಅಂದ್ರೆ ಕನ್ನಡಿಗರ ಪಾಲಿಗೆ ಎಂಥಾ ಹೆಮ್ಮೆಯ ಸಂಗತಿ ನೋಡಿ. ಆದ್ರೆ ಈ ಖುಷಿಯ ಮಧ್ಯೆಯೂ ಅರುಣ್ ಯೋಗಿರಾಜ್ ಮತ್ತು ಅವರ ಕುಟುಂಬಸ್ಥರಿಗೆ ಒಂದು ನೋವು ಕಾಡ್ತಾ ಇದೆ. ಮಗನ ಈ ಸಾಧನೆಯನ್ನ ನೋಡೋಕೆ ಇಂದು ಅರುಣ್ ಯೋಗಿರಾಜ್ ತಂದೆ ಅವರ ಜೊತೆಗಿಲ್ಲ. ತಂದೆ ಇರ್ತಿದ್ರೆ, ರಾಮಮಂದಿರದಲ್ಲಿ ತಮ್ಮ ಪುತ್ರ ನಿರ್ಮಿಸಿದ ರಾಮಲಲ್ಲಾನ ಪ್ರತಿಷ್ಠಾಪನೆಯಾಗುತ್ತಿದೆ ಅನ್ನೋ ಸುದ್ದಿ ಕೇಳಿ ತುಂಬಾ ಖುಷಿ ಪಡ್ತಿದ್ರು ಅನ್ನೋದು ಅರುಣ್ ಕುಟುಂಬಸ್ಥರ ಮಾತು. ಆದ್ರೆ ಅರುಣ್ ಯೋಗಿರಾಜ್​ರ ಈ ಕಾರ್ಯ ನಿಜಕ್ಕೂ ಇಡೀ ಕರ್ನಾಟಕಕ್ಕೇ ಹೆಮ್ಮೆಯ ವಿಚಾರ. ಜನವರಿ 22ರಂದು ಕರ್ನಾಟಕದ ಕಲ್ಲಿನಿಂದ ಕನ್ನಡಿಗನ ಕೈಯಿಂದ ನಿರ್ಮಾಣವಾದ ರಾಮಲಲ್ಲಾ ಅಯೋಧ್ಯೆಯ ಐತಿಹಾಸಿಕ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಲಿದ್ದಾನೆ. ಮುಂದೆ ನೀವು ಅಯೋಧ್ಯೆಗೆ ಹೋದಾಗ ನಮ್ಮ ಕನ್ನಡಿಗ ನಿರ್ಮಿಸಿದ ರಾಮಲಲ್ಲಾನ ದರ್ಶನಕ್ಕೆ ಪಾತ್ರರಾಗಲಿದ್ದೀರ. ಇದೇ ದೊಡ್ಡ ಖುಷಿಯ ವಿಚಾರ. ಹೀಗಾಗಿ ಅರುಣ್ ಯೋಗಿರಾಜ್ ಅವರ ಶ್ರಮಕ್ಕೆ ಧನ್ಯವಾದ ಹೇಳಲೇಬೇಕು.

Shwetha M