ಮುಂದಿನ ಮಕರ ಸಂಕ್ರಾಂತಿಗೆ ರಾಮಮಂದಿರ ಪೂರ್ಣ – 2024ರ ಜನವರಿಯಲ್ಲಿ ಭಕ್ತರಿಗೆ ರಾಮನ ದರ್ಶನ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಮುಂದಿನ ವರ್ಷದೊಳಗೆ ಮುಗಿಯಲಿದೆ. ರಾಮಮಂದಿರ ಕಾಮಗಾರಿ ಮುಂದಿನ ಸಂಕ್ರಮಣದ ವೇಳೆಗೆ ಅಂತ್ಯವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ‘ಅಕ್ಟೋಬರ್ ವೇಳೆಗೆ ಮೊದಲ ಮಹಡಿ ಸಿದ್ಧವಾಗಲಿದ್ದು, ಮುಂದಿನ ಜನವರಿಗೆ ಕಾಮಗಾರಿ ಅಂತ್ಯವಾಗಲಿದೆ ಎಂದರು. ಈಗಾಗಲೇ ದೇವಸ್ಥಾನದ ಕಾಮಗಾರಿಯ ಕೆಲಸ ಅರ್ಧದಷ್ಟು ಮುಗಿದಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ನಿಗದಿತ ಅವಧಿಗಿಂತ ಮುಂಚೆ ಕಾಮಗಾರಿ ಅಂತ್ಯವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಳಿಗೆ ನಡುಗಿದ ರಾಷ್ಟ್ರ ರಾಜಧಾನಿ – ಹೃದಯಾಘಾತ, ರಕ್ತದೊತ್ತಡ ಸಮಸ್ಯೆ ಹೆಚ್ಚಳ
2024ರ ಮಕರ ಸಂಕ್ರಾಂತಿಯ ವೇಳೆಗೆ ದೇವಾಲಯದ ಗರ್ಭಗುಡಿಯಲ್ಲಿ ಭಗವಾನ್ ರಾಮಲಾಲಾ ಪ್ರಾಣ ಪ್ರತಿಷ್ಠಾನ ಕಾರ್ಯ ನಡೆಯಲಿದೆ. ಶ್ರೀರಾಮನ ವಿಗ್ರಹವು ಟ್ರಸ್ಟ್ ಪ್ರಕಾರ 8.5 ಅಡಿ ಎತ್ತರವಿರುತ್ತದೆ. ರಾಮ ನವಮಿಯಂದು ಸೂರ್ಯ ಕಿರಣ ರಾಮನ ಮೇಲೆ ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಿರುವ ರಾಮನ ಮೂರ್ತಿಯೂ 5 ರಿಂದ 7 ವರ್ಷ ವಯಸ್ಸಿನ ಮಗುವಿನ ರೂಪದಲ್ಲಿರಲಿದೆ. ಈ ಮೂರ್ತಿ ಆಕಾಶ ನೀಲಿ ಬಣ್ಣದಲ್ಲಿದ್ದು, ವಿಗ್ರಹಕ್ಕೆ ಅಂತಹ ಕಲ್ಲನ್ನು ಆಯ್ಕೆ ಮಾಡಲಾಗುತ್ತದೆ. ಪದ್ಮಶ್ರೀ ಪುರಸ್ಕೃತ ಶಿಲ್ಪಿ ರಾಮಲಾಲಾ ವಿಗ್ರಹದ ಆಕಾರವನ್ನು ಮಾಡಲಿದ್ದಾರೆ. ಓರಿಸ್ಸಾದ ಹಿರಿಯ ಶಿಲ್ಪಿಗಳಾದ ಸುದರ್ಶನ್ ಸಾಹು ಮತ್ತು ವಾಸುದೇವ್ ಕಾಮತ್ ಮತ್ತು ಕರ್ನಾಟಕ ಮೂಲದ ರಾಮಯ್ಯ ವಾಡೇಕರ್ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಚಂಪತ್ ರೈ ತಿಳಿಸಿದ್ದಾರೆ.