ರಾಮಮಂದಿರಕ್ಕಾಗಿ ರಥಯಾತ್ರೆ ಮರೆತುಬಿಟ್ರಾ? – ಬಿಜೆಪಿ, ಮಂದಿರದ ಟ್ರಸ್ಟ್ ಯೂ ಟರ್ನ್ ಹೊಡೆದಿದ್ಯಾಕೆ?
ಎಲ್ಲೆಲ್ಲೂ ರಾಮನ ಜಪ ಶುರುವಾಗಿದೆ. ಕೋಟ್ಯಂತರ ಹಿಂದೂಗಳ ಆಶಯದಂತೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀರಾಮನ ಜನ್ಮ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಿದೆ. ಜನವರಿ 22 ರಂದು ಅಯೋಧ್ಯಾ ರಾಮಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ (ಬಾಲ ರಾಮ) ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಲಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜ. 22 ರಂದು ರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿದೆ. ಆದ್ರೆ ಬಿಜೆಪಿ ಹಾಗೂ ಮಂದಿರದ ಟ್ರಸ್ಟ್ ರಾಮಮಂದಿರ ಉದ್ಘಾಟನೆಗೆ ಬರಬೇಡಿ ಅಂತಾ ಅಡ್ವಾಣಿ ಮತ್ತೂ ಮುರಳಿ ಮನೋಹರ್ ಜೋಶಿಗೆ ಹೇಳಿರೋದು ನಿಜಕ್ಕೂ ಶಾಕಿಂಗ್ ಸಂಗತಿ. ಯಾಕಂದ್ರೆ ಈ ಇಬ್ಬರೂ ನಾಯಕರು ಇಲ್ಲದೇ ಇರ್ತಿದ್ರೆ ಇಂದು ರಾಮಮಂದಿರವೇ ನಿರ್ಮಾಣವಾಗುತ್ತಿರಲಿಲ್ವೋ ಏನೊ. 1990ರಲ್ಲಿ ಬಿಜೆಪಿ ಭೀಷ್ಮ ಎಲ್ಕೆ ಅಡ್ವಾಣಿ ಗುಜರಾತ್ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಕೈಗೊಂಡಿದ್ರು. ಮಂದಿರ್ ವಹೀ ಬಾನಾಯೇಂಗೆ ಅಂತಾ 30 ವರ್ಷಗಳ ಹಿಂದೆಯೇ ಬೀದಿಗಿಳಿದಿದ್ರು. ಈ ವೇಳೆ ಈಗಿನ ಪ್ರಧಾನಿ ಮೋದಿ ಯುವ ನಾಯಕರಾಗಿದ್ರು. ಗುಜರಾತ್ನಲ್ಲಿ ರಥಯಾತ್ರೆ ಯಶಸ್ವಿಯಾಗಿ ಸಾಗುವಲ್ಲಿ ಆಗ ಮೋದಿಯವರದ್ದೂ ಪ್ರಮುಖ ಪಾತ್ರ ಇತ್ತು. ಗುಜರಾತ್ನಾದ್ಯಂತ ರಾಮಮಂದಿರ ನಿರ್ಮಾಣಕ್ಕಾಗಿ ಜನರಿಂದ ಸಹಿ ಸಂಗ್ರಹಿಸೋ ಅಭಿಯಾನವನ್ನ ಮೋದಿ ಮಾಡಿದ್ರು. ಅಡ್ವಾಣಿಯವರ ಈ ರಥಯಾತ್ರೆ ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಭಾರತದ ದಿಕ್ಕನ್ನೇ ಬದಲಿಸಿಬಿಡ್ತು.
ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಅಯೋಧ್ಯೆಗೆ ಹೋಗುವ ವಿಮಾನಗಳ ಟಿಕೆಟ್ ದರ ಡಬಲ್!
ಬಿಜೆಪಿಗೆ ಬಲ ತುಂಬಿದ್ದೇ ಅಡ್ವಾಣಿಯೇ ರಥಯಾತ್ರೆ. ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಬಿಜೆಪಿ ಬೆಳೆದಿದ್ದೇ ರಾಮಮಂದಿರ ನಿರ್ಮಾಣದ ಗುರಿಯಿಂದಾಗಿ. ಅಂದು ಹಿಂದೂಗಳನ್ನ ಒಟ್ಟುಗೂಡಿಸಿದ್ದೇ ಅಡ್ವಾಣಿಯವರ ಮಂದಿರಕ್ಕಾಗಿ ನಡೆದ ರಥಯಾತ್ರೆ. ದಿನಕ್ಕೆ 300 ಕಿಲೋ ಮೀಟರ್ನಂತೆ ದೇಶಾದ್ಯಂತ 10 ರಾಜ್ಯಗಳನ್ನ ಹಾದು ಹೋಗಿ 10 ಸಾವಿರಕ್ಕೂ ಅಧಿಕ ಕಿಲೋ ಮೀಟರ್ ನಡೆದ ರಥಯಾತ್ರೆ ಅಂತಿಮವಾಗಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಅಂತ್ಯವಾಗಿತ್ತು. 1992 ಡಿಸೆಂಬರ್ 6ರಂದು ಕರಸೇವಕರು ಬಾಬ್ರಿ ಮಸೀದಿಯನ್ನ ಧ್ವಂಸಗೊಳಿಸಿದ್ರು. ಅತ್ತ ಕರಸೇವಕರು ಬಾಬ್ರಿ ಮಸೀದಿಯನ್ನ ಧ್ವಂಸಗೊಳಿಸೋಕೆ ಆರಂಭಿಸುತ್ತಲೇ ಇತ್ತ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮಹತ್ವದ ಸಭೆ ಕೂಡ ನಡೆಸಿದ್ರು. ರಾಮಮಂದಿರ ಧ್ವಂಸವಾಗುವಾಗ ಅಡ್ವಾಣಿ ಮತ್ತು ಜೋಶಿ ಸ್ಥಳದಲ್ಲಿ ಇರಲಿಲ್ಲ, ಮಸೀದಿ ಧ್ವಂಸ ಮಾಡೋದು ಪ್ರಿಪ್ಲ್ಯಾನ್ ಆಗಿರಲಿಲ್ಲ. ಇದ್ರಲ್ಲಿ ಅಡ್ವಾಣಿ ಮತ್ತು ಜೋಶಿಯವರ ಕೈವಾಡ ಇರಲಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಿಬಿಐ ಕೋರ್ಟ್ ಕೂಡ ಇಬ್ಬರಿಗೂ ಕ್ಲೀನ್ ಚಿಟ್ ನೀಡಿತ್ತು.
ಆದ್ರೆ ಇಂದು ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿ ನಿಂತಿದೆ ಅಂದ್ರೆ ಅದಕ್ಕೆ 30 ವರ್ಷಗಳ ಹಿಂದೆ ಮಂದಿರ್ ವಹೀ ಬನಾಯೇಂಗೆ ಘೋಷವಾಕ್ಯದಲ್ಲಿ ಅಡ್ವಾಣಿ ನಡೆಸಿದ ರಥಯಾತ್ರೆಯೇ ಕಾರಣ ಅನ್ನೋದನ್ನ ಯಾರೂ ಪ್ರಶ್ನೆ ಮಾಡುವಂತೆಯೇ ಇಲ್ಲ. ಆದ್ರೀಗ ನೋಡಿ ಅಂಥಾ ಎಲ್ಕೆ ಅಡ್ವಾಣಿಯವರನ್ನೇ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾರದಂತೆ ಸೂಚಿಸಿದ್ದಾರೆ ಅಂದ್ರೆ ಏನರ್ಥ. ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಇಬ್ರೂ ಸೈಡ್ಲೈನ್ ಆಗಿದ್ರು. ಇವರಿಬ್ಬರಿಗಾಗಿಯೇ ಮಾರ್ಗದರ್ಶಕ ಮಂಡಳಿ ಅಂತಾ ರಚಿಸಿದ್ರೂ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಮಾರ್ಗದರ್ಶಕ ಮಂಡಳಿ ಜೊತೆ ಸಭೆ ನಡೆಸಿ, ಅಡ್ವಾಣಿ ಮತ್ತು ಜೋಶಿ ಬಳಿಯಿಂದ ಸಲಹೆ ಪಡೆದು ನಿರ್ಧಾರಗಳನ್ನ ಕೈಗೊಳ್ಳೋ ಗೋಜಿಗೆ ಪ್ರಧಾನಿ ಮೋದಿಯಾಗಲಿ, ಅಮಿತ್ ಶಾರೇ ಆಗಲಿ ಹೋಗಲೇ ಇಲ್ಲ. ಬಿಜೆಪಿಯ ಮಾರ್ಗದರ್ಶಕ ಮಂಡಳಿ ಧೂಳು ಹಿಡಿದು ಯಾವಾಗಲೋ ಮೂಲೆ ಸೇರಿಯಾಗಿದೆ. ಆಯ್ತು ಹೋಗ್ಲಿ ಬಿಡಿ.. ಆದ್ರೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲೂ ಅಡ್ವಾಣಿ, ಜೋಶಿಯನ್ನ ಸೈಡ್ಲೈನ್ ಮಾಡೋದು ಅಂದ್ರೆ ಏನರ್ಥ? ಮೋದಿ ಮತ್ತು ಅಮಿತ್ ಶಾ ಅವರು ಮೂಲೆಗುಂಪು ಮಾಡಿದ್ರೂ ಬಿಜೆಪಿಯ ಕಾರ್ಯಕರ್ತರು ಮಾತ್ರ ಅಡ್ವಾಣಿ, ಜೋಶಿಯನ್ನ ಮರೆಯಲ್ಲ ಅನ್ನೋದಕ್ಕೆ ಈಗ ಆಗಿರೋ ಬೆಳವಣಿಗೆಯೇ ಸಾಕ್ಷಿ.