ಕೊನೆ ಕ್ಷಣದಲ್ಲಿ ಅಯೋಧ್ಯೆ ಭೇಟಿ ಕ್ಯಾನ್ಸಲ್ ಮಾಡಿದ ಅಡ್ವಾಣಿ! – ಇದಕ್ಕೆ ಕಾರಣ ಏನು ಗೊತ್ತಾ?
ಬರೋಬ್ಬರಿ 500 ವರ್ಷಗಳ ಕನಸು ನನಸಾಗುತ್ತಿದೆ. ಇಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಸಂಭ್ರಮದಿಂದ ನಡೆಯುತ್ತಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಬಿಜೆಪಿಯ ಹಿರಿಯ ನಾಯಕ LK ಅಡ್ವಾಣಿಯವರು ಭಾಗಿಯಾಗುತ್ತಿಲ್ಲ ಎಂದು ವರದಿಯಾಗಿದೆ.
ಹೌದು, ಅಯೋಧ್ಯೆ ಸುತ್ತಮುತ್ತ ತೀವ್ರವಾದ ಶೀತ ಹವಾಮಾನ ಇದೆ. ಇದರಿಂದಾಗಿ 96 ವರ್ಷದ ನಾಯಕ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಹಿರಿಯ ನಾಯಕರ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಮಹಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಈ ಹಿಂದೆ ವಿನಂತಿಸಲಾಗಿತ್ತು. ಮಂದಿರ ಲೋಕಾರ್ಪಣೆಗೆ ಅವರು ಹಾಜರಾಗುತ್ತಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.
ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿಯವರು ರಾಮಮಂದಿರದಲ್ಲಿನ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಬರುತ್ತಾರೋ, ಇಲ್ಲವೋ ಎಂಬುವ ಅನುಮಾನ ಮೊದಲಿನಿಂದ ಇತ್ತು. ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರು ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೆ ಬರುವ ಸಾಧ್ಯತೆ ತೀರ ಕಡಿಮೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಡಿಸೆಂಬರ್ನಲ್ಲಿ ಹೇಳಿದ್ದರು. ಇದಕ್ಕೆ ಕಾರಣ ಕೂಡ ನೀಡಿದ್ದ ಚಂಪತ್ ರೈ ಅವರು, ಎಲ್.ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿಯವರಿಗೆ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಅಲ್ಲದೇ ವಯಸ್ಸು ಕೂಡ ಅವರಿಗೆ ಓಡಾಡಲು ಸ್ಪಂದಿಸುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಮಂದಿರ ಸಮಾರಂಭದಲ್ಲಿ ಭಾಗಿಯಾಗುವುದಿಲ್ಲ ಎಂದು ಟ್ರಸ್ಟ್ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದರು.
ಇದಾದ ಮೇಲೆ ವಿಶ್ವ ಹಿಂದೂ ಪರಿಷತ್ನವರು ಎಲ್.ಕೆ ಅಡ್ವಾಣಿಯವರನ್ನು ಭೇಟಿ ಮಾಡಿ ಸಮಾರಂಭಕ್ಕೆ ಬರುತ್ತಾರೆ ಎಂದು ಹೇಳಿದ್ದರು. ವಿಹೆಚ್ಪಿಯ ಅಲೋಕ್ ಕುಮಾರ್ ಅವರು, ಅಡ್ವಾಣಿ ಅವರಿಗೆ ಅಗತ್ಯ ವ್ಯವಸ್ಥೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದಿದ್ದರು. ಸ್ವತಃ ಅಡ್ವಾಣಿಯವರು ಭವ್ಯ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿರೋದು ನನ್ನ ಅದೃಷ್ಟ. ‘ಹಿಂದಿನ ಜನ್ಮದ ಪುಣ್ಯದ ಫಲ’ ಎಂದು ಹೇಳಿದ್ದರು. ಆದರೆ ಈಗ ಹವಾಮಾನದಿಂದಾಗಿ ಹಿರಿಯ ನಾಯಕರಿಬ್ಬರು ಸಮಾರಂಭಕ್ಕೆ ಹಾಜರಾಗುತ್ತಿಲ್ಲ ಎಂದು ಹೇಳಲಾಗಿದೆ.
19ರ ದಶಕದಲ್ಲಿ ರಾಮಮಂದಿರ ಹೋರಾಟದಲ್ಲಿ ಎಲ್ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ವಿಹೆಚ್ಪಿಯ ಮಾಜಿ ಅಧ್ಯಕ್ಷ ದಿವಂಗತ ಅಶೋಕ್ ಸಿಂಘಾಲ್ ಮುಂಚೂಣಿಯಲ್ಲಿದ್ದರು. ಶ್ರೀರಾಮ ಜನ್ಮ ಭೂಮಿ ಇಲ್ಲೇ ಆಗಿದೆ ಎಂದು ಬಲವಾಗಿ ನಂಬಿ ಹೋರಾಟ ಮಾಡಿದ್ದ ಮಹಾನ್ ನಾಯಕರು ಇವರು.