MISSION KASHMIR..! – ರಾಮ್ ಮಾಧವ್ ಅಖಾಡಕ್ಕಿಳಿದಿದ್ದೇಕೆ?
ಬದಲಾಗುತ್ತಾ ರಾಷ್ಟ್ರ ರಾಜಕಾರಣ?

ರಾಮ್ ಮಾಧವ್ ಮತ್ತೆ ಬಿಜೆಪಿಯ ಕೆಲಸಕ್ಕೆ ಮರಳಿದ್ದಾರೆ.. ಆರ್‌ಆರ್‌ಎಸ್‌ನ ಅತ್ಯಂತ ಪ್ರಮುಖ ನಾಯಕ ರಾಮ್ ಮಾಧವ್, ಹಿಂದೆಯೂ ಬಿಜೆಪಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆಗಲೇ ಬಿಜೆಪಿಯಲ್ಲಿ ಅತ್ಯಂತ ಉತ್ಸಾಹಿ ಹಾಗೂ ಭವಿಷ್ಯದ ನಾಯಕ ಎಂಬ ರೀತಿಯಲ್ಲೂ ರಾಮ್ ಮಾಧವ್ ಹೆಸರು ಚರ್ಚೆಯಾಗಿತ್ತು.. ಅದೇನು ರಾಜಕೀಯ ನಡೆಯಿತೋ ಗೊತ್ತಿಲ್ಲ.. ಇದ್ದಕ್ಕಿದ್ದಂತೆ ರಾಮ್ ಮಾಧವ್ ಅವರು ಆರ್‌ಆರ್‌ಎಸ್ ಕೆಲಸಕ್ಕೆ ಮರಳಿದ್ದರು.. ಬಿಜೆಪಿಗೆ ಕಳಿಸಿ ಕೊಟ್ಟಿದ್ದ ತನ್ನ ನಾಯಕನ್ನು ಆರ್‌ಎಸ್‌ಎಸ್ ಮತ್ತೆ ಮಾತೃಸಂಸ್ಥೆಗೆ ಕರೆಸಿಕೊಂಡಿತ್ತು ಎನ್ನುವುದು ಆಗ ರಾಜಕೀಯವಾಗಿ ಸಿಕ್ಕದ್ದ ಸ್ಪಷ್ಟನೆಯಾಗಿತ್ತು.. ಮತ್ತೊಂದೆಡೆ ಬಿಜೆಪಿಯಲ್ಲಿ ರಾಮ್ ಮಾಧವ್ ಬೆಳೆಯುತ್ತಿರುವ ರೀತಿಯನ್ನು ಕಂಡು ಕಮಲ ಪಕ್ಷದ ಹಿರಿಯ ನಾಯಕರೇ ರಾಮ್ ಮಾಧವ್, ಬಿಜೆಪಿಯ ಕೆಲಸ ಬಿಟ್ಟು ಆರ್‌ಎಸ್‌ಎಸ್‌ಗೆ ವಾಪಸ್ಸಾಗುವಂತಾಯಿತು ಎಂಬ ವಿಷಯದ ದೆಹಲಿ ಮಟ್ಟದಲ್ಲಿ ಚರ್ಚೆಯಾಗಿತ್ತು.. ಅದೇನೇ ಇದ್ದರೂ ಈಗ ರಾಮ್ ಮಾಧವ್ ಅವರನ್ನು ಜಮ್ಮು ಕಾಶ್ಮೀರ ಚುನಾವಣೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿಯವರ ಜೊತೆಗೆ ಉಸ್ತುವಾರಿಯಾಗಿ ಬಿಜೆಪಿ ನೇಮಿಸಿದ್ದು ಗಮನಾರ್ಹ ಬೆಳವಣಿಗೆ.. ಇದಕ್ಕೆ ಕಾರಣವೇನು ಅನ್ನೋದನ್ನು ನೋಡ್ತಾ ಹೋದ್ರೆ ಮಿಷನ್ ಕಾಶ್ಮೀರ್ ಅನಾವರಣಗೊಳ್ಳುತ್ತದೆ..
ಇದನ್ನೂ ಓದಿ: ರಚ್ಚು ಮೀಟಾದ್ಮೇಲೆ ರಿಲಾಕ್ಸ್? ಫೋಟೋ ಹಿಂದಿನ ರಹಸ್ಯ!
ಆರ್ಟಿಕಲ್ 370 ಬಗ್ಗೆ ನಿಮಗೆ ಗೊತ್ತಿದೆ.. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಶೇಷ ವಿಧಿ ಇದಾಗಿತ್ತು.. ಆದ್ರೆ 2019ರಲ್ಲಿ ಬಿಜೆಪಿ ಎರಡನೇ ಬಾರಿ ಮುನ್ನೂರ ಎರಡು ಸೀಟುಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕದ ಗದ್ದುಗೆ ಏರುತ್ತಿದ್ದಂತೆ, ಆರ್ಟಿಕಲ್ 370ಯನ್ನು ರದ್ದು ಮಾಡಿತ್ತು.. ಜೊತೆಗೆ ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.. ಜಮ್ಮು ಮತ್ತು ಕಾಶ್ಮೀರ ಒಂದು ಕೇಂದ್ರಾಡಳಿತ ಪ್ರದೇಶವಾದರೆ, ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿತ್ತು.. ಈ ಆರ್ಟಿಕಲ್ 370ಯನ್ನು ಜಾರಿಗೊಳಿಸುವ ವೇಳೆ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆಯ ಬಹುತೇಕ ಎಲ್ಲಾ ಪ್ರಮುಖ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿಟ್ಟಿತ್ತು.. ಇಂಟರ್ನೆಟ್ ಕಟ್ ಮಾಡಿತ್ತು.. ಅಷ್ಟು ದೊಡ್ಡ ನಿರ್ಧಾರ ಕೈಗೊಂಡ ಮೇಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದೇ ಒಂದು ಹಿಂಸಾಚಾರ ನಡೆಯದಂತೆ ನೋಡಿಕೊಂಡಿತ್ತು.. ಆದ್ರೆ ಇಷ್ಟೆಲ್ಲಾ ಪ್ರಿಪರೇಶನ್ ಕೇಂದ್ರ ಸರ್ಕಾರ ಕೈಗೊಳ್ಳಬೇಕು ಅಂದ್ರೆ ಅದರ ಹಿಂದಿದ್ದ ಒಂದು ಪ್ರಮುಖ ಶಕ್ತಿಯೇ ರಾಮ್ ಮಾಧವ್ ಎನ್ನುವ ವ್ಯಕ್ತಿ..
ಹೌದು.. ರಾಮ್ ಮಾಧವ್, ಕಾಶ್ಮೀರದ ವಿಚಾರದಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದರು.. 2014ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮೊದಲು ರಾಮ್ ಮಾಧವ್, ದೆಹಲಿಯಲ್ಲಿ ಆರ್‌ಎಸ್‌ಎಸ್‌ನ ವಕ್ತಾರ ಆಗಿದ್ದರು.. ರಾಮ್ ಮಾಧವ್ ಅವರಷ್ಟು ಜನಪ್ರಿಯರಾಗಿದ್ದ ಆರ್‌ಎಸ್‌ಎಸ್ ವಕ್ತಾರ ಬೇರೊಬ್ಬರಿಲ್ಲ ಎಂಬಷ್ಟರ ಮಟ್ಟಿಗೆ ರಾಮ್ ಮಾಧವ್, ಹೆಸರು ಮಾಡಿದ್ದರು.. ಮೋದಿಯವರು ಅಧಿಕಾರದ ಗದ್ದುಗೆ ಏರುವ ವಿಚಾರದಲ್ಲಿ ಆರ್‌ಎಸ್‌ಎಸ್‌ನ ನಿಲುವುಗಳು ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉತ್ತೇಜಿಸುವ ಕೆಲಸದಲ್ಲಿ ರಾಮ್ ಮಾಧವ್ ತೊಡಗಿದ್ದರು.. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಆರ್‌ಎಸ್‌ಎಸ್ ವಕ್ತಾರ ರಾಮ್ ಮಾಧವ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.. ನಿಮಗೆ ಗೊತ್ತಿರಲಿ, ಸಾಮಾನ್ಯವಾಗಿ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರು, ಬಿಜೆಪಿಯಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ.. ಆದ್ರೆ ಅಮಿತ್ ಶಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದಾಗ ರಾಮ್ ಮಾಧವ್, ನೇರವಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾದರು.. ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಕರೆಸಿಕೊಂಡಿರುವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ್ಮೇಲೆ ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿಯನ್ನು ಗೆಲ್ಲಿಸುವ ದೊಡ್ಡ ಗುರಿಯನ್ನು ನಿಗದಿ ಮಾಡಿದ್ದರು.. ಆದ್ರೆ ಆ ಮಿಷನ್ ಈಡೇರುವಂತೆ ಮಾಡಿದ್ದು ಇದೇ ರಾಮ್ ಮಾಧವ್.. ಮೊದಲು ಅಸ್ಸಾಂನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಕೆಡವಿ, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಮಾಡಿದ್ರು.. ಮೊದಲ ಐದು ವರ್ಷ ಸರ್ಬಾನಂದ್ ಸೋನಾವಾಲ್ ಅಸ್ಸಾಂನ ಮುಖ್ಯಮಂತ್ರಿಯಾದ್ರು.. ಆದರೆ ಈಗಿನ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಂತೆ ನೋಡಿಕೊಂಡಿದ್ದು ರಾಮ್ ಮಾಧವ್.. ಅದರಿಂದಾಗಿಯೇ ಅಸ್ಸಾಂನಲ್ಲಿ ಬಿಜೆಪಿಯ ಗೆಲುವಿನ ಹಾದಿ ಸುಗಮವಾಯಿತು.. ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಜೊತೆಯಲ್ಲಿಟ್ಟುಕೊಂಡೇ, ರಾಮ್ ಮಾಧವ್, ಈಶಾನ್ಯದ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಒಂದಲ್ಲ ಒಂದು ರೂಪದಲ್ಲಿ ಅಧಿಕಾರಕ್ಕೆ ಬರುವಂತೆ ಮಾಡಿದ್ರು..
ಅರುಣಾಚಲಪ್ರದೇಶ, ಮಿಜೋರಾಂ ಹಾಗೂ ಮಣಿಪುರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತು.. ಇದಕ್ಕಾಗಿ ದೇಶದ ಬೇರೆಡೆಗಳಿಂದಲೂ ಕಾರ್ಯಕರ್ತರನ್ನು ಈಶಾನ್ಯ ರಾಜ್ಯಗಳಿಗೆ ಕರೆದೊಯ್ದು, ಕೆಲಸ ಮಾಡುವಂತೆ ಮಾಡಿದ್ದರು ರಾಮ್ ಮಾಧವ್.. ಈಶಾನ್ಯ ರಾಜ್ಯಗಳ ಜೊತೆಗೆ ರಾಮ್ ಮಾಧವ್‌ಗೆ ಕೊಟ್ಟಿದ್ದ ಮತ್ತೊಂದು ದೊಡ್ಡ ಜವಾಬ್ದಾರಿಯೇ ಜಮ್ಮು ಮತ್ತು ಕಾಶ್ಮೀರ.. 2014ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.. ಇದಾದ ನಂತರ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು, ಮುಫ್ತಿ ಮೊಹಮ್ಮದ್ ಸಯೀದ್ ಅವರು ಮುಖ್ಯಮಂತ್ರಿಯಾಗುವಂತೆ ಮಾಡಿದ್ದು ರಾಮ್ ಮಾಧವ್ ಅವರ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯಿಂದ.. ಯಾರೂ ಊಹಿಸಲೂ ಸಾಧ್ಯವಾಗದ ರೀತಿಯ ಅಂತದ್ದೊಂದು ಮೈತ್ರಿಯನ್ನು ರಾಮ್ ಮಾಧವ್ ಕಾಶ್ಮೀರದಲ್ಲಿ ಸಾಧ್ಯವಾಗಿಸಿದ್ದರು.. ಮುಂದೆ ಮುಫ್ತಿ ಸಯೀದ್ ಇಹಲೋಕ ತ್ಯಜಿಸಿದ ಮೇಲೆ ಮೆಹಬೂಬಾ ಮುಫ್ತಿಯವರಿಗೂ ಮೈತ್ರಿಯ ಬೆಂಬಲ ಕೊಟ್ಟಿದ್ದರು.. ಮೂರು ವರ್ಷಗಳ ಕಾಲ ಅಧಿಕಾರ ಹಂಚಿಕೊಂಡು, ಬಿಜೆಪಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತೆ ಮಾಡಿದರು.. ಇದರಿಂದಾಗಿ ಜಮ್ಮು ಮಾತ್ರವಲ್ಲದೆ, ಕಾಶ್ಮೀರ ಕಣಿವೆಯಲ್ಲೂ ಬಿಜೆಪಿ ಒಂದಿಷ್ಟು ಪ್ರಭಾವ ಬೀರುವಂತೆ ಮಾಡಿದ್ದರು.. ಇದರಿಂದಾಗಿ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಗೆ ನೇರವಾಗಿ ಗೊತ್ತಾಗಲು ಶುರುವಾಗಿತ್ತು.. ಅಷ್ಟೇ ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ಉಗ್ರರ ಪರವಾಗಿ ನಿಲುವು ತಾಳಿರುವ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಿಗುತ್ತಿತ್ತು.. ಇದೇ ಮುಂದೆ ಆರ್ಟಿಕಲ್ 370 ರದ್ದುಗೊಳಿಸುವ ಬಿಜೆಪಿಯ ಬಹುಕಾಲದ ಪ್ರಣಾಳಿಕೆಯ ಭರವಸೆ ಈಡೇರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತ್ತು.. ಹೀಗೆ ರಾಮ್ ಮಾಧವ್, ಕಾಶ್ಮೀರ ವಿಚಾರದಲ್ಲಿ ಅಸಾಧ್ಯವಾದುದನ್ನ ಬಿಜೆಪಿಗೆ ಸಾಧ್ಯವಾಗಿಸಿದ್ದರು.. ಅಲ್ಲದೆ ಕಾಶ್ಮೀರದಲಲ್ಲಿ ಪೀಪಲ್ಸ್ ಕಾನ್ಫರೆನ್ಸ್‌ನ ಸಜ್ಜದ್ ಲೋನ್ ಸೇರಿದಂತೆ ಹಲವು ಸಣ್ಣಪುಟ್ಟ ರಾಜಕೀಯ ಪಕ್ಷಗಳ ನಾಯಕರ ಜೊತೆಗೆ ಒಳ್ಳೆಯ ಒಡನಾಟವನ್ನು ರಾಮ್ ಮಾಧವ್ ಹೊಂದಿದ್ದಾರೆ.. ಈಗ ಜಮ್ಮು ಮತ್ತು ಕಾಶ್ಮೀರ, ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಚುನಾವಣೆ ನಡೆಯುತ್ತಿದೆ.. ಇಂತಹ ಸಂದರ್ಭದಲ್ಲಿ ರಾಮ್ ಮಾಧವ್ ಅವರು ಕಾಶ್ಮೀರದಲ್ಲಿ ಹೊಂದಿರುವ ಅನುಭವವೇ ಬಿಜೆಪಿಗೆ ದೊಡ್ಡ ಆಸ್ತಿ.. ಅದನ್ನೇ ಈಗ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ..
ರಾಮ್ ಮಾಧವ್, ತನ್ನ ನೆಟ್‌ವರ್ಕ್ ಬಳಸಿಕೊಂಡು ಜಮ್ಮು ಭಾಗದಲ್ಲಿ ಬಹುತೇಕ ಎಲ್ಲಾ ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ನಿರೀಕ್ಷೆಯನ್ನು ಬಿಜೆಪಿ ಇಟ್ಟುಕೊಂಡಿದೆ.. ಜೊತೆಗೆ ಕಾಶ್ಮೀರ ಕಣಿವೆಯ ನಾಯಕರ ಜೊತೆಗೆ ಸಂಪರ್ಕ ಬೆಳೆಸಿ ಅವಶ್ಯಕತೆ ಬಿದ್ದರೆ, ಮೈತ್ರಿಯನ್ನೂ ರೂಪಿಸಿಕೊಳ್ಳಬಹುದು.. ಒಂದೆಡೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ನ್ಯಾಷನಲ್ ಕಾನ್ಫರೆನ್ಸ್ ಜೊತೆಗೆ ಮೈತ್ರಿಯ ಮಾತುಕತೆ ನಡೆಸುತ್ತಿದ್ದಾಗಲೇ ಬಿಜೆಪಿ ರಾಮ್ ಮಾಧವ್ ಅವರನ್ನು ಕಾಶ್ಮೀರಕ್ಕೆ ಕಳಿಸಿಕೊಟ್ಟಿದೆ.. ಇದರೊಂದಿಗೆ ಕಣಿವೆ ರಾಜ್ಯದ ಚಳಿಯ ನಡುವೆಯೂ ರಾಜಕೀಯ ಬಿಸಿಯೇರುವಂತೆ ಮಾಡಿದೆ.. ರಾಮ್ ಮಾಧವ್ ಅವರು ಬಿಜೆಪಿಯ ಸೇವೆಗೆ ಮರಳಿರುವುದು ತಾತ್ಕಾಲಿಕವೋ ಅಥವಾ ರಾಜಕೀಯವಾಗಿ ಹೊಸ ಅಧ್ಯಾಯ ಇಲ್ಲಿಂದಲೇ ಆರಂಭವಾಗುತ್ತದಾ ಎನ್ನುವ ಕುತೂಹಲವೂ ಗರಿಗೆದರಿದೆ..