ರ್ಯಾಲಿ, ರೋಡ್ ಶೋ, ಸಮಾವೇಶಗಳ ಅಬ್ಬರದ ಪ್ರಚಾರಕ್ಕೆ ತೆರೆ – ಇನ್ನೇನಿದ್ರೂ ಮತಕ್ಕಾಗಿ ಮನೆ ಮನೆ ಯಾತ್ರೆ!

ರ್ಯಾಲಿ, ರೋಡ್ ಶೋ, ಸಮಾವೇಶಗಳ ಅಬ್ಬರದ ಪ್ರಚಾರಕ್ಕೆ ತೆರೆ – ಇನ್ನೇನಿದ್ರೂ ಮತಕ್ಕಾಗಿ ಮನೆ ಮನೆ ಯಾತ್ರೆ!

224 ಕ್ಷೇತ್ರ. 3 ಪ್ರಬಲ ಪಕ್ಷ. ಸಾವಿರಾರು ಅಭ್ಯರ್ಥಿಗಳು. ಒಂದೇ ಒಂದು ದಿನ ಬಾಕಿ. ಮುಂದಿನ 5 ವರ್ಷ ಕರ್ನಾಟಕ ರಾಜ್ಯವನ್ನ ಆಳುವವರು ಯಾರು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಲಿದೆ. ಪ್ರತಿಷ್ಠೆಯ ಕಣದಲ್ಲಿ ಮತದಾರರು ಸೋಲು ಗೆಲುವಿನ ಭವಿಷ್ಯ ಬರೆಯಲಿದ್ದಾರೆ.

ಇಷ್ಟು ದಿನ ಜನರ ಮನಗೆಲ್ಲಲು ಱಲಿ, ರೋಡ್ ಶೋ ಮೂಲಕ ನಡೆಯುತ್ತಿದ್ದ ಅಬ್ಬರದ ಬಹಿರಂಗ ಪ್ರಚಾರಕ್ಕೆ ಇವತ್ತು ತೆರೆ ಬಿದ್ದಿದೆ. ಕೊನೇ ಕ್ಷಣದಲ್ಲೂ ಕೂಡ ನಾಯಕರು ಮತಶಿಕಾರಿಗಾಗಿ ಮಿಂಚಿನ ಸಂಚಾರ ಮಾಡಿದ್ರು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನ ಘಟಾನುಘಟಿ ನಾಯಕರು ಕ್ಯಾಂಪೇನ್ ಮಾಡಿದ್ರು. ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಲ್ಲಿ ತಮಗೇ ಮತ ನೀಡುವಂತೆ ಮನವಿ ಮಾಡಿದ್ರು. ಹಾಗೇ ವಿಪಕ್ಷನಾಯಕ ಸಿದ್ದರಾಮಯ್ಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಪ್ರಸಾದ್ ಪರ ಪ್ರಚಾರ ಮಾಡಿದ್ರು. ಇನ್ನು ಡಿ.ಕೆ ಶಿ ವಕುಮಾರ್ ಕನಕಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ಸಿಎಂ ಆಗುವ ಕನಸನ್ನ ಮತ್ತೊಮ್ಮೆ ತೆರೆದಿಟ್ರು.

ಇದನ್ನೂ ಓದಿ : ಬಿಜೆಪಿ ವಿರುದ್ಧ ‘ಕೈ’ ಹೋಮಹವನ – ‘ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್’ ಎಂದು ಕೇಸರಿ ಅಭಿಯಾನ!

ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪರ ಹಾಗೂ ರಾಮನಗರ ಕ್ಷೇತ್ರದಲ್ಲಿ ಪುತ್ರನ ಪರ ಕ್ಯಾಂಪೇನ್ ನಡೆಸಿದ್ರು. ಇನ್ನು ಶಿಕಾರಿಪುರದಲ್ಲಿ ಬಿಎಸ್ ವೈ ಪುತ್ರ ಬಿ.ವೈ ವಿಜಯೇಂದ್ರ ಪರ ಕಿಚ್ಚ ಸುದೀಪ್ ಅಖಾಡಕ್ಕೆ ಇಳಿದಿದ್ರು. ಹಾಗೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತಬುಟ್ಟಿಗೆ ಕೈ ಹಾಕಿದ್ರು. ಹೀಗೆ ಕಡೇ ಕ್ಷಣದವರೆಗೂ ಜನಮನ ಸೆಳೆಯೋಕೆ ನಾಯಕರು ಕಸರತ್ತು ನಡೆಸಿದ್ರು. ಇಷ್ಟು ದಿನದ ಇವರ ಆಟವನ್ನೆಲ್ಲಾ ನೋಡಿರುವ ಮತದಾರ ಅಂತಿಮವಾಗಿ ಯಾವ ಪಕ್ಷಕ್ಕೆ ಬಹುಮತ ಕೊಡುತ್ತಾನೆ ಅಥವಾ ಈ ಬಾರಿಯೂ ಅತಂತ್ರ ಫಲಿತಾಂಶ ಬರುತ್ತೋ ಕಾದು ನೋಡಬೇಕು.

suddiyaana