ಸಹೋದರ ಸಹೋದರಿಯ ಬಂಧವನ್ನು ಬೆಸೆಯುವ ರಕ್ಷಾಬಂಧನ ಹಬ್ಬ – ರಾಖಿ ಎಂಬ ಪವಿತ್ರದಾರದ ಮಹತ್ವವೇನು?

ಸಹೋದರ ಸಹೋದರಿಯ ಬಂಧವನ್ನು ಬೆಸೆಯುವ ರಕ್ಷಾಬಂಧನ ಹಬ್ಬ – ರಾಖಿ ಎಂಬ ಪವಿತ್ರದಾರದ ಮಹತ್ವವೇನು?

ಅಣ್ಣ ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ. ಹೌದು. ಸಹೋದರ ಸಹೋದರಿಯರ ಬಂಧ ಅದೊಂದು ಪ್ರೀತಿಯ ಅನುಬಂಧ. ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲಾಗದ ಪವಿತ್ರ ಬಂಧ.. ಈ ಬಂಧವನ್ನು ಮತ್ತಷ್ಟು ಬೆಸೆಯುವ ಹಬ್ಬವೇ ರಕ್ಷಾ ಬಂಧನ. ಮತ್ತೆ ರಕ್ಷಾಬಂಧನ ಬಂದಿದೆ. ಅಣ್ಣ ತಂಗಿಯ ಬಂಧವನ್ನು ಮತ್ತಷ್ಟು ಗಟ್ಟಿಯಾಗಿ ಬೆಸೆಯುವ ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ರಾಖಿಯೆಂಬ ಪವಿತ್ರ ದಾರವನ್ನು ಸಹೋದರಿ ಸಹೋದರನ ಮಣಿಕಟ್ಟಿಗೆ ಕಟ್ಟುತ್ತಾಳೆ. ರಕ್ಷಾಬಂಧನ ಹಬ್ಬದ ಮಹತ್ವವೇನು?, ರಕ್ಷಾಬಂಧನದ ಹಿನ್ನೆಲೆಯೇನು? ಎಂಬ ಬಗ್ಗೆ ತಿಳಿದುಕೊಳ್ಳೋಣ.

ಇದನ್ನೂ ಓದಿ:  ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ – ಹಬ್ಬದ ಹಿನ್ನೆಲೆ ಏನು? ಆಚರಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ  ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಈ ದಿನ, ಸಹೋದರಿ ತನ್ನ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟುವ ದಾರವು ಕೇವಲ ಒಂದು ದಾರವಲ್ಲ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತಾಗಿದೆ.

ರಾಖಿ ಹಬ್ಬದ ಹಿಂದೆ ಪುರಾಣದ ಕಥೆಗಳಿವೆ. ಕೆಲ ಐತಿಹಾಸಿಕ ಕಥೆಗಳಿವೆ. ಶಿಶುಪಾಲನನ್ನು ಕೊಲ್ಲಲು ಸುದರ್ಶನ ಚಕ್ರವನ್ನು ಬಳಸಿದಾಗ ಶ್ರೀಕೃಷ್ಣನ ಕೈ ಬೆರಳಿಗೆ ಗಾಯವಾಗುತ್ತದೆ. ಆಗ ದ್ರೌಪದಿ ತನ್ನ  ಸೀರೆಯನ್ನೇ ಹರಿದು ಶ್ರೀಕೃಷ್ಣನ ಕೈಬೆರಳಿಗೆ ಕಟ್ಟುತ್ತಾಳೆ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ದುಶ್ಯಾಸನ  ದ್ರೌಪದಿಯ ಸೀರೆ ಎಳೆಯುವಾಗ ಸೀರೆಗಳನ್ನು ದಯಪಾಲಿಸುತ್ತಾನೆ. ದ್ರೌಪದಿ ಕಟ್ಟಿದ ಸೀರೆಯ ತುಂಡನ್ನೇ ಕೃಷ್ಣ ರಕ್ಷೆಯೆಂದು ಭಾವಿಸಿ ಆಕೆಯನ್ನು ತಂಗಿಯಾಗಿ ಸ್ವೀಕರಿಸುತ್ತಾನೆ. ಈಗಲೂ ಹೆಣ್ಣುಮಕ್ಕಳು ಶ್ರೀಕೃಷ್ಣನಂತೆ ರಕ್ಷಿಸುವ ಸಹೋದರ ನಮಗೆ ಸಿಗಲಿ ಎಂಬ ಆಶಯದೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸುತ್ತಾರೆ.

ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು. ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.

ಈ ಹಬ್ಬವು ಒಡಹುಟ್ಟಿದವರು ಒಟ್ಟಿಗೆ ಬೆಳೆಯುವ ಮಹತ್ವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

suddiyaana