ರಕ್ಕಸಪುರದೋಳ್ ಸಿನಿಮಾಕ್ಕೆ ಪ್ರೇಕ್ಷಕರು ಪಿಧಾ – ಪೊಲೀಸ್ ಪಾತ್ರದಲ್ಲಿ ಮಿಂಚಿದ ರಾಜ್. ಬಿ ಶೆಟ್ಟಿ

ರಾಜ್ ಬಿ ಶೆಟ್ಟಿ ಈವರೆಗೂ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ, ವಿಲನ್ ಆಗಿಯೂ ಮಿಂಚಿದ್ದಾರೆ. ಈ ಬಾರಿ ರಕ್ಕಸಪುರದೋಳ್ ಸಿನಿಮಾಕ್ಕಾಗಿ ಅವರು ಪೊಲೀಸ್ ಅಧಿಕಾರಿ ಆಗಿದ್ದಾರೆ. ಹೌದು, ರಾಜ್ ಬಿ ಶೆಟ್ಟಿ ಅಭಿನಯದ ರಕ್ಕಸಪುರದೋಳ್ ಚಿತ್ರ ತೆರೆಕಂಡಿದೆ. ಟ್ರೇಲರ್‌ನಿಂದಲೇ ಗಮನಸೆಳೆದಿದ್ದ ಈ ಸಿನಿಮಾವನ್ನು ರವಿ ಸಾರಂಗ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ಪ್ರಯತ್ನ. ಹಾಗಾದರೆ, ಸಿನಿಮಾ ಹೇಗಿದೆ? ಮುಂದೆ ಓದಿ.
ʻರಕ್ಕಸಪುರದೋಳ್ʼ ಚಿತ್ರದ ಕಥೆ ಏನು?
ಅದು ರಕ್ಕಸಪುರ ಅನ್ನೋ ಊರು. ಅಂದ್ರೆ ರಾಕ್ಷಸನ ಊರು ಅಂತ ಅರ್ಥ. ಆದರೆ ಆ ಊರಿನಲ್ಲಿ ಒಂದೇ ಒಂದು ಕ್ರೈಮು ನಡೆಯೋಲ್ಲ. ಪೊಲೀಸ್ ಸ್ಟೇಷನ್ ಇದ್ದರೂ, ಅಲ್ಲಿ ಪೊಲೀಸರಿಗೆ ಕೆಲಸವೇನೂ ಇಲ್ಲ. ಹೀಗೆ ಕ್ರೈಮ್‌ಗಳೇ ನಡೆಯದ ಊರಿಗೆ ವರ್ಗವಾಗಿ ಬರುವ ಅಧಿಕಾರಿ ಶಿವ (ರಾಜ್ ಬಿ ಶೆಟ್ಟಿ). ಆತನಿಗೂ ಕೆಲಸ ಮಾಡಬೇಕೆನ್ನುವ ಉಮೇದು ಏನೂ ಇರೋದಿಲ್ಲ. ಹೊಂಟೆ ತುಂಬಾ ಸಾರಾಯಿ ಕುಡಿಯೋದು, ಹೆಂಡ್ತಿಯಿಂದ ಬೈಯಿಸಿಕೊಳ್ಳುವುದು ಅವನಿಗೆ ನೆಮ್ಮದಿ ನೀಡುತ್ತದೆ. ಹೀಗೆ ಯಾವಾಗಲೂ ನಶೆಯಲ್ಲಿ ಇರುವ ಶಿವನಿಗೆ ನಶೆ ಎಲ್ಲಾ ಇಳಿದು, ಮೈಯೆಲ್ಲಾ ಕಣ್ಣಾಗಿ ಇರುವಂತಹ ಪರಿಸ್ಥಿತಿ ರಕ್ಕಸಪುರದಲ್ಲಿ ಉದ್ಭವಿಸುತ್ತದೆ. ಆ ಊರಿನ ಹೆಣ್ಮಕ್ಕಳು ಸಾಲು ಸಾಲಾಗಿ ಸಮಾಧಿ ಸೇರುತ್ತಿದ್ದರೆ, ಇತ್ತ ಶಿವನಿಗೆ ಟೆನ್ಷನ್‌ಗೆ ಜಾಸ್ತಿ ಆಗುತ್ತ ಹೋಗುತ್ತದೆ. ಹೀಗೆ ದಿಢೀರ್ ಅಂತ ರಕ್ಕಸಪುರಕ್ಕೆ ಎಂಟ್ರಿಯಾದ ಆ ರಾಕ್ಷಸ ಯಾರು ಅನ್ನೋದೇ ಕುತೂಹಲ. ಆ ರಾಕ್ಷಸನ ಬೇಟೆಯಾಡುವುದಕ್ಕೆ ಶಿವ ಏನೆಲ್ಲಾ ತಂತ್ರಗಳನ್ನ ಉಪಯೋಗಿಸುತ್ತಾನೆ ಎಂಬುದೇ ಇಲ್ಲ ಕುತೂಹಲಕರ!
ರವಿ ಸಾರಂಗ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದರೂ, ಬಹಳ ಅಚ್ಚುಕಟ್ಟಾಗಿ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಆರಂಭದಲ್ಲಿ ಸಿಂಪಲ್ ಆಗಿಯೇ ಶುರುವಾಗುವ ಸಿನಿಮಾ, ಕೆಲವೇ ನಿಮಿಷಗಳಲ್ಲಿ ತನ್ನ ಬಿಗಿಯಾದ ನಿರೂಪಣೆಯಿಂದ ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಳ್ಳುತ್ತದೆ. ಮೊದಲರ್ಧ ಸರಾಗವಾಗಿ ಮುಗಿಯುವ ʻರಕ್ಕಸಪುರದೋಳ್ʼ ಸಿನಿಮಾವು, ದ್ವಿತೀಯಾರ್ಧದಲ್ಲಿ, ಅದರಲ್ಲೂ ಕಡೆಯ 30 ನಿಮಿಷಗಳಲ್ಲಿ ಸಾಲು ಸಾಲು ಟ್ವಿಸ್ಟ್‌ಗಳಿಂದ ತುಂಬಿದೆ. ಕೊನೆಕೊನೆಗೆ ಸೀಟಿನ ತುದಿಗೆ ಕುಳಿತೇ ಪ್ರೇಕ್ಷಕ ಸಿನಿಮಾ ನೋಡಬೇಕು. ಅಷ್ಟರಮಟ್ಟಿಗೆ ರವಿ ಸಾರಂಗ ಚಿತ್ರಕಥೆಯನ್ನು ಬರೆದುಕೊಂಡಿದ್ದಾರೆ.
ಕೊಲೆ ಮಾಡುತ್ತಿರುವವರು ಯಾರು, ಯಾರು ಎಂದು ಹಲವರ ಮೇಲೆ ಅನುಮಾನ ಮೂಡುವಂತೆ ಮಾಡಿ, ಕ್ಲೈಮ್ಯಾಕ್ಸ್‌ನಲ್ಲಿ ಯಾರೂ ನಿರೀಕ್ಷೆ ಮಾಡದ ಟ್ವಿಸ್ಟ್ ನೀಡುವ ರವಿ ಸಾರಂಗ, ಖಳನ ಪಾತ್ರಕ್ಕೆ ಉತ್ತಮ ಕಲಾವಿದನ ಆಯ್ಕೆ ಮಾಡಿದ್ದಾರೆ. ಅದು ಇಡೀ ಚಿತ್ರದ ಗೆಲುವಿಗೆ ಬಹಳ ಸಹಕಾರಿಯಾಗಿದೆ. ಇಲ್ಲಿ ಹೀರೋ ಮತ್ತು ಖಳನಿಗೆ ಒಂದೇ ಮಾದರಿಯ ಸಮಸ್ಯೆ ಇರುತ್ತದೆ. ಆದರೆ, ಅದು ಒಬ್ಬರಿಗೆ ಪಾಸಿಟಿವ್ ಆಗಿದ್ದರೆ, ಮತ್ತೊಬ್ಬರಿಗೆ ನೆಗೆಟಿವ್ ಆಗಿರುತ್ತದೆ. ಅದು ಹೇಗೆ ಎಂಬುದೇ ಇಲ್ಲಿ ಮತ್ತೊಂದು ಟ್ವಿಸ್ಟ್.

ನೋಡಿರಿ

