ಬಾಲಿವುಡ್ ಸಿನಿಮಾದಲ್ಲಿ ರಾವಣನಾಗಿ ರಾಕಿಭಾಯ್ – 15 ದಿನ ಕಾಲ್ ಶೀಟ್.. ಹೇಗಿರಲಿದೆ ಯಶ್ ಲುಕ್?

ಬಾಲಿವುಡ್ ಸಿನಿಮಾದಲ್ಲಿ ರಾವಣನಾಗಿ ರಾಕಿಭಾಯ್ – 15 ದಿನ ಕಾಲ್ ಶೀಟ್.. ಹೇಗಿರಲಿದೆ ಯಶ್ ಲುಕ್?

ಕೆಜಿಎಫ್ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಕಮಾಲ್ ಮಾಡಿರುವ ನಟ ಯಶ್ ಇದೀಗ ಬಾಲಿವುಡ್ ನಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದ್ದರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪೌರಾಣಿಕ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಅನ್ನೋ ಮಾತುಗಳು ಶುರುವಾಗಿವೆ. ಅದೂ ಕೂಡ ರಾಕಿಭಾಯ್ ಈ ಬಾರಿ ರಾವಣನಾಗಿ ಆರ್ಭಟಿಸುವ ಎಲ್ಲಾ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಸಲಾರ್ ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಯಶ್, ಜ್ಯೂ.ಎನ್‌ಟಿಆರ್ – ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ ಪ್ರಶಾಂತ್ ನೀಲ್

ಬಾಲಿವುಡ್ ನಲ್ಲಿ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಮೊದಲೆಲ್ಲಾ ಸಿನಿಮಾ ಅಂದ್ರೆ ಬಾಲಿವುಡ್ ಅನ್ನುವ ಹಾಗೇ ಮಾತ್ರ ಇತ್ತು. ಆದರೀಗ ಸೌತ್ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೇ ಕಾರಣಕ್ಕೆ ಯಶ್ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಬಾಲಿವುಡ್ ನಲ್ಲಿ ಈಗ ರಾಮಾಯಣ (Ramayana) ಸಿನಿಮಾ ಮಾಡಲಾಗುತ್ತಿದೆ. ಅದರಲ್ಲೂ ಈ ಸಿನಿಮಾದಲ್ಲಿ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ. ಯಶ್ ಏನೂ ಹೇಳದೇ ಇದ್ದರೂ, ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಮಧು ಮಾಂಟೇನ್ ಅವರು ಯಶ್ ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದರು. ಅವರೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಮಾತನಾಡಿದ್ದರು. ಅದು ಈಗ ನಿಜವಾದಂತೆ ಕಾಣುತ್ತಿದೆ. ಈಗಾಗಲೇ ಯಶ್ ಲುಕ್ ಟೆಸ್ಟ್ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಸಿನಿಮಾಗಾಗಿ ಅವರು 15 ದಿನಗಳ ಕಾಲ ಕಾಲ್ ಶೀಟ್ ಕೂಡ ನೀಡಿದ್ದಾರೆ ಎನ್ನಲಾಗುತ್ತಿದೆ.

ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 2024ರಲ್ಲಿ ಈ ಸಿನಿಮಾ ಸೆಟ್ಟೇರಬಹುದು ಎಂದು ಅಂದಾಜಿಸಲಾಗಿದೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ. ಸದ್ಯ ಯಶ್ ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ದೇಶ ವಿದೇಶ ಸುತ್ತುತ್ತಿದ್ದಾರೆ. ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ. ರಾಮಾಯಣ ಸಿನಿಮಾ ಶುರುವಾಗುವ ಹೊತ್ತಿಗೆ ಹೊಸ ಸಿನಿಮಾದ ಬಹುತೇಕ ಕೆಲಸ ಮುಗಿಯುವ ಸಾಧ್ಯತೆ ಇದ್ದು, ಅದಕ್ಕಾಗಿ ಈ ಸಿನಿಮಾವನ್ನು ಯಶ್ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Shantha Kumari