ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿಗೆ ಶಾಕ್‌ ಕೊಟ್ಟ ಎಸ್‌.ಟಿ ಸೋಮಶೇಖರ್‌!

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಬಿಜೆಪಿಗೆ ಶಾಕ್‌ ಕೊಟ್ಟ ಎಸ್‌.ಟಿ ಸೋಮಶೇಖರ್‌!

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ 9 ಗಂಟೆಯಿಂದಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಹೊತ್ತಲ್ಲೇ ಬಿಜೆಪಿ ಶಾಸಕ ಎಸ್‌.ಟಿ ಸೋಮಶೇಖರ್‌ ಅವರು ತಮ್ಮ ಪಕ್ಷಕ್ಕೆ ಶಾಕ್‌ ಕೊಟ್ಟಿದ್ದಾರೆ. ಸೋಮಶೇಖರ್‌ ಕಾಂಗ್ರೆಸ್ ಪರ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ.

ಅಡ್ಡ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌.ಟಿ ಸೋಮಶೇಖರ್‌ ಅವರು, ಆತ್ಮಸಾಕ್ಷಿಯ ಮತ ಚಲಾವಣೆ ‌ಮಾಡಿದ್ದೇನೆ ಎಂದು ಹೇಳಿದ್ದಾರೆ. ಸೋಮಶೇಖರ್‌ ಅವರ ನಡೆ ಈಗ ಬಿಜೆಪಿ ಪಾಳಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಯಂಗ್ ಕ್ರಿಕೆಟರ್ಸ್‌ಗೆ ಕ್ಯಾಪ್ಟನ್ ಪ್ರೋತ್ಸಾಹ – ಯುವ ಪಡೆ ಜೊತೆ ಗೆಲುವಿನ ಕೇಕೆ ಹಾಕಿದ ರೋಹಿತ್ ಶರ್ಮಾ

ಶಾಸಕ ಎಸ್​ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್​ ಅಶೋಕ್ ಕೊಠಡಿಯಲ್ಲಿ ಸಭೆ ಸೇರಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ “ತಲೆ ಕೆಡಿಸಿಕೊಳ್ಳುವುದು ಬೇಡ, ಅದು ಗೊತ್ತಿದ್ದ ವಿಷಯ” ಎಂಬ ಸಮಾಧಾನದ ಮಾತುಗಳನ್ನು ಆಡಿದ್ದಾರೆ.

ಬಿಜೆಪಿ ತನ್ನ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಈ ಮೂಲಕ ಎಲ್ಲ ಶಾಸಕರು ರಾಜ್ಯಸಭೆ ಚುನಾವಣೆಗೆ ಹಾಜರಾಗಬೇಕು. ಹಾಗೇ ಪಕ್ಷ ಸೂಚಿಸುವ ಅಭ್ಯರ್ಥಿಗೆ ಮತ ಹಾಕಬೇಕು. ಆದರೆ ಇಲ್ಲಿ ಶಾಸಕ ಎಸ್​ಟಿ ಸೋಮಶೇಖರ್​ ಅಡ್ಡ ಮತದಾನ ಮಾಡಿದ್ದು, ಬಿಜೆಪಿಯ ಮುಂದಿನ ನಡೆ ಏನು ಎಂಬುವುದು ಕಾದು ನೋಡಬೇಕಿದೆ. ಇನ್ನು ವಿಪ್​ ಉಲ್ಲಂಘನೆ ಮಾಡಿದರೆ ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕಾಂಗ ಪಕ್ಷದ ನಾಯಕರು ಇಲ್ಲವೇ ಮುಖ್ಯ ಸಚೇತಕರು ಸ್ಪೀಕರ್‌ಗೆ ದೂರು ಸಲ್ಲಿಸಲು ಅವಕಾಶ ಇದೆ. ಆಗ ಶಾಸಕರು, ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

Shwetha M