ಖ್ಯಾತ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ನಿಧನ –ಹುಟ್ಟೂರಿನಲ್ಲಿ ಇಂದು ಅಂತ್ಯಕ್ರಿಯೆ

ಖ್ಯಾತ ಹಾಸ್ಯ ನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟೆ ಅವರು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿಯ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ರಾಜು ತಾಳಿಕೋಟೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಮಂಗಳವಾರ ಸಂಜೆ ಹೀಗೆ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ಮಾಯ
ಕಳೆದ ಕೆಲವು ದಿನಗಳಿಂದ ರಾಜು ತಾಳಿಕೋಟೆ ಅವರು ಶೈನ್ ಶೆಟ್ಟಿ ಅಭಿನಯದ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಭಾನುವಾರ ರಾತ್ರಿ 12 ಗಂಟೆ ಹೊತ್ತಿಗೆ ರಾಜು ತಾಳಿಕೋಟೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಶೈನ್ ಶೆಟ್ಟಿ ಅವರ ತಂಡ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಸದ್ಯ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರವು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿದೆ. ಇಂದು ಪಾರ್ಥಿವ ಶರೀರವು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಗಿದೆ. ಚಿಕ್ಕ ಸಿಂದಗಿಯಲ್ಲಿರುವ ಅವರ ಇಷ್ಟದ ತೋಟದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ರಾಜುತಾಳಿಕೋಟೆ ಅವರ ಮಗ ತಿಳಿಸಿದ್ದಾರೆ.
ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ರಾಜು ತಾಳಿಕೋಟೆ ನಿರ್ದೇಶಕ ಆನಂದ್ ಪಿ.ರಾಜು ಅವರ ‘ಹೆಂಡ್ತಿ ಅಂದ್ರೆ ಹೆಂಡ್ತಿ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿರಂಗಕ್ಕೂ ಬಂದರು. ನಂತರ ಕೆಲ ಪಾತ್ರಗಳಲ್ಲಿ ಅಭಿನಯ ಮಾಡಿದ್ದರೂ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಯೋಗರಾಜ್ ಭಟ್ ಅವರ ಮನಸಾರೆ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. ಮನಸಾರೆ ಬಳಿಕ ಪವರಂಗಿ, ಪುನೀತ್ ರಾಜ್ಕುಮಾರ್ ಜೊತೆ ಜಾಕಿ ಸಿನಿಮಾ, ಸುಗ್ರೀವಾ, ಮೈನಾ ಹೀಗೆ 35ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ರಾಜು ತಾಳಿಕೋಟೆ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕ ಸಿಂದಿಗಿ ಗ್ರಾಮದವರು. ಮೂಲ ಹೆಸರು ರಾಜೇಸಾಬ ಮುಕ್ತುಮಸಾಬ್ ತಾಳಿಕೋಟೆ. ಪ್ರಸ್ತುತ ತಾಳಿಕೋಟಿ ಗ್ರಾಮದಲ್ಲಿ ಕುಟಂಬದೊಡನೆ ವಾಸವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿದ್ದರು. ಸದ್ಯ ಅವರು ಧಾರವಾಡ ರಂಗಾಯಣ ನಿರ್ದೇಶಕರೂ ಆಗಿದ್ದರು.
ಖಾಸ್ಗತೇಶ್ವರ ನಾಟ್ಯ ಸಂಘದ ಸಂಚಾಲಕರಾಗಿ ರಾಜ್ಯಾದ್ಯಂತ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಮುಖ್ಯವಾಗಿ ಕುಡುಕರ ಜೀವನದ ಆಟಾಟೋಪಗಳನ್ನು ಹಾಸ್ಯವಾಗಿ ಚಿತ್ರಸಿದ ‘ಕಲಿಯುಗದ ಕುಡುಕ’ ನಾಟಕದ ಮುಖಾಂತರ ರಾಜ್ಯಾದ್ಯಂತ ಅವರು ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು.
ಇವರ ತಂದೆ ತಾಯಿಗಳು ಖಾಸ್ಗತೇಶ್ವರ ನಾಟ್ಯ ಸಂಘ ಸ್ಥಾಪಿಸಿ ರಾಜ್ಯಾದ್ಯಂತ ಪ್ರದರ್ಶನಕ್ಕೆ ಹೋಗುತ್ತಿದ್ದರಿಂದ ನಾಲ್ಕನೇ ತರಗತಿಯಲ್ಲೇ ಇವರು ಶಾಲೆಗೆ ವಿದಾಯ ಹೇಳುತ್ತಾರೆ. ತಂದೆಯ ನಂತರ ಇವರು ಮತ್ತು ಇವರ ಅಣ್ಣ ಸೇರಿ ನಾಟಕ ಕಂಪನಿ ನಡೆಸುತ್ತಾರೆ. ಇವರು ಮಾಡಿರದ ಕೆಲಸವಿಲ್ಲ. ರೋಡಿನಲ್ಲಿ ಚಕ್ಕುಲಿ ಮಾರುವುದು, ಹೋಟೆಲ್ ಕ್ಲೀನರ್ ಆಗಿ, ಗೇಟ್ ಕೀಪರ್ ಆಗಿ ಹೀಗೆ ಹೊಟ್ಟೆಪಾಡಿಗಾಗಿ ಹತ್ತು ಹಲವು ಕೆಲಸಗಳನ್ನು ರಾಜು ತಾಳಿಕೋಟೆ ಅವರು ಮಾಡಿದ್ದಾರೆ.
ಹಲವು ಪ್ರಶಸ್ತಿಗಳು: ಅವರಿಗೆ ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕೆಸೇಟ್ ಕಿಂಗ್, ಕನ್ನಡದ ಸೆಂದಿಲ್ ಸೇರಿ ಹಲವು ಬಿರುದುಗಳಿದ್ದವು. 2011ರಲ್ಲಿ ಫೀಲ್ಮ್ಫೇರ್ ಅವಾರ್ಡ್, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯ ಪಾಪ್ಯುಲರ್ ಅವಾರ್ಡ್ ಹಾಗೂ 2017ರಲ್ಲಿ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಅವರಿಗೆ ನೀಡಲಾಗಿತ್ತು.

ನೋಡಿರಿ

