“ನನ್ನ ಫೋಟೋ, ಧ್ವನಿ ಬಳಸಿದ್ರೆ ಹುಷಾರ್” – ರಜನಿಕಾಂತ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೆಲ ವಾಣಿಜ್ಯ ಕಂಪನಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಅವರ ಫೋಟೋ, ವ್ಯಕ್ತಿತ್ವ, ಹೆಸರು, ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಬಾರದು ಎಂದು ನೋಟಿಸ್ ನೀಡಿದ್ದಾರೆ.
ಕೆಲ ವಾಣಿಜ್ಯ ಕಂಪನಿಗಳು ರಜನಿಕಾಂತ್ ಅವರ ಅನುಮತಿ ಪಡೆಯದೆ ಫೋಟೋ, ಹೆಸರು, ಧ್ವನಿಯನ್ನು ಬಳಸುತ್ತಿದ್ದಾರೆ. ಅಲ್ಲದೇ, ತಮ್ಮ ಗೌರವಕ್ಕೆ ಧಕ್ಕೆ ತರುವಂತೆ ಕೆಲವು ಕಡೆ ಫೋಟೋ, ಧ್ವನಿ ಬಳಕೆ ಮಾಡಿರುವ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ತಮ್ಮ ಹೆಸರು ಮಾತ್ರವಲ್ಲ, ತಮ್ಮ ಸ್ಟೈಲ್, ಸಿನಿಮಾದ ತುಣುಕು, ಧ್ವನಿ ಹಾಗೂ ಮ್ಯಾನರಿಸಂ ಅನ್ನು ಬಳಸಬಾರದು ಎಂದು ಸಾರ್ವಜನಿಕವಾಗಿ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಸೆಲ್ಫಿ ತೆಗೆಯಲು ಬಂದ ಅಭಿಮಾನಿಯ ಮೊಬೈಲ್ ಕಿತ್ತೆಸೆದ ನಟ ರಣಬೀರ್ ಕಪೂರ್ – ವಿಡಿಯೋ ವೈರಲ್
ರಜನಿಕಾಂತ್ ಅರಿವಿಗೆ ಬಾರದಂತೆ ಅವರು ಫೋಟೋ, ವಿಡಿಯೋ ತುಣುಕು, ಧ್ವನಿ ಮತ್ತು ವಿವಿಧ ಸ್ಟೈಲ್ ನ ಚಿತ್ರಗಳನ್ನು ವಾಣಿಜ್ಯ ಬಳಕೆಗಾಗಿ ಬಳಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ನೋಟಿಸ್ ಅನ್ನು ಅವರು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ರಜನಿಕಾಂತ್ ತಮ್ಮ ಅನುಮತಿ ಪಡೆದು ಬಳಸುವಂತೆಯೂ ಮನವಿ ಮಾಡಿದ್ದಾರೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಈ ಹಿಂದೆ ಇಂಥದ್ದೊಂದು ಸಾರ್ವಜನಿಕ ನೋಟಿಸ್ ನೀಡಿದ್ದರು. ವಾಣಿಜ್ಯ ಉದ್ದೇಶ ಇಟ್ಟುಕೊಂಡು ಅಮಿತಾಬ್ ಫೋಟೋ, ಧ್ವನಿ ಮತ್ತು ಸಿನಿಮಾದ ತುಣುಕುಗಳನ್ನು ಬಳಸಿದವರ ವಿರುದ್ಧ ಚಾಟಿ ಬೀಸಿದ್ದರು. ಕಾನೂನು ಕ್ರಮಕ್ಕೂ ಅವರು ಮುಂದಾಗಿದ್ದರು. ಇದೀಗ ರಜನಿಕಾಂತ್ ಕೂಡ ಅದೇ ಹಾದಿಯನ್ನು ಹಿಡಿದಿದ್ದಾರೆ.