RCB ಕ್ಯಾಪ್ಟನ್ ಕೋಟಿಗಳ ಒಡೆಯ.. ಇದ್ರಿಂದಲೇ ರಜತ್ ಲಕ್ ಚೇಂಜ್ – ಪಾಟಿದಾರ್ ಆದಾಯ ಡಬಲ್ ಆಗಿದ್ಹೇಗೆ?

ರಜತ್ ಪಾಟೀದಾರ್.. ಈಗ ಕ್ರಿಕೆಟ್ ಲೋಕದ ಸ್ಟಾರ್. ಮಧ್ಯಮ ಕ್ರಮಾಂಕದಲ್ಲಿ ಆಡೋ ಪಾಟಿದಾರ್ ಈಗ ಆರ್ಸಿಬಿ ಟೀಮ್ ನ ಸಾರಥಿಯಾಗಿದ್ದಾರೆ. 2025 ರಲ್ಲಿ ಆರ್ಸಿಬಿ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನಡೆಸಿಕೊಂಡು ಹೋಗ್ತಿದ್ದಾರೆ. ರಜತ್ ನಾಯಕತ್ವದಲ್ಲಿ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಟೀಮ್ ಬಿಲಿಷ್ಠವಾಗಿದೆ. ಇದೀಗ ವರ್ಷದಿಂದ ವರ್ಷಕ್ಕೆ ಪಾಟೀದಾರ್ ಇನ್ಕಮ್ ಡಬಲ್ ಆಗ್ತಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಕರಿನೆರಳು – ಶಾಲೆಗಳಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ
ಕ್ರೀಸ್ ಗೆ ಎಂಟ್ರಿ ಕೊಡ್ತಿದ್ದಂತೆ ಸ್ಫೋಟಕ ಬ್ಯಾಟಿಂಗ್ ಮಾಡೋದ್ರಲ್ಲಿ ರಜತ್ ಪಾಟಿದಾರ್ ಎಕ್ಸಪರ್ಟ್. ಮಿಡಲ್ ಓವರ್ಗಳಲ್ಲಿ ಆರ್ಸಿಬಿ ಆಪತ್ಬಾಂಧವ. ಫಾಸ್ಟ್ ಆಗಿ ರನ್ ಕಲೆಹಾಕೋ ಪಾಟಿದಾರ್, ಎದುರಾಳಿಗಳ ಪ್ಲಾನ್ ಉಲ್ಟಾ ಮಾಡೋದ್ರಲ್ಲಿ ನಿಸ್ಸೀಮರು.. ತಮ್ಮ ಅದ್ಭುತ ಆಟದಿಂದಲೇ ಗಮನ ಸೆಳೆದ ಪಾಟಿದಾರ್ ಈಗ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ರಜತ್ ವೈಯಕ್ತಿಕ ಜೀವನ, ಅವ್ರ ಆದಾಯದ ಬಗ್ಗೆ ತಿಳಿದುಕೊಳ್ಳಲು ಅವ್ರ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಅಂದ್ಹಾಗೆ, ರಜತ್ ಪಾಟಿದಾರ್, ಮಧ್ಯಪ್ರದೇಶದ ಇಂಧೋರ್ ನಲ್ಲಿ ಜೂನ್ 1, 1993ರಲ್ಲಿ ಜನಿಸ್ತಾರೆ. ಅವ್ರ ಪೂರ್ತಿ ಹೆಸ್ರು ರಜತ್ ಮನೋಹರ್ ಪಾಟೀದಾರ್. ರಜತ್ ಪಾಟಿದಾರ್ ಅವರ ತಂದೆಯ ಹೆಸರು ಮನೋಹರ್ ಪಾಟಿದಾರ್. ತಾಯಿ ಗೃಹಿಣಿ. ರಜರ್ ಗೆ ಮಹೇಂದ್ರ ಪಾಟಿದಾರ್ ಮತ್ತು ಸುನೀತಾ ಪಾಟಿದಾರ್ ಎಂಬ ಸಹೋದರ ಸಹೋದರಿ ಇದ್ದಾರೆ. ತಂದೆ ಮನೋಹರ್ ಪಾಟಿದಾರ್ ಇಂದೋರ್ ನಲ್ಲಿ ಉದ್ಯಮಿ ಆಗಿದ್ದಾರೆ. ರಜತ್ ಪಟಿದಾರ್ ತಮ್ಮ ಎಂಟನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ರಜತ್ ಆಫ್-ಸ್ಪಿನ್ ಬೌಲರ್ ಆಗಿದ್ದರು. ಅಂಡರ್-15 ಹಂತದ ನಂತರ ಅವರು ಹೆಚ್ಚು ಬ್ಯಾಟಿಂಗ್ ಕಡೆ ಗಮನ ಹರಿಸಿದರು. ಅವಕಾಶ ಸಿಕ್ಕಗೆಲ್ಲಾ ಅಬ್ಬರಿಸಿದ ಪಾಟಿದಾರ್ ಕಠಿಣ ಪರಿಶ್ರಮದಿಂದ ಟೀಮ್ ಇಂಡಿಯಾದಲ್ಲಿ ಆಡುವ ಕನಸನ್ನು ನನಸಾಗಿಸಿಕೊಂಡರು. 2015ರಲ್ಲಿ ಮಧ್ಯಪ್ರದೇಶದ ರಣಜಿ ತಂಡದಲ್ಲಿ ಆಡುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನವನ್ನು ಆರಂಭಿಸಿದ ಪಾಟಿದಾರ್, 2018ರ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ಪರವಾಗಿ ಅತ್ಯಧಿಕ ರನ್ ಗಳಿಸಿದ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಬಳಿಕ 2021ರಲ್ಲಿ ಐಪಿಎಲ್ ಗೆ ಸೆಲೆಕ್ಟ್ ಆಗ್ತಾರೆ. ಆರ್ಸಿಬಿ ಫ್ರಾಂಚೈಸಿ 20 ಲಕ್ಷಕ್ಕೆ ರಜತ್ ಪಾಟೀದಾರ್ ಖರೀದಿಸುತ್ತೆ. ಆದ್ರೆ 2022ರ ಹರಾಜು ಪ್ರಕ್ರಿಯೆಯಲ್ಲಿ ಪಾಟಿದಾರ್ ಮಾರಾಟವಾಗದೇ ಉಳಿದಿದ್ದರು. ಆದರೆ ಲವ್ಲೀತ್ ಸಿಸೋಡಿಯಾ ಅನಿರೀಕ್ಷಿತವಾಗಿ ಗಾಯಗೊಂಡ ಕಾರಣಕ್ಕೆ, ರಜತ್ ಪಾಟೀದಾರ್ ಮತ್ತೆ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದರು.
21 ಡಿಸೆಂಬರ್, 2023ರಲ್ಲಿ ರಜತ್ ಪಾಟೀದಾರ್ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿದ್ದರು. ಅದೇ ರೀತಿ 2 ಫೆಬ್ರವರಿ, 2024ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ರಜತ್ ಪಾಟೀದಾರ್ ಅವರು ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡಿದ್ದರು. ಇದೀಗ ಪಾಟಿದಾರ್ ಉತ್ತಮ ಪರ್ಫಾಮೆನ್ಸ್ ಜೊತೆಗೆ ಅವ್ರ ಆದಾಯ ಕೂಡ ವರ್ಷದಿಂದ ವರ್ಷಕ್ಕೆ ಡಬಲ್ ಆಗ್ತಿದೆ.
ರಜತ್ ಪಾಟಿದಾರ್ ಕ್ರಿಕೆಟ್ನಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಐಪಿಎಲ್ ವೇತನ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ. ಐಪಿಎಲ್ 2021ರಲ್ಲಿ ರಜತ್ ಮೂಲ ಬೆಲೆ 20 ಲಕ್ಷ ರೂ. ಪಡೆದಿದ್ದರು. ನಂತರ 2023ರ ಆವೃತ್ತಿಯಲ್ಲಿ 20 ಲಕ್ಷ ಆರ್ಸಿಬಿ ಫ್ರಾಂಚೈಸಿ ನೀಡಿತ್ತು. ಆದ್ರೆ 2024ರಲ್ಲಿ ಆರ್ಸಿಬಿ 50 ಲಕ್ಷ ರೂಪಾಯಿಗೆ ಉಳಿಸಿಕೊಂಡಿತ್ತು.. ಆದರೆ, ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಪಾಟಿದಾರ್ ಅವರಿಗೆ ಸುಮಾರು 11 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಇದು ಕೂಡ ಅವರ ಆದಾಯ ಗಳಿಕೆ ಹೆಚ್ಚಲು ಕಾರಣವಾಗಿದೆ. ಬಿಸಿಸಿಐನ ಗ್ರೇಡ್ ಸಿ ಒಪ್ಪಂದದ ಭಾಗವಾಗಿರುವ ರಜತ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ವಾರ್ಷಿಕ 1 ಕೋಟಿ ರೂ. ಗಳಿಸುತ್ತಿದ್ದಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ ಹಾಗೇ ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಸಂಭಾವನೆ ಪಡಿತಾ ಇದ್ದಾರೆ. ಅಷ್ಟೇ ಅಲ್ಲದೇ ಕೆಲ ಕಂಪನಿಯ ಜಾಹಿರಾತು ಮೂಲಕವೂ ಪಾಟಿದಾರ್ ಹಣ ಗಳಿಸ್ತಿದ್ದಾರೆ. ಇದೀಗ ಪಾಟೀದಾರ್ ವಾರ್ಷಿಕ ಆದಾಯ 16 ರಿಂದ 18 ಕೋಟಿ ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ರಜತ್ ಪಾಟೀದಾರ್ ಅವರ ಕ್ರಿಕೆಟ್ ಜೀವನ ಹಲವು ಏಳು-ಬೀಳುಗಳನ್ನು ಕಂಡಿದ್ದು, ಇದೀಗ ಆರ್ಸಿಬಿಯಂತಹ ಜನಪ್ರಿಯ ಫ್ರಾಂಚೈಸಿ ತಂಡದ ನಾಯಕನಾಗುವ ಮೂಲಕ ತಾವೊಬ್ಬ ಕ್ರಿಕೆಟ್ ಲೋಕದ ಸ್ಟಾರ್ ಆಟಗಾರ ಎಂಬುದನ್ನು ಸಾಬೀತು ಮಾಡಿದ್ದಾರೆ.