ರಾಜಸ್ಥಾನದಲ್ಲೂ ಯೋಗಿ 2.O ರಾಜ್ಯಭಾರ? – ರಾಣಿಯರ ಜೊತೆ ಬಾಬಾ ರೇಸ್!
ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳನ್ನ ಗೆದ್ದ ಬಿಜೆಪಿಯಲ್ಲಿ ಈಗ ಮುಖ್ಯಮಂತ್ರಿಗಳ ಆಯ್ಕೆ ಕಸರತ್ತು ಶುರುವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ಈ ಮೂರು ರಾಜ್ಯಗಳ ಹೊಸ ಮುಖ್ಯಮಂತ್ರಿ ಯಾರು ಅನ್ನೋದು ಸದ್ಯಕ್ಕಂತೂ ನಿಗೂಢವಾಗಿದೆ. ಆದ್ರೆ ಈ ಮೂರು ರಾಜ್ಯಗಳ ಪೈಕಿ ರಾಜಸ್ಥಾನದಲ್ಲಿ ಮುಂದಿನ ಸಿಎಂ ಯಾರಾಗಬಹುದು ಅನ್ನೋದು ಇನ್ನಷ್ಟು ಕುತೂಹಲ ಕೆರಳಿಸಿದೆ. ಅದಕ್ಕೆ ಸಿಎಂ ರೇಸ್ನಲ್ಲಿರುವ ಬಾಬಾ.. ಈಗಾಗ್ಲೇ ಉತ್ತರಪ್ರದೇಶವನ್ನ ಕೇಸರಿಧಾರಿ ಯೋಗಿ ಆಳುತ್ತಿದ್ದಾರೆ. ದೇಶದಲ್ಲೇ ಅತ್ಯಂತ ಪ್ರಭಾವಿ ಮುಖ್ಯಮಂತ್ರಿಗಳಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಾಲಿಗಂತೂ ಯೋಗಿ ಆದಿತ್ಯನಾಥ್ ಸ್ಟಾರ್ ಸಿಎಂ ಆಗಿದ್ದಾರೆ. ಇದೀಗ ಕೇಸರಿ ಪಾಳಯ ಮತ್ತೊಬ್ಬ ಕಾವಿಧಾರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ರಾಜಸ್ಥಾನದಲ್ಲೂ ಬಾಬಾ ಆಳ್ವಿಕೆ ಶುರುವಾಗುತ್ತಾ ಅನ್ನೋ ವಿಚಾರದ ಭಾರಿ ಚರ್ಚೆಯಾಗ್ತಿದೆ. ಪೀಠದಿಂದ ಮುಖ್ಯಮಂತ್ರಿ ಪಟ್ಟಕ್ಕೇರೋ ಕನಸು ಕಾಣ್ತಿರೋ ಬಾಬಾ ಬಾಲಕ್ನಾಥ್ ಯಾರು? ಬಾಬಾ ಜೊತೆಗೆ ರಾಜಸ್ಥಾನ ಸಿಎಂ ರೇಸ್ನಲ್ಲಿರೋ ಘಟಾನುಘಟಿಗಳು ಯಾರೆಲ್ಲಾ? ಬಿಜೆಪಿಯೊಳಗೆ ನಡೀತಿರೋ ಬಿಸಿಬಿಸಿ ಬೆಳವಣಿಗೆಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ..
ಇದನ್ನೂ ಓದಿ:ಇಂಡಿಯಾ ಮೈತ್ರಿಕೂಟ ಖೇಲ್ ಖತಂ? – ಲೋಕಸಭೆಯಲ್ಲಿ ಏನಾಗುತ್ತೆ?
115 ಕ್ಷೇತ್ರಗಳನ್ನ ಗೆದ್ದು ಕಾಂಗ್ರೆಸ್ ಸರ್ಕಾರವನ್ನ ಕೆಡವಿ ಬಿಜೆಪಿ ಮತ್ತೊಮ್ಮೆ ರಾಜಸ್ಥಾನದ ರಾಜ್ಯಾಭಾರಕ್ಕೆ ಮುಂದಾಗಿದೆ. ಆದ್ರೀಗ ರಾಜಸ್ಥಾನದ ರಾಜನಾಗೋಕೆ ಕೇಸರಿ ಕೋಟೆಯಲ್ಲಿ ಒಟ್ಟು 6 ಮಂದಿ ರೇಸ್ನಲ್ಲಿದ್ದಾರೆ. ಈ ಪೈಕಿ ಎಲ್ಲರ ಸೆಂಟರ್ ಆಫ್ ಅಟ್ರಾಕ್ಷನ್, ಮಾಧ್ಯಮಗಳಲ್ಲಿ ಸಾಕಷ್ಟು ಹೈಪ್ ಪಡೆದುಕೊಳ್ತಿರೋದು ಬಾಬಾ ಬಾಲಕ್ನಾಥ್. ಯೋಗಿ 2.O ಅಂತಾನೆ ಫೇಮಸ್ ಆಗ್ತಿರೋ ಈ ಬಾಬಾ ಬಗ್ಗೆ ಒಂದಷ್ಟು ವಿಚಾರಗಳನ್ನ ನೀವು ತಿಳಿದುಕೊಳ್ಳಲೇಬೇಕು.
ರಾಜಸ್ಥಾನದ ಅಲ್ವಾರ್ನಲ್ಲಿ ಮಠದ ಮುಖ್ಯಸ್ಥರಾಗಿರೋ 39 ವರ್ಷದ ಬಾಬಾ ಬಾಲಕ್ನಾಥ್ ರಾಜಸ್ಥಾನದ ಯೋಗಿ ಅಂತಾನೆ ಗುರುತಿಸಿಕೊಂಡವರು. 1984ರ ಏಪ್ರಿಲ್ 6ರಂದು ರಾಜಸ್ಥಾನದ ಅಲ್ವಾರ್ನಲ್ಲಿ ಒಬಿಸಿ ಸಮುದಾಯದ ಕುಟುಂಬದಲ್ಲಿ ಜನಿಸಿದ ಬಾಬಾ ಬಾಲಕ್ನಾಥ್ ಆಧ್ಯಾತ್ಮದತ್ತ ವಾಲುತ್ತಾ ತಮ್ಮ 6ನೇ ವಯಸ್ಸಲ್ಲೇ ಮನೆಯನ್ನ ಬಿಟ್ಟು ಬಿಡ್ತಾರೆ. ಬಾಬಾ ಬಾಲಕ್ನಾಥ್ ತಂದೆ-ತಾಯಿ ಹರಿಯಾಣದ ಬಾಬಾ ಮಸ್ತ್ ನಾಥ್ ದೇರಾ ಅವರ ಭಕ್ತರಾಗಿದ್ರು. ತಮ್ಮ ಮೊದಲ ಮಗುವನ್ನ ಬಾಬಾ ಸೇವೆಗೆ ಅಂತಾನೆ ಮುಡಿಪಾಗಿಡೋಕೆ ನಿರ್ಧರಿಸಿದ್ರು. ಹೀಗಾಗಿ 6ನೇ ವಯಸ್ಸಿಗೇ ಬಾಬಾ ಬಾಲಕ್ನಾಥ್ ಸನ್ಯಾಸತ್ವವನ್ನ ಸ್ವೀಕರಿಸ್ತಾರೆ. 2016ರಲ್ಲಿ ಬಾಬಾ ಬಾಲಕ್ನಾಥ್ ಮಸ್ತ್ ನಾಥ್ ದೇರಾ ಅವರ ಉತ್ತರಾಧಿಕಾರಿಯಾಗ್ತಾರೆ. ಬಾಬಾ ಬಾಲಕ್ನಾಥ್ ತಮ್ಮ ಗುರುಗಳ ಉತ್ತರಾಧಿಕಾರತ್ವವನ್ನ ಸ್ವೀಕರಿಸಿದಾಗ ಆ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಭಾಗಿಯಾಗಿದ್ರು. ಯೋಗಿ ಆದಿತ್ಯನಾಥ್ ಅವರಿಗೆ ಬಾಬಾ ಬಾಲಕ್ನಾಥ್ ಅತ್ಯಂತ ಆಪ್ತ ವ್ಯಕ್ತಿ. ಯೋಗಿ ಆದಿತ್ಯನಾಥ್ ನನ್ನ ಪಾಲಿನ ದೊಡ್ಡಣ್ಣ ಅಂತಾ ಈ ಹಿಂದೆಯೇ ಹೇಳಿಕೆ ಕೊಟ್ಟಿದ್ರು. ಪ್ರಬಲ ಹಿಂದುತ್ವವಾದಿಯಾಗಿರೋ ಬಾಲಕ್ನಾಥ್, ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದ್ದು ಮಾಡಿದ್ರು. ಮುಖ್ಯಮಂತ್ರಿಯಾಗೋ ಮುನ್ನ ಯೋಗಿ ಆದಿತ್ಯನಾಥ್ ಯಾವ ರೀತಿ ಎಲ್ಲೆ ಮೀರಿದ ಹೇಳಿಕೆಗಳನ್ನ ಕೊಡ್ತಿದ್ರೋ ಅದೇ ರೀತಿ ಪ್ರಚೋದನಾಕಾರಿ ಭಾಷಣಗಳನ್ನ ಮಾಡೋದ್ರಲ್ಲಿ ಬಾಬಾ ಬಾಲಕ್ನಾಥ್ ಏನೂ ಕಡಿಮೆಯೇನಿಲ್ಲ. ರಾಜಕೀಯಕ್ಕೆ ಬರೋ ಮುನ್ನವೇ ಬಾಬಾ ಬಾಲಕ್ನಾಥ್ ರಾಜಸ್ಥಾನದಲ್ಲಿ ಹೆಸರುವಾಸಿಯಾಗಿದ್ರು. ಯಾಕಂದ್ರೆ ವಿಶ್ವವಿದ್ಯಾಲಯ, ಆಸ್ಪತ್ರೆ, ಮೆಡಿಕಲ್ ಕಾಲೇಜು ಮತ್ತು ಶಾಲೆಗಳನ್ನ ಬಾಬಾ ಬಾಲಕ್ನಾಥ್ ನಡೆಸುತ್ತಿದ್ದಾರೆ. ಮೊದಲಿಂದಲೇ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಸಂಸದರಾಗಿದ್ರು. ಸಂಸದರಾದ ಮೇಲೆಯಂತೂ ಬಾಬಾ ಬಾಲಕ್ನಾಥ್ಗೆ ರಾಜಸ್ಥಾನದ ಯೋಗಿ ಅನ್ನೋ ನೇಮ್ಪ್ಲೇಟ್ ಶಾಶ್ವತವಾಗಿ ಅಂಟಿಕೊಂಡುಬಿಡ್ತು. ಬಿಜೆಪಿ ಈ ಬಾರಿ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ ತಿಜಾರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖಾನ್ ಮುಂದೆ ಬಾಬಾ ಬಾಲಕ್ನಾಥ್ರನ್ನ ಅಖಾಡಕ್ಕಿಳಿಸಿತ್ತು. ಇಮ್ರಾನ್ ಖಾನ್ ವಿರುದ್ಧ ತಮ್ಮ ಸ್ಪರ್ಧೆಯನ್ನ ಬಾಲಕ್ನಾಥ್ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ಗೆ ಹೋಲಿಕೆ ಮಾಡಿದ್ರು. ಬಿಜೆಪಿಯ ಪ್ರಯೋಗ ವರ್ಕೌಟ್ ಆಗಿದ್ದು, ಬಾಬಾ ಬಾಲಕ್ನಾಥ್ ಭಾರಿ ಅಂತರದಿಂದಲೇ ಚುನಾವಣೆ ಗೆದ್ದಿದ್ದಾರೆ. ಇದೀಗ ವಿಧಾನಸಭೆಯಲ್ಲೂ ಗೆದ್ದ ಮೇಲೆ ತಮ್ಮ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡ್ತಿದ್ದಾರೆ. ಈ ಮುಖ್ಯಮಂತ್ರಿ ರೇಸ್ನಲ್ಲಿ ಬಾಬಾ ಬಾಲಕ್ನಾಥ್ ಮುಂಚೂಣಿಯಲ್ಲಿ ನಿಂತಿದ್ದಾರೆ. ಹೀಗಾಗಿ ಮತ್ತೊಬ್ಬ ಯೋಗಿ ರಾಜಸ್ಥಾನದಲ್ಲಿ ಆಳ್ವಿಕೆ ಶುರು ಮಾಡ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ. ಆದ್ರೆ, ಬಾಬಾ ಬಾಲಕ್ನಾಥ್ ಸಿಎಂ ಪಟ್ಟಕ್ಕೇರೋದು ಅಂದುಕೊಂಡಷ್ಟು ಸುಲಭ ಇಲ್ಲ. ಯಾಕಂದ್ರೆ ರೇಸ್ನಲ್ಲಿ ಇನ್ನೂ ಆರು ಮಂದಿ ಕೇಸರಿ ಕಲಿಗಳಿದ್ದಾರೆ.
ನಂ.1: ವಸುಂಧರಾ ರಾಜೆ
ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೆ ಈಗ ಮೂರನೇ ಬಾರಿ ಸಿಎಂ ಆಗೋ ಕನಸು ಕಾಣ್ತಾ ಇದ್ದಾರೆ. ಆದ್ರೆ ರಾಜಸ್ಥಾನ ರಾಜಕೀಯದ ಪರಿಸ್ಥಿತಿ ನೋಡಿದ್ರೆ ವಸುಂಧರಾ ರಾಜೆಗೆ ಈ ಬಾರಿ ಮುಖ್ಯಮಂತ್ರಿ ಹುದ್ದೆ ಸಿಗೋದು ಅನುಮಾನವೇ. ಯಾಕಂದ್ರೆ ಚುನಾವಣಾ ಪ್ರಚಾರದ ವೇಳೆ ವಸುಂಧರಾ ರಾಜೆ ಪಕ್ಷದ ಮುಖವಾಣಿಯೇ ಆಗಿರಲಿಲ್ಲ. ಬಿಜೆಪಿ ಎಲ್ಲೂ ಕೂಡ ವಸುಂಧರಾ ರಾಜೆಯನ್ನ ಸಿಎಂ ಅಭ್ಯರ್ಥಿಯಾಗಿ ಪ್ರಾಜೆಕ್ಟ್ ಮಾಡಿಯೇ ಇರಲಿಲ್ಲ. ಪ್ರಧಾನಿ ಮೋದಿಯನ್ನ ಮುಂದಿಟ್ಟುಕೊಂಡೇ ಪ್ರಚಾರ ನಡೆಸಿತ್ತು. ಇನ್ನು ವಸುಂಧರಾ ರಾಜೆ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೂಡ ಇವೆ. ಸದ್ಯ ರಾಜಸ್ಥಾನದಲ್ಲೂ ಬಿಜೆಪಿ ಹೊಸಬರಿಗೆ ಅವಕಾಶ ಕೊಡುವ ಸಾಧ್ಯತೆಯೇ ಹೆಚ್ಚಿದೆ. ಆದ್ರೂ ಕೂಡ ವಸುಂಧರಾ ರಾಜೆ ತಾನು ಇನ್ನೂ ಪವರ್ಫುಲ್ ಅನ್ನೋದನ್ನ ತೋರಿಸೋ ಪ್ರಯತ್ನ ಮಾಡ್ತಾ ಇದ್ದಾರೆ. ಸುಮಾರು 25 ಬಿಜೆಪಿ ಶಾಸಕರು ವಸುಂಧರಾ ರಾಜೆಯನ್ನ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಮೂಲಕ ರಾಜೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದ್ರೆ, ಇದೆಲ್ಲಾ ಬಿಜೆಪಿ ಹೈಕಮಾಂಡ್ ಮುಂದೆ ನಡೆಯೋದು ಅನುಮಾನವೇ. ಯಾಕಂದ್ರೆ ಬಿಜೆಪಿಯಲ್ಲೇನಿದ್ರೂ ಹೈಕಮಾಂಡ್ ತೆಗೆದುಕೊಳ್ಳೋ ತೀರ್ಮಾನವೇ ಅಂತಿಮ. ಯಾರು ಎಷ್ಟೇ ಶಕ್ತಿ ಪ್ರದರ್ಶನ ಮಾಡಿದ್ರೂ ಅಂತಿಮವಾಗಿ ಹೈಕಮಾಂಡ್ ಆಯ್ಕೆ ಮಾಡಿದ ಮುಖ್ಯಮಂತ್ರಿಯನ್ನೇ ವಸುಂಧರಾ ರಾಜೆ ಕೂಡ ಒಪ್ಪಿಕೊಳ್ಳಲೇಬೇಕಾಗುತ್ತೆ.
ನಂ.2: ಗಜೇಂದ್ರ ಸಿಂಗ್ ಶೇಖಾವತ್
ಕೇಂದ್ರ ಸಚಿವರಾಗಿರೋ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಸಿಎಂ ರೇಸ್ನಲ್ಲಿದ್ದಾರೆ. ಬಿಜೆಪಿ ಗೆಲುವಿನಲ್ಲಿ ಶೇಖಾವತ್ರ ರೋಲ್ ಕೂಡ ದೊಡ್ಡದಿದೆ. ಕಾಂಗ್ರೆಸ್ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ರನ್ನ ಪ್ರಚಾರದ ವೇಳೆ ಶೇಖಾವತ್ ನೇರಾನೇರ ಎದುರು ಹಾಕಿಕೊಂಡಿದ್ರು. ಸಂಜೀವನಿ ಕ್ರೆಡಿಟ್ ಕಾಪರೇಟಿವ್ ಹಗರಣವನ್ನ ಹಿಡಿದುಕೊಂಡು ಗೆಹ್ಲೋಟ್ ವಿರುದ್ಧ ಸಮರ ಸಾರಿದ್ರು. 2019ರ ಲೋಕಸಭೆ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ರನ್ನ ಗಜೇಂದ್ರ ಸಿಂಗ್ ಶೇಖಾವತ್ ಮಣಿಸಿದ್ರು.
ನಂ.3: ದಿಯಾ ಕುಮಾರಿ
ರಾಜಮನೆತನದ ದಿಯಾ ಕುಮಾರಿ ರಾಜಸ್ಥಾನದ ಮತ್ತೊಬ್ಬ ಜನಪ್ರೀಯ ನಾಯಕಿ. ಮೂರು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದಿರೋ ದಿಯಾ ಕುಮಾರಿ 2019ರಲ್ಲಿ ಸಂಸದರಾಗಿ ಆಯ್ಕೆಯಾಗಿ ಲೋಕಸಭೆಗೆ ಎಂಟ್ರಿಯಾಗ್ತಾರೆ. ಸುಮಾರು 5.51 ಲಕ್ಷ ದಾಖಲೆ ಮತಗಳ ಅಂತರದಿಂದ ಗೆದ್ದಿದ್ರು. ಜೈಪುರದ ಮಗಳು ಅಂತಾನೆ ಹೆಸರುವಾಸಿಯಾಗಿರೋ ದಿಯಾ ಕುಮಾರಿ ರಾಜಮನೆತನದಿಂದ ಬಂದ್ರೂ ಡೌನ್ ಟು ಅರ್ತ್ ಸ್ವಭಾವ. ಈ ಬಾರಿ ಚುನಾವಣೆ ವೇಳೆ ರಾಜಸ್ಥಾನದುದ್ದಕ್ಕೂ ದಿಯಾ ಕುಮಾರಿ ಭರದ ಪ್ರಚಾರ ನಡೆಸಿದ್ರು. ಈಗ ತಮ್ಮ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡೋಕೆ ನಿರ್ಧರಿಸಿದ್ದು, ಹೀಗಾಗಿ ಸಿಎಂ ಸ್ಥಾನಕ್ಕೆ ವಸುಂಧರಾ ರಾಜೆಗೆ ಟಕ್ಕರ್ ಕೊಡ್ತಿರೋ ಮತ್ತೊಬ್ಬ ಮಹಿಳೆಯಾಗಿದ್ದಾರೆ.
ನಂ.4: ಅರ್ಜುನ್ ರಾಮ್ ಮೇಘಾವಾಲ್
ಕೇಂದ್ರ ಕಾನೂನು ಸಚಿವರಾಗಿರೋ ಅರ್ಜುನ್ ರಾಮ್ ಮೇಘಾವಾಲ್ಗೆ ಅತ್ಯುತ್ತಮ ಆಡತಾತ್ಮಕ ಹಿನ್ನೆಲೆ ಇದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ಕಾರದ ನಿರ್ವಹಣೆಯಲ್ಲಿ ಮೋದಿಗೆ ಬಲಗೈ ಬಂಟನಂತಿರೋ ಅರ್ಜುನ್ ಮೇಘಾವಾಲ್ ಪ್ರಧಾನಿಗೆ ಅತ್ಯಂತ ಆಪ್ತರಾಗಿದ್ದಾರೆ. ಪ್ರತಿ ಬಿಲ್ ಪಾಸ್ ಮಾಡೋ ವೇಳೆಯೂ ಅಗತ್ಯ ಬೆಂಬಲ ಸಿಗುವಂತೆ ಮಾಡುವಲ್ಲಿ, ಮೇಘಾವಾಲ್ರದ್ದು ಪ್ರಮುಖ ಪಾತ್ರವಿದೆ.
ನಂ.5: ಸಿ.ಪಿ. ಜೋಶಿ
ರಾಜಸ್ಥಾನ ಬಿಜೆಪಿ ಅಧ್ಯಕ್ಷರಾಗಿರೋ ಸಿಪಿ ಜೋಶಿ ಕೂಡ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷಿಯಾಗಿದ್ದಾರೆ. 48 ವರ್ಷದ ಸಿಪಿ ಜೋಶಿಯನ್ನ ಕಳೆದ ಮಾರ್ಚ್ನಲ್ಲಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಕ್ಷದೊಳಗಿದ್ದ ಬಣ ರಾಜಕೀಯಕ್ಕೆ ಮುಲಾಮು ಹಚ್ಚಿ, ಎಲ್ಲರನ್ನೂ ಒಟ್ಟುಗೂಡಿಸಿ ಪ್ರಚಾರ ಕೈಗೊಳ್ಳುವಲ್ಲಿ ಸಿಪಿ ಜೋಶಿ ಯಶಸ್ವಿಯಾಗಿದ್ರು. ಹೀಗಾಗಿ ಸಹಜವಾಗಿಯೇ ಸಿಎಂ ಗಾದಿಗೆ ಏರೋ ನಿರೀಕ್ಷೆಯಲ್ಲಿ ಸಿಪಿ ಜೋಶಿ ಕೂಡ ಇದ್ದಾರೆ.
ಇವಿಷ್ಟೂ ಮಂದಿ ಪೈಕಿ ಬಿಜೆಪಿ ಹೈಕಮಾಂಡ್ ಯಾರಿಗೆ ಪಟ್ಟ ಕಟ್ಟುತ್ತೋ ಗೊತ್ತಿಲ್ಲ. ಶನಿವಾರ ಅಥವಾ ಭಾನುವಾರ ಹೈಕಮಾಂಡ್ ಮೀಟಿಂಗ್ ಸೇರೋ ಸಾಧ್ಯತೆ ಇದ್ದು, ಖುದ್ದು ಪ್ರಧಾನಿ ಮೋದಿಯೇ ರಾಜಸ್ಥಾನದ ಹೊಸ ಮುಖ್ಯಮಂತ್ರಿಯನ್ನ ನೇಮಕ ಮಾಡಲಿದ್ದಾರೆ. ಕೇವಲ ರಾಜಸ್ಥಾನ ಮಾತ್ರವಲ್ಲ ಮಧ್ಯಪ್ರದೇಶ ಮತ್ತು ಛತ್ತೀಸ್ಗಢಕ್ಕೂ ಅದೇ ದಿನದಂದು ನೂತನ ಮುಖ್ಯಮಂತ್ರಿಯ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ. ಇವಿಷ್ಟು ಮೂರು ರಾಜ್ಯಗಳ ಸಿಎಂ ವಿಚಾರವಾಗಿ ಅದ್ರಲ್ಲೂ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ರೇಸ್ನಲ್ಲಿರುವವರ ಕುರಿತ ಮಾಹಿತಿ.