ವೈಭವ್ ಅಬ್ಬರಕ್ಕ ಹೈದರಾಬಾದ್ ತತ್ತರ- ರಾಜಸ್ಥಾನ್ ರಾಯಲ್ಸ್‌ ಗುಜರಾತ್ ಟೈಟಾನ್ಸ್ ಎದುರಾಳಿ

ವೈಭವ್ ಅಬ್ಬರಕ್ಕ ಹೈದರಾಬಾದ್ ತತ್ತರ- ರಾಜಸ್ಥಾನ್ ರಾಯಲ್ಸ್‌ ಗುಜರಾತ್ ಟೈಟಾನ್ಸ್ ಎದುರಾಳಿ

ರಾಜಸ್ತಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ನಡುವೆ ಐಪಿಎಲ್ ಎಲಿಮಿನೇಟರ್ ಪಂದ್ಯ ನಡೆಯಿತು. ಈ ಪಂದ್ಯವನ್ನು ವೈಭವ್ ಸೂರ್ಯವಂಶಿ vs ಎಸ್‌ಆರ್‌ಹೆಚ್ ಪಂದ್ಯ ಎಂದೇ ಹೇಳಲಾಗುತ್ತಿತ್ತು. ಕೊನೆಗೂ ಅದೇ ಸತ್ಯವಾಗಿದೆ. ವೈಭವ್ ಅಬ್ಬರಕ್ಕೆ ಹೈದರಾಬಾದ್ ತತ್ತರಿಸಿಹೋಗಿದೆ.

ಇದನ್ನೂ ಓದಿ:PLAY OFFS ಪ್ರಚಂಡ ಪಾಟಿದಾರ್ – ಅವಮಾನ ಮೆಟ್ಟಿ ಅದೃಷ್ಟವಂತನಾಗಿದ್ದೇಗೆ?

ಚಂಡೀಗಢದ ಮುಲ್ಲನ್ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಹೀನಾಯವಾಗಿ ಸೋಲಿಸಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ ಕ್ವಾಲಿಫೈಯರ್ 2ಕ್ಕೆ ಅರ್ಹತೆ ಪಡೆದಿದೆ. ಶುಕ್ರವಾರ ಗುಜರಾತ್​​ ಟೈಟನ್ಸ್ ವಿರುದ್ಧ ರಾಜಸ್ತಾನ್ ರಾಯಲ್ಸ್ ಕಾದಾಟ ನಡೆಸಲಿದೆ.

ಟಾಸ್​ ಗೆದ್ದ ಸನ್‌ರೈಸರ್ಸ್ ಹೈದ್ರಾಬಾದ್ ನಾಯಕ ಕಮಿನ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ತನ್ನ ನಿರ್ಧಾರ ಸರಿಯಲ್ಲ ಅನ್ನೋದು ಕೇವಲ 2ನೇ ಓವರ್‌ನಲ್ಲಿ ಕಮಿನ್ಸ್‌ ಗೆ ಗೊತ್ತಾಗಿದೆ. ಆರ್‌ಆರ್ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಟಾಸ್ ಗೆದ್ದ ಕಮಿನ್ಸ್ ನಿರ್ಧಾರವನ್ನೇ ಬುಡಮೇಲು ಮಾಡಿದರು. ಹೈದರಾಬಾದ್​​​​​ ಬೌಲಿಂಗ್​​ ಪಡೆಯನ್ನ ಧೂಳೀಪಟ ಮಾಡಿದರು. ಬಾಸ್ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್​​​, 5 ಬೌಂಡರಿಗಳ ಸಹಿತ 97 ರನ್​ಗಳಿಸಿ ಶತಕವಂಚಿತರಾದರು. ಬೇಬಿ ಬಾಸ್ ಔಟಾಗುತ್ತಿದ್ದಂತೆ ಜೈಸ್ವಾಲ್ ಕೂಡಾ ಕ್ಯಾಚ್ ನೀಡಿದರು. ಧ್ರುವ್ ಜುರೆಲ್ 21 ಎಸೆತಗಳಲ್ಲಿ 50 ರನ್,  ರಿಯಾನ್ ಪರಾಗ್ 26 ರನ್​ಗಳಿಸಿದರು. ವೈಭವ್ ಹಾಕಿಕೊಟ್ಟ ರನ್ ಅಡಿಪಾಯದೊಂದಿಗೆ ತಂಡ 20 ಓವರ್​​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು.

244 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ ತಂಡ 19.2 ಓವರ್​ಗಳಲ್ಲಿ 196 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲು ಕಂಡಿತು. ಸನ್​ರೈಸರ್ಸ್ ಹೈದರಾಬಾದ್ ಕಳಪೆ ಆರಂಭ ಪಡೆದುಕೊಂಡಿತು. ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಖಾತೆ ತೆರೆಯಲೇ ಇಲ್ಲ. ನಂತರ ಬಂದ ಇಶಾನ್ ಕಿಶನ್​ ಚೇಸಿಂಗ್​​ಗೆ ತಕ್ಕಂತೆ ಬ್ಯಾಟ್ ಮಾಡಿದರು. ಆದರೆ 11 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಿಡಿಸಿ 33 ರನ್​ಗಳಿಸಿ ಔಟಾದರು. ಕನ್ನಡಿಗ ಸ್ಮರಣ್ ರವಿಚಂದ್ರನ್ 4 ಎಸೆತಗಳನ್ನಾಡಿ 1 ರನ್​ಗಳಿಸಿ ಔಟಾದರು. 8 ಎಸೆತಗಳಲ್ಲಿ 17 ರನ್​​ಗಳಿಸಿದ್ದ ಸ್ಫೋಟಕ ಆಟಗಾರ ಟ್ರಾವಿಸ್​​ ಹೆಡ್​ ಕೂಡಾ ಪೆವಿಲಿಯನ್ ಸೇರಿದರು. ಹೈದರಾಬಾದ್​ ಆಪತ್ಭಾಂದವನಾಗಿದ್ದ ಹೆನ್ರಿಕ್ ಕ್ಲಾಸೆನ್ ಕೂಡಾ ತಂಡಕ್ಕೆ ನೆರವಾಗಲಿಲ್ಲ. 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 18 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಹೈದರಾಬಾದ್​ ಹೀನಾಯವಾಗಿ ಸೋಲುವ ಸ್ಥಿತಿಯಲ್ಲಿತ್ತು. ಆದರೆ ನಿತೀಶ್ ಕುಮಾರ್​ ರೆಡ್ಡಿ ಹಾಗೂ ಸಲೀಲ್ ಅರೋರಾ 56 ರನ್​​​​ಗಳ ಜೊತೆಯಾಟ ನಡೆಸಿ ಹೈದರಾಬಾದ್​ ಅಭಿಮಾನಿಗಳ ಮುಖದಲ್ಲಿ ಮಂದಹಾಸ ತಂದರು. ಆದರೆ ಅನುಭವಿ ಜಡೇಜಾ ಈ ಇಬ್ಬರನ್ನ ಪೆವಿಲಿಯನ್​ ಸೇರಿಸಿ ಸನ್​ರೈಸರ್ಸ್ ತಂಡದ ಎಲ್ಲಾ ಭರವಸೆಯನ್ನ ನುಚ್ಚು ನೂರು ಮಾಡಿದರು. ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್​ 58 ರನ್​ ನೀಡಿದರೂ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು.

Sulekha