ಮೂರು ರಾಜ್ಯಗಳಲ್ಲಿ ಧೂಳಿಪಟವಾದ ಕಾಂಗ್ರೆಸ್ – ತೆಲಂಗಾಣದಲ್ಲಿ ಕೈ ಕಮಾಲ್
ಮಧ್ಯಪ್ರದೇಶ ಬಿಜೆಪಿ.. ರಾಜಸ್ಥಾನ ಬಿಜೆಪಿ.. ಛತ್ತೀಸ್‌ಗಢ ಕೂಡ ಬಿಜೆಪಿ.. ತೆಲಂಗಾಣದಲ್ಲಿ ಕಾಂಗ್ರೆಸ್.. ಇದು ನಾಲ್ಕು ರಾಜ್ಯಗಳ ಕ್ಲೀಯರ್ ಎಲೆಕ್ಷನ್ ರಿಸಲ್ಟ್.. ಇದು ಜನತಾ ಜನಾರ್ಧನ ನೀಡಿರೋದು ಸ್ಪಷ್ಟ ಫಲಿತಾಂಶ. ಯಾವುದೇ ನೆಕ್ ಟು ನೆಕ್ ಫೈಟ್ ಕೂಡ ಇಲ್ಲ.. ಜಿದ್ದಿಜಿದ್ದಿಯೂ ಇಲ್ಲ.. ಸೂಪರ್ ಓವರ್ ಕೂಡ ಇಲ್ಲ. ರೆಸಾರ್ಟ್, ಹೋಟೆಲ್‌ಗಳಿಗೆ ಓಡಾಡುವ ಪ್ರಶ್ನೆಯೇ ಇಲ್ಲ. ಯಾಕಂದ್ರೆ ನಾಲ್ಕೂ ರಾಜ್ಯಗಳಲ್ಲಿ ಕ್ಲೀಯರ್ ರಿಸಲ್ಟ್ ಬಂದಿದೆ. ಅದ್ರಲ್ಲೂ ಬಿಜೆಪಿಯಂತೂ ಉತ್ತರ ಭಾರತದಲ್ಲಿ ತನ್ನ ಪಾರುಪತ್ಯವನ್ನ ಮುಂದುವರಿಸಿದೆ. ಪ್ರಧಾನಿ ಮೋದಿ ಮತ್ತೆ ಹಿಂದಿ ಹಾರ್ಟ್ ಗೆದ್ದಿದ್ದಾರೆ. ಎಕ್ಸಿಟ್ ಪೋಲ್ ರಿಸಲ್ಟ್ ನಲ್ಲಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮಧ್ಯೆ ನೆಕೆ ಟು ನೆಕ್ ಫೈಟ್ ನಡೀಬಹುದು ಅಂತೆಲ್ಲಾ ಭವಿಷ್ಯ ನುಡಿದಿದ್ದವು. ಆದ್ರೆ ಅದ್ಯಾವುದೂ ಆಗಿಲ್ಲ. ಬಿಜೆಪಿಯ ಸುನಾಮಿಗೆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಕ್ಷರಶ: ಕೊಚ್ಚಿ ಹೋಗಿದೆ. ಮೂರೂ ರಾಜ್ಯಗಳಲ್ಲಿ ಮೋದಿ ಅಲೆ ಕೂಡ ವರ್ಕೌಟ್ ಆಗಿದೆ.
ಮಧ್ಯಪ್ರದೇಶದಲ್ಲಿ ಸಿಎಂ ಯಾರಾಗ್ತಾರೆ?
230 ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ಬಿಜೆಪಿ ಬರೋಬ್ಬರಿ 167 ಕ್ಷೇತ್ರಗಳನ್ನ ಬಾಚಿಕೊಂಡಿದೆ. ಕಾಂಗ್ರೆಸ್ 62 ಸ್ಥಾನಗಳಿಗೆ ಕುಸಿದಿದೆ. ಇಲ್ಲಿ ಬಿಜೆಪಿ ಫುಲ್ ಕ್ಲೀನ್ ಸ್ವೀಪ್ ಮಾಡಿದೆ. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅಕ್ಷರಶ: ಕಮಾಲ್ ಮಾಡಿದ್ದಾರೆ. ಗುಜರಾತ್ ಬಳಿಕ ಮಧ್ಯಪ್ರದೇಶ ಈಗ ಬಿಜೆಪಿಯ ಮತ್ತೊಂದು ಪ್ರಬಲ ಕೋಟೆಯಾಗಿ ಬೆಳೆದಿರೋದು ಸ್ಪಷ್ಟವಾಗಿದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಯೋಜನೆಗಳು ಪಕ್ಷಕ್ಕೆ ವರದಾನವಾಗಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮಹಿಳಾ ಮತದಾರರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ. ಯಾಕಂದ್ರೆ ಮಹಿಳೆಯರ ಪರವಾದ ಹಲವು ಯೋಜನೆಗಳನ್ನ ಚೌಹಾಣ್ ಮಧ್ಯಪ್ರದೇಶದಲ್ಲಿ ಜಾರಿಗೊಳಿಸಿದ್ರು. ಆರು ತಿಂಗಳ ಹಿಂದೆ ಚೌಹಾಣ್ ಸರ್ಕಾರದ ವಿರುದ್ಧ ಭಾರಿ ಆಡಳಿತ ವಿರೋಧಿ ಅಲೆ ಇತ್ತು. ಆದ್ರೆ ಆಡಳಿತ ವಿರೋಧಿ ಅಲೆ ಇದ್ರೂ ಕೂಡ ಮೋದಿ ಮತ್ತು ಚೌಹಾಣ್ ಜೋಡಿ –ಭಾರಿ ಅಂತರದಲ್ಲೆ ಎಲೆಕ್ಷನ್ ಗೆಲ್ಲೋಕೆ ಸಾಧ್ಯವಾಗಿರೋದು ಇಲ್ಲಿ ಗಮನದಲ್ಲಿಟ್ಟುಕೊಳ್ಳಲೇಬೇಕಾದ ವಿಚಾರ. ಇನ್ನು ಮಧ್ಯಪ್ರದೇಶದ ಬಿಜೆಪಿಯಲ್ಲಿ ಒಟ್ಟು ಮೂವರು ಸಿಎಂ ಆಕಾಂಕ್ಷಿಗಳಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ 5ನೇ ಬಾರಿ ಸಿಎಂ ಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಕೇಂದ್ರ ಸಚಿವರಾದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ನರೇಂದ್ರ ಸಿಂಗ್ ತೋಮರ್. ಒಳಗೊಳಗೆ ಒಂದಷ್ಟು ಭಿನ್ನಾಭಿಪ್ರಾಯ, ಕಾಂಪಿಟೀಷನ್ ಇದ್ರೂ ಕೂಡ ಚುನಾವಣೆ ಪ್ರಚಾರದ ವೇಳೆ ಇವರೆಲ್ಲರೂ ಒಟ್ಟಾಗಿದ್ರು. ಮೋದಿ ಅಲೆ ಜೊತೆಗೆ ಮೂವರ ಶ್ರಮದಿಂದಾಗಿ ಬಿಜೆಪಿ ಮತ್ತೆ ಮಧ್ಯಪ್ರದೇಶದಲ್ಲಿ ಅಧಿಕಾರಕಾರಕ್ಕೇರ್ತಿದೆ. ಆದ್ರೆ ಸಿಎಂ ಯಾರಾಗ್ತಾರೆ ಅನ್ನೋದು ಈಗಿರುವ ಪ್ರಶ್ನೆ. ಶಿವರಾಜ್ ಸಿಂಗ್ ಅವರನ್ನೇ ಮತ್ತೆ ಸಿಎಂ ಮಾಡೋ ಚಾನ್ಸ್ ಹೆಚ್ಚಿದೆ. ಆದ್ರೆ ಸಿಂಧಿಯಾ ಅಥವಾ ತೋಮರ್ಗೆ ಪಟ್ಟ ಕಟ್ಟೋಕೆ ಮೋದಿ-ಅಮಿತ್ ಶಾ ಮನಸ್ಸು ಮಾಡ್ತಾರಾ? ಸಿಂಧಿಯಾರನ್ನ ಸಿಎಂ ಮಾಡಿ ನೆಕ್ಸ್ಟ್ ಜನರೇಷನ್ ಮುಖ್ಯಮಂತ್ರಿಯನ್ನ ನೇಮಕ ಮಾಡ್ತಾರಾ ಅನ್ನೋದು ಈಗಿರುವ ಪ್ರಶ್ನೆ.
ರಾಜಸ್ಥಾನದಲ್ಲಿ ಬಿಜೆಪಿ ರಾಜ್ಯಾಭಾರ!
ಇನ್ನು ರಾಜಸ್ಥಾನದಲ್ಲೂ ಕೂಡ ಅಷ್ಟೇ ಬಿಜೆಪಿ ಗೆದ್ದುಬೀಗಿದೆ. ಬಿಜೆಪಿ 114 ಕ್ಷೇತ್ರಗಳನ್ನ ಬಾಚಿಕೊಂಡಿದೆ. ಕಾಂಗ್ರೆಸ್ 71 ಸ್ಥಾನಗಳಿಗೆ ಕುಸಿದಿದೆ. ಇತರೆ 14 ಮಂದಿ ಮುನ್ನಡೆ ಸಾಧಿಸಿದ್ದಾರೆ. ಪ್ರತಿ 5 ವರ್ಷಕ್ಕೊಮ್ಮೆ ರಾಜಸ್ಥಾನದಲ್ಲಿ ಸರ್ಕಾರ ಬದಲಾಗುತ್ತಲೇ ಇದೆ. ಆದ್ರೆ ಈ ಬಾರಿಯಂತೂ ಕಾಂಗ್ರೆಸ್ ಸೋಲೋದು ಚುನಾವಣೆಗೆ ಮುನ್ನವೇ ಕನ್ಫರ್ಮ್ ಆಗಿತ್ತು. ಯಾಕಂದ್ರೆ ಕಳೆದ ಐದು ವರ್ಷಗಳಿಂದಲೂ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ಕಿತ್ತಾಡ್ತಾನೆ ಇದ್ರು. ಇಬ್ಬರ ನಡುವೆಯೂ ಓಪನ್ ವಾರ್ ನಡೀತಾನೆ ಇತ್ತು. ಇಬ್ಬರನ್ನೂ ಒಟ್ಟುಗೂಡಿಸಿ ಚುನಾವಣೆ ವೇಳೆ ಪಕ್ಷ ಕಟ್ಟುವಲ್ಲಿ, ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೂಡ ಫೇಲ್ ಆಗಿದೆ. ಸಚಿನ್ ಪೈಲಟ್ ಅಂತೂ ತಮ್ಮದೇ ಸರ್ಕಾರದ ವಿರುದ್ಧ ಬೀದಿಗಿಳಿದಿದ್ರು. ಇದು ಪಕ್ಷಕ್ಕೆ ಹೊಡೆತ ಕೊಟ್ಟಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇದ್ರ ಜೊತೆಗೆ ಗೆಹ್ಲೋಟ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕೂಡ ಎದ್ದಿತ್ತು. ಅತ್ತ ಬಿಜೆಪಿಯ ವಸುಂಧರಾ ರಾಜೆ ವಿರುದ್ಧ ಭ್ರಷ್ಟಾಚಾರ ಆರೋಪ ಇದ್ರೂ ಅದನ್ನ ಚುನಾವಣೆಯಲ್ಲಿ ಎಫೆಕ್ಟಿವ್ ಆಗಿ ಬಳಸಿಕೊಳ್ಳಲೇ ಇಲ್ಲ. ವಸುಂಧರಾ ರಾಜೆ ಪ್ರಚಾರದಲ್ಲಿ ಬಿಜೆಪಿ ಮುಖವಾಣಿ ಆಗಿಯೇ ಇರಲಿಲ್ಲ. ಇಲ್ಲಿ ಮತ್ತೊಮ್ಮೆ ಮೋದಿ ಹೆಸರಲ್ಲೇ, ಮೋದಿ ಮೂಲಕವೇ ಬಿಜೆಪಿ ಪ್ರಚಾರ ನಡೆಸಿತ್ತು. ಇವೆಲ್ಲದ್ರ ರಿಸಲ್ಟ್ ಈಗ ಬಿಜೆಪಿ ಸಿಕ್ಕಿದೆ. ಮತ್ತೆ ರಾಜಸ್ಥಾನದಲ್ಲಿ ರಾಜ್ಯಾಭಾರ ನಡೆಸಲಿದೆ.
ವಲ್ಡ್‌ಕಪ್ ಫೈನಲ್ ಮ್ಯಾಚ್‌ನಂತಾದ ಛತ್ತೀಸ್‌ಗಢ ರಿಸಲ್ಟ್!
ಛತ್ತೀಸ್‌ಗಢದಲ್ಲಂತೂ ನಿಜಕ್ಕೂ ಅಚ್ಚರಿಯ ಫಲಿತಾಂಶವೇ ಬಂದಿದೆ. ಇಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಅನ್ನೋದು ಬಹುತೇಕ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿತ್ತು. ಕಾಂಗ್ರೆಸ್ ಕೂಡ ಕಾನ್ಫಿಡೆನ್ಸ್ನಲ್ಲಿತ್ತು. ಆದ್ರೆ, ಅದು ಕಾನ್ಫಿಡೆನ್ಸ್ ಅಲ್ಲ ಓವರ್ಕಾನ್ಫಿಡೆನ್ಸ್ ಅನ್ನೋದು ರಿಸಲ್ಟ್ ಬಳಿಕ ಸ್ಪಷ್ಟವಾಗಿದೆ. ಯಾಕಂದ್ರೆ ಒಟ್ಟು 90 ಕ್ಷೇತ್ರಗಳ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 90 ಕ್ಷೇತ್ರಗಳಲ್ಲಿ ಲೀಡ್‌ನಲ್ಲಿದೆ. ಕಾಂಗ್ರೆಸ್ 54 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ ಛತ್ತೀಸ್‌ಗಢದಲ್ಲೂ ಅಧಿಕಾರ ಸ್ಥಾಪಿಸ್ತಿದೆ. ಛತ್ತೀಸ್‌ಗಢ ರಿಸಲ್ಟ್ ಒಂಥರಾ ವಲ್ಡ್‌ಕಪ್ ಫೈನಲ್ ಮ್ಯಾಚ್‌ನಂತಾಗಿದೆ. ಯಾಕಂದ್ರೆ ಟೀಂ ಇಂಡಿಯಾದಂತೆ ಪೇಪರ್‌ನಲ್ಲಿ ಕಾಂಗ್ರೆಸ್ ಗೆಲ್ಲೋ ಫೇವರೇಟ್ ಪಕ್ಷವಾಗಿತ್ತು. ಆದ್ರೆ ಆಸ್ಟ್ರೇಲಿಯನ್ನರಂತೆ ಬಿಜೆಪಿಯ ಮಾಸ್ಟರ್ ಸ್ಟ್ರ್ಯಾಟಜಿಗೆ ಕಾಂಗ್ರೆಸ್ ಖೆಡ್ಡಾಗೆ ಬಿದ್ದಿದೆ. ಭೂಪೇಶ್ ಸರ್ಕಾರದ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಆರೋಪಗಳು ಕೂಡ ಇತ್ತು. ಗಣಿ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮತ್ತು ಚುನಾವಣೆಗೂ ಕೆಲ ತಿಂಗಳ ಮುನ್ನ ಮಹಾದೇವ್ ಬೆಟ್ಟಿಂಗ್ ಸ್ಕ್ಯಾಮ್ ಕೂಡ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಸುತ್ತಿಕೊಂಡಿತ್ತು. ಇನ್ನು ನಕ್ಸಲೈಟ್ಸ್‌ಗಳ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಕೂಡ ಹೊಡೆತ ಕೊಟ್ಟಿದೆ. ಯಾಕಂದ್ರೆ ಛತ್ತೀಸ್‌ಗಢದ ಬಸ್ತರ್ ನಕ್ಸಲ್ ಪೀಡಿತ ಜಿಲ್ಲೆ. ಇಲ್ಲಿ ಒಟ್ಟು 12 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಬಿಜೆಪಿ ಗೆದ್ದಿದೆ. ಟ್ರೈಬಲ್ ಬೆಲ್ಟ್‌ನಲ್ಲೂ ಬಿಜೆಪಿ ಗೆದ್ದಿರೋದು ಭೂಪೇಶ್ ಸರ್ಕಾರದ ವಿರುದ್ಧ ಎದ್ದಿದ್ದ ಅಲೆಗೆ ಸಾಕ್ಷಿ.
ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಮುಖ್ಯಮಂತ್ರಿ ಆಗ್ತಾರಾ?
ಇನ್ನು ತೆಲಂಗಾಣದಲ್ಲಂತೂ ಕೆಸಿಆರ್ ಅಹಂಕಾರಕ್ಕೆ ಕಾಂಗ್ರೆಸ್ ಕೊಡಲಿಯೇಟು ಕೊಟ್ಟಿದೆ. 119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 66 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಬಿಆರ್‌ಎಸ್ 37 ಸ್ಥಾನಗಳಿಗೆ ಕುಸಿದಿದೆ. ಇಲ್ಲಿ ಕೆಸಿಆರ್ ಸರ್ಕಾರದ ವಿರುದ್ಧ ಭಾರಿ ಅಡಳಿತ ವಿರೋಧಿ ಅಲೆ ಇತ್ತು. ವ್ಯಾಪಕ ಮಟ್ಟದ ಭ್ರಷ್ಟಾಚಾರದ ಆರೋಪವಿತ್ತು. ಅದ್ರಲ್ಲೂ ಬಿಆರ್‌ಎಸ್ನ ಶಾಸಕರ ವಿರುದ್ಧವಂತೂ ಸಾಕಷ್ಟು ಅಸಮಾಧಾನವಿತ್ತು. ಈ ಜನ ವಿರೋಧಿ ಅಲೆಯ ನೇರ ಲಾಭವಾಗಿರೋದು ಕಾಂಗ್ರೆಸ್‌ಗೆ. ಇನ್ನು ಬಿಆರ್‌ಎಸ್ ಬುಟ್ಟಿಯಲ್ಲಿದ್ದ ಮುಸ್ಲಿಮರ ಮತಗಳು ಕಾಂಗ್ರೆಸ್‌ಗೆ ಶಿಫ್ಟ್ ಆಗಿದೆ. ತೆಲಂಗಾಣದಲ್ಲಿ ಶೇಕಡಾ 21 ರಷ್ಟು ಮುಸ್ಲಿಂ ಮತಗಳಿವೆ. ಈ ಪೈಕಿ ಬಹುತೇಕ ಮಂದಿ ಕಾಂಗ್ರೆಸ್‌ಗೆ ವೋಟ್ ಮಾಡಿದ್ದಾರೆ. ಜೊತೆಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಚುನಾವಣಾ ರಣತಂತ್ರಗಾರ ಸುನಿಲ್ ಕುನಗೋಲು ಅವರ ರೋಲ್ ಕೂಡ ದೊಡ್ಡದಿದೆ. ಕರ್ನಾಟಕದಲ್ಲಿ ಸ್ಟ್ರ್ಯಾಟಜಿ ಮಾಡಿದ್ದ ಕುನಗೋಲುಗೆ ತೆಲಂಗಾಣದಲ್ಲೂ ಕಾಂಗ್ರೆಸ್ ಫ್ರೀ ಹ್ಯಾಂಡ್ ಕೊಟ್ಟಿತ್ತು. ಇನ್ನು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಈಗ ಮುಖ್ಯಮಂತ್ರಿಯಾಗೋದು ಆಲ್ಮೋಸ್ಟ್ ಫಿಕ್ಸ್. ಕೆಸಿಆರ್ ಸೋಲಿಸೋದು ಮುಷ್ಕಿಲ್ ಹೇ..ನಾಮ್ ಮುಮ್ಕಿನ್ ನಹೀ ಅಂತಾ ರೇವಂತೆ ರೆಡ್ಡಿ ಕೆಲ ದಿನಗಳ ಹಿಂದೆಯಷ್ಟೇ ಹೇಳಿದ್ರು. ಆ ಮಂತ್ರದೊಂದಿಗೆ ಅಖಾಡದಲ್ಲಿ ಹೋರಾಡಿದ್ರು. ಹೀಗಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ರೇವಂತ್ ರೆಡ್ಡಿಗೆ ದೊಡ್ಡ ಮಟ್ಟದ ಕ್ರೆಡಿಟ್ ಸಲ್ಲಲೇಬೇಕು. ಅಂತೂ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತೊಂದು ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಆದ್ರೆ ಉತ್ತರ ಭಾರತದಲ್ಲಿ ಮಾತ್ರ ಬಿಜೆಪಿ ಮುಂದೆ ಕಾಂಗ್ರೆಸ್ ಶರಣಾಗಿದೆ. ದಕ್ಷಿಣದಲ್ಲಿ ನಡೆದ ಕಾಂಗ್ರೆಸ್ ಆಟ, ಉತ್ತರ ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ. ಅದು ಕೂಡ ಲೋಕಸಭೆ ಚುನಾವಣೆ ಹತ್ತಿರದಲ್ಲಿರೋವಾಗಲೇ ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸೋತಿರೋದು. ಅದ್ರಲ್ಲೂ ಎರಡೂ ರಾಜ್ಯಗಳಲ್ಲಿ ಅಧಿಕಾರವನ್ನೇ ಕಳೆದುಕೊಂಡಿರೋದು ಪಕ್ಷಕ್ಕೆ ಹೊಡೆತ ನೀಡಿರೋದ್ರಲ್ಲಿ ಅನುಮಾನವೇ ಇಲ್ಲ.