2000 ನೋಟು ರದ್ದಾಗುತ್ತಿದ್ದಂತೆ ಸರ್ಕಾರಿ ಕಚೇರಿಯಲ್ಲಿ ಸಿಕ್ತು ಕಂತೆ ಕಂತೆ ಹಣ!
ಜೈಪುರ: ದೇಶದಾದ್ಯಂತ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ. ಈ ಬೆನ್ನಲ್ಲೇ ರಾಜಸ್ಥಾನದ ಯೋಜನಾ ಭವನದ ಕೆಳಮಹಡಿಯಲ್ಲಿ ವಾರಸುದಾರರಿಲ್ಲದ ಭಾರಿ ಪ್ರಮಾಣದ ನೋಟುಗಳು ಹಾಗೂ 1 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದೆ.
ಇದನ್ನೂ ಓದಿ: 2,000 ಮುಖಬೆಲೆಯ ನೋಟು ಹಿಂಪಡೆದ ಆರ್ ಬಿಐ! – ನೋಟು ಬದಲಿಸಲು ಎಷ್ಟು ದಿನ ಅವಕಾಶ?
ರಾಜಸ್ಥಾನ ಸರ್ಕಾರದ ಯೋಜನಾ ಭವನದಲ್ಲಿನ ಅಕ್ರಮ ಹಣವಿರುವ ಬಗ್ಗೆ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಸೂಟ್‌ಕೇಸ್‌ನಲ್ಲಿ 2,000 ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆಯ 2.31 ಕೋಟಿ ರೂಪಾಯಿ ನಗದು ಹಾಗೂ ಹಾಗೂ 1 ಕೆಜಿ ಚಿನ್ನದ ಗಟ್ಟಿ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 7 ಸರ್ಕಾರಿ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರ್ ಬಿಐ ಶುಕ್ರವಾರ (ಮೇ.19) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿತ್ತು. ಈ ಬೆನ್ನಲ್ಲೇ ಸರ್ಕಾರದ ಯೋಜನಾ ಭವನದಲ್ಲಿ 2.31 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದರಲ್ಲಿ ಬಹುತೇಕ 2,000 ರೂಪಾಯಿ ನೋಟುಗಳು ಇವೆ ಎನ್ನಲಾಗಿದೆ.
ನಗದು ಹಣ, ಚಿನ್ನದ ಜೊತೆ ಹಲವು ದಾಖಲೆಗಳು, ಅರ್ಜಿಗಳು ಪತ್ತೆಯಾಗಿದೆ. ಇದೀಗ ಯೋಜನಾ ಭವನದಲ್ಲಿ ಭ್ರಷ್ಟಾಚಾರ ಎಗ್ಗಿಲದೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದೀಗ ಈ ಹಣ ಎಲ್ಲಿಂದ ಬಂತು ಅನ್ನೋದು ತನಿಖೆ ನಡೆಯುತ್ತಿದೆ.
ಘಟನೆ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ವಿವರಣೆ ನೀಡಲಾಗಿದೆ. ದಾಳಿ ಬಳಿಕ ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ, ಎಡಿಜಿಪಿ ದಿನೇಶ್ ಎಂಎನ್ ಜೈಪುರ ಕಮಿಷನರ್ ಆನಂದ್ ಶ್ರೀವಾತ್ಸವ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.