ಕೇದಾರನಾಥದಲ್ಲಿ ಗುಡ್ಡಗಳು ಛಿದ್ರ.. ಬೃಹತ್ ಬಂಡೆಗಳು ಕುಸಿತ – ಶಿವನ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರಿಗೆ ಸಂಕಷ್ಟ

ಕೇದಾರನಾಥದಲ್ಲಿ ಗುಡ್ಡಗಳು ಛಿದ್ರ.. ಬೃಹತ್ ಬಂಡೆಗಳು ಕುಸಿತ – ಶಿವನ ದರ್ಶನಕ್ಕೆ ತೆರಳಿದ್ದ 40 ಕನ್ನಡಿಗರಿಗೆ ಸಂಕಷ್ಟ

ಕೈಲಾಸ ಪರ್ವತದ ನಂತರ ಕೇದಾರನಾಥವನ್ನು ಶಿವನ ಎರಡನೇ ವಾಸಸ್ಥಾನವೆಂದು ಕರೆಯಲಾಗುತ್ತದೆ. ಶಿವನ ವಾಸಸ್ಥಾನವೂ ಆಗಿರುವ, ಉತ್ತರಾಖಂಡ್‌ನ ನಾಲ್ಕು ಧಾಮಗಳಲ್ಲಿ ಒಂದಾದ ಈ ದೇವಾಲಯದ ಬಾಗಿಲನ್ನು ಪ್ರತಿವರ್ಷ ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. ಶಿವಪುರಾಣದಲ್ಲೂ ಈ ಸ್ಥಳದ ಮಹಿಮಹಿಮೆಯನ್ನು ಉಲ್ಲೇಖಿಸಲಾಗಿದ್ದು, ಇಲ್ಲಿ ಸಾವನ್ನು ಪಡೆಯುವ ಭಕ್ತರು ನೇರವಾಗಿ ಮೋಕ್ಷದ ಬಾಗಿಲು ಪ್ರವೇಶಿಸುತ್ತಾರೆಂದೂ, ಶಿವಲೋಕದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆಂದೂ ಹೇಳಲಾಗುತ್ತದೆ. ಹೀಗಾಗೇ ಪ್ರತೀ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.

ಇದನ್ನೂ ಓದಿ : ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟಕ್ಕೆ 29 ಮಂದಿ ಬಲಿ – ಶಿವನ ದೇಗುಲ ಕುಸಿತ, ಹಲವು ಮಂದಿ ನಾಪತ್ತೆ   

ಆದರೆ ಕೇದಾರನಾಥಕ್ಕೆ ತೆರಳುವಾಗ ಸಾಕಷ್ಟು ಅಡೆ ತಡೆಗಳು ಉಂಟಾಗುತ್ತವೆ. ಈಗಲೂ ಕೂಡ ಬೃಹತ್ ಬಂಡೆಗಳೇ ಕುಸಿದು ಬೀಳುತ್ತಿದ್ದು ಕನ್ನಡಿಗರು ಸೇರಿದಂತೆ ಹಲವರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಕೇದಾರನಾಥನ(Kedarnath) ದರ್ಶನಕ್ಕಾಗಿ ಉತ್ತರಾಖಂಡ್‌ಗೆ(Uttarakhand) ತೆರಳಿದ್ದ ಚಿತ್ರದುರ್ಗ ಮೂಲದ ಮೂವರು ಮಹಿಳೆಯರು ಸೇರಿದಂತೆ 40 ಕನ್ನಡಿಗರು ಕೇದಾರ ಬಳಿ ಸಿಲುಕಿದ್ದಾರೆ. ಕಳೆದ ಒಂದು ವಾರದ ಹಿಂದೆ ನಲವತ್ತು ಜನರ ತಂಡದ ಜೊತೆಗೆ ಚಿತ್ರದುರ್ಗದ ಮೂವರು ಮಹಿಳೆಯರು ಕೂಡ ಪ್ರವಾಸ ತೆರಳಿದ್ದರು. ಆದ್ರೆ ಕೇದಾರ ಬಳಿ ವಿಪರೀತ ಮಳೆ ಹಾಗೂ ಗುಡ್ಡ ಕುಸಿತ ಹಿನ್ನೆಲೆ ಕೇದಾರದಿಂದ 30ಕಿ.ಮೀ ದೂರದಲ್ಲಿ ಅನೇಕರು ಸಿಲುಕಿದ್ದಾರೆ.

ಇನ್ನು ಸಿಲುಕಿಕೊಂಡವರಲ್ಲಿ ಚಿತ್ರದರ್ಗದ ಬಿಜೆಪಿ ಮುಖಂಡರಾದ ರತ್ನಮ್ಮ, ಅಂಬಿಕಾ, ಗೀತಾ ಮತ್ತು ಇತರರಿದ್ದು ಕೇದಾರನಾಥ ತಲುಪಲು ಆಗುತ್ತಿಲ್ಲ, ವಾಪಸ್ ಬರಲಾಗದ ಸ್ಥಿತಿ ಇದ್ದು ಶೀಘ್ರ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಕೇದಾರ ಬಳಿ ಒಟ್ಟು 40 ಜನ ಸಿಲುಕಿಕೊಂಡಿದ್ದಾರೆ. ಚಿತ್ರದುರ್ಗದ 3 ಮಹಿಳೆಯರು, ಶಿವಮೊಗ್ಗ 4, ಭದ್ರವತಿಯಿಂದ 7 ಜನ ಹಾಗೂ ಬೆಂಗಳೂರಿನ 26 ಮಂದಿ ಸಿಲುಕಿದ್ದಾರೆ. ಉತ್ತರ ಭಾರತದ ಹಲವೆಡೆ ಸಾಲು, ಸಾಲು ಭೂಕುಸಿತಗಳು ಸಂಭವಿಸುತ್ತಿವೆ. ಕಳೆದ ಒಂದು ತಿಂಗಳ ಹಿಂದಷ್ಟೇ ಭಾರೀ ಮಳೆಯಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯದ ಜನರು ಮಳೆಗೆ ಕಂಗಾಲಾಗಿದ್ದರು. ಆದ್ರೆ ಈಗ ಸಾಲು, ಸಾಲು ಭೂಕುಸಿತದ ದುರಂತ ಸ್ಥಳೀಯರು ಹಾಗೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ಕೊಟ್ಟ ಪ್ರವಾಸಿಗರ ಜೀವಕ್ಕೆ ಆಪತ್ತು ತಂದಿವೆ. ರುದ್ರಪ್ರಯಾಗ್‌ ಜಿಲ್ಲೆಯ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಸಂಚರಿಸುವಾಗ ಕಾರಿನ ಮೇಲೆ ಬಂಡೆ ಕಲ್ಲುಗಳು ಬಿದ್ದು ಐವರು ಯಾತ್ರಾರ್ಥಿಗಳು ಮೃತಪಟ್ಟ ಘಟನೆ ಕೆಲ ದಿನಗಳ ಹಿಂದಷ್ಟೇ ನಡೆದಿತ್ತು. ಕೇದಾರನಾಥನ ದರ್ಶನಕ್ಕೆ ಹೊರಟಿದ್ದ ಐವರು ಯಾತ್ರಾರ್ಥಿಗಳು ಪ್ರಾಣಬಿಟ್ಟಿದ್ದಾರೆ. ಇದರ ನಡುವೆ ಈಗ ಕೇದಾರ ಬಳಿ ಕರ್ನಾಟಕದ 40 ಜನ ಸಿಲುಕಿಕೊಂಡಿದ್ದಾರೆ.

suddiyaana