ಹರಿಯಾಣದಲ್ಲಿ ಮಳೆ ಆರ್ಭಟ, ದೆಹಲಿಯಲ್ಲಿ ಪ್ರವಾಹ – ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಸಿಎಂ ಕೇಜ್ರಿವಾಲ್ ಮನವಿ

ಹರಿಯಾಣದಲ್ಲಿ ಮಳೆ ಆರ್ಭಟ, ದೆಹಲಿಯಲ್ಲಿ ಪ್ರವಾಹ – ಕೇಂದ್ರ ಸರ್ಕಾರ ಮಧ್ಯಪ್ರವೇಶಿಸುವಂತೆ ಸಿಎಂ ಕೇಜ್ರಿವಾಲ್ ಮನವಿ

ದೆಹಲಿಯಲ್ಲಿ ಎರಡು ದಿನಗಳಿಂದ ಮಳೆಯಾಗಿಲ್ಲ. ಆದರೆ, ದೆಹಲಿಯಲ್ಲಿ 44 ವರ್ಷಗಳ ನಂತರ ಪ್ರವಾಹ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಹರಿಯಾಣದ ಹಥಿನೀಕುಂಡ್ ಬ್ಯಾರೇಜ್‌ನಿಂದ ಅಸಹಜವಾಗಿ ಹೆಚ್ಚು ನೀರನ್ನು ಬಿಡುಗಡೆ ಮಾಡುತ್ತಿರುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನೀರಿನ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕು’ ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕ್ಷಣ ಕ್ಷಣಕ್ಕೂ ಉಕ್ಕುತ್ತಿದೆ ಯಮುನಾ ನದಿ – ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ನೀರು..!

ಹರಿಯಾಣದ ಹಥಿನೀಕುಂಡ್ ಬ್ಯಾರೇಜ್‌ನಿಂದ ನಿಧಾನವಾಗಿ ನೀರು ಹರಿಸುವಂತೆ ಸೂಚಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಹಾಗೆಯೇ, ರಾಷ್ಟ್ರ ರಾಜಧಾನಿಯಲ್ಲಿ ಪ್ರವಾಹ ಉಂಟಾಗಿರುವುದು ವಿಶ್ವಕ್ಕೆ ಉತ್ತಮ ಸಂದೇಶವಲ್ಲ. ನಾವೆಲ್ಲರೂ ಒಂದಾಗಿ ಈ ಪರಿಸ್ಥಿತಿಯಿಂದ ದೆಹಲಿ ಜನರನ್ನು ಕಾಪಾಡಬೇಕಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಯಮುನಾ ನದಿ ನೀರಿನ ಮಟ್ಟ 206.24 ಮೀಟರ್‌ಗೆ ಏರಿಕೆಯಾಗಿದೆ, ಯಮುನಾ ನದಿ ನೀರಿನ ಗರಿಷ್ಠ ಮಟ್ಟ 207.49 ಮೀಟರ್ ಆಗಿದೆ. ಅಪಾಯಕಾರಿ ಮಟ್ಟ ತಲುಪಿದೆ. ಹೀಗಾಗಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ದೆಹಲಿ ಮೆಟ್ರೋಗೆ ಸ್ಪೀಡ್ ಲಿಮಿಟ್ ಹೇರಲಾಗಿದ್ದು, ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಟ್ರಕ್‌ಗಳಿಗೆ ಮಾತ್ರ ದೆಹಲಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಯಮುನಾ ನದಿ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಗಡಿ ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಆಗಮಿಸುವ ಅಗತ್ಯ ವಸ್ತುಗಳನ್ನು ಸಾಗಿಸುವ ಟ್ರಕ್ ಮತ್ತು ವಾಹನಗಳನ್ನು ಹೊರತುಪಡಿಸಿ ಭಾರೀ ಸರಕು ವಾಹನಗಳ ಪ್ರವೇಶವನ್ನು ದೆಹಲಿ ಸರ್ಕಾರ ನಿಷೇಧಿಸಿದೆ ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಗುರುವಾರ ತಿಳಿಸಿದ್ದಾರೆ. ಸಾರಿಗೆ ಇಲಾಖೆ ಹೊರಡಿಸಿರುವ ಆದೇಶದ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಯಮುನಾ ನದಿಯ ನೀರಿನ ಮಟ್ಟ ಅಸಹಜವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಿಂಘು ಬಾರ್ಡರ್, ಬಾದರ್‌ಪುರ ಬಾರ್ಡರ್, ಲೋನಿ ಬಾರ್ಡರ್ ಮತ್ತು ಚಿಲ್ಲಾ ಬಾರ್ಡರ್‌ನಿಂದ ಭಾರೀ ಸರಕುಗಳ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

 

suddiyaana