ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಲ್ಲಿ ಮಳೆ ನೀರು ಸೋರಿಕೆ!

ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಲ್ಲಿ ಮಳೆ ನೀರು ಸೋರಿಕೆ!

ಬೆಂಗಳೂರು: ಕಳೆದ ನವೆಂಬರ್ ನಲ್ಲಿ ಉದ್ಘಾಟನೆಗೊಂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2ನಲ್ಲಿ ಬುಧವಾರ ಸುರಿದ ಸಾಧಾರಣ ಮಳೆಗೆ ಮೇಲ್ಚಾವಣಿಯಲ್ಲಿ ನೀರು ಸೋರಿಕೆಯಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

ಇದನ್ನೂ ಓದಿ: ಮೇ 6 ರಂದು ಅಪ್ಪಳಿಸಲಿದೆ ವರ್ಷದ ಮೊದಲ ಚಂಡಮಾರುತ – ಎಲ್ಲೆಲ್ಲಿ ಸೈಕ್ಲೋನ್ ಎಫೆಕ್ಟ್?

ಕಳೆದ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ಉದ್ಘಾಟನೆ ಮಾಡಿದ್ದರು. ಈ ಟರ್ಮಿನಲ್ ಅನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ ಬುಧವಾರ ಸಂಜೆ ಸುರಿದ ಮಳೆಗೆ ಟರ್ಮಿನಲ್‌ 2 ಆಗಮನದ ಸ್ಥಳದಲ್ಲಿ ಮಳೆನೀರು ಸೋರಿಕೆಯಾಗಿದೆ. ಅಲ್ಲದೇ ಆ ಟರ್ಮಿನಲ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಟೀಕೆ ವ್ಯಕ್ತವಾಗುತ್ತಿದೆ. 5,000 ಕೋಟಿ ರೂಪಾಯಿ ಟರ್ಮಿನಲ್‌ನ “ನೈಜ ಮೌಲ್ಯ” ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಇನ್ನು ಹೊಸ ಟರ್ಮಿನಲ್‌ನ ಕರ್ಬ್‌ಸೈಡ್‌ನಲ್ಲಿ ಸೋರಿಕೆಯಾಗಿರುವುದನ್ನು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಖಚಿತಪಡಿಸಿದೆ. ಜೊತೆಗೆ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.

” ಮಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರ ಕೆರ್ಬ್‌ಸೈಡ್‌ನಲ್ಲಿ ನೀರು ಸೋರಿಕೆಯಾಗುತ್ತಿದೆ. ಟಿ2 ನಂತಹ ದೊಡ್ಡ ಮತ್ತು ಹೊಸ ಮೂಲಸೌಕರ್ಯದಲ್ಲಿ ಸಮಸ್ಯೆಗಳನ್ನು ನಾವು ಎದುರಿಸುತ್ತಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ತಂಡಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ, ನಮ್ಮ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.

suddiyaana