ಬದುಕು ನುಂಗಿದ ಮಹಾಮಳೆ – ಜ್ಯುವೆಲ್ಲರಿ ಶಾಪ್‌ಗೆ ನೀರು ನುಗ್ಗಿ ಕೊಚ್ಚಿ ಹೋಯ್ತು ಆಭರಣ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆ ಭಾರೀ ಅನಾಹುತಗಳನ್ನು ತಂದೊಡ್ಡಿದೆ. ಇಬ್ಬರನ್ನು ಬಲಿ ತೆಗೆದುಕೊಂಡಿದ್ದ ಮಳೆ ಇದೀಗ ಮಲ್ಲೇಶ್ವರಂನ ಚಿನ್ನಾಭರಣ ವ್ಯಾಪಾರಿಗಳಿಗೆ ಕೋಟ್ಯಂತರ ರೂಪಾಯಿ ನಷ್ಟ ತಂದಿಟ್ಟಿದೆ.
ಇದನ್ನೂ ಓದಿ: ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ
ಮಲ್ಲೇಶ್ವರಂನ ಆಭರಣದ ಅಂಗಡಿಯೊಂದಕ್ಕೆ ಭಾರಿ ಪ್ರಮಾಣದ ಮಳೆಯ ನೀರು ನುಗ್ಗಿದ್ದು, ಅಂಗಡಿಯಲ್ಲಿದ್ದ ಅರ್ಧಕ್ಕರ್ಧ ಚಿನ್ನಾಭರಣಗಳು ಕೊಚ್ಚಿ ಹೋಗಿವೆ. ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ ಹಾಗೂ 50 ಸಾವಿರ ರೂ. ಹಣ ಕೊಚ್ಚಿ ಹೋಗಿದೆ.
ಆಭರಣದ ಅಂಗಡಿ ಆರಂಭವಾಗಿ ಮೇ 27ಕ್ಕೆ 1 ವರ್ಷ ತುಂಬಲಿದೆ. ಆದರೆ ಏಕಾಏಕಿ ಸುರಿದ ಮಳೆಯಿಂದಾಗಿ ಅಂಗಡಿಗೆ ರಭಸವಾಗಿ ನೀರು ನುಗ್ಗಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳೆಲ್ಲಾ ಮಳೆ ನೀರಲ್ಲಿ ಕೊಚ್ಚಿಹೋಗಿದೆ. ಇದೀಗ ಅಂಗಡಿ ಮಾಲಕಿ ಪ್ರಿಯಾ ಎಂಬುವವರು ಏನೂ ತೋಚದೇ ಕಣ್ಣೀರು ಹಾಕಿದ್ದಾರೆ.
ಅಂಗಡಿಗೆ ನೀರು ತುಂಬುತ್ತಿದ್ದಂತೆ ಪ್ರಿಯಾ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ. ಇದೀಗ ಸುಮಾರು 2 ಕೋಟಿ ರೂ. ವೆಚ್ಚದ ಆಭರಣ ಹಾಗೂ ಫರ್ನಿಚರ್ ಗಳನ್ನು ಮಾಲೀಕರು ಕಳೆದುಕೊಂಡಿದ್ದಾರೆ.