RCB ಸೇಡಿಗೆ ಸೋಲುತ್ತಾ CSK? – ಮಳೆ ಬಂದ್ರೂ ನಿಲ್ಲಲ್ಲ ಮ್ಯಾಚ್
5 ಓವರ್ ರೂಲ್ಸ್.. ಯಾರಿಗೆ ಪ್ಲಸ್?

RCB ಸೇಡಿಗೆ ಸೋಲುತ್ತಾ CSK? – ಮಳೆ ಬಂದ್ರೂ ನಿಲ್ಲಲ್ಲ ಮ್ಯಾಚ್5 ಓವರ್ ರೂಲ್ಸ್.. ಯಾರಿಗೆ ಪ್ಲಸ್?

ಕೌಂಟ್​ಡೌನ್ ಬಿಗಿನ್ಸ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ರಣರೋಚಕ ಕದನಕ್ಕೆ ಕ್ಷಣಗಣನೆ. ಶನಿವಾರ ಸಂಜೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಮದಗಜಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಯಾವ ತಂಡ ಗೆಲ್ಲುತ್ತೋ ಆ ತಂಡ ಪ್ಲೇಆಫ್​ಗೆ ಹೆಜ್ಜೆ ಇಟ್ರೆ ಸೋತ ತಂಡ ಟೂರ್ನಿಯಿಂದಲೇ ಹೊರ ಬೀಳಲಿದೆ. ಹೀಗಾಗಿ ಜಿದ್ದಾಜಿದ್ದಿನ ಈ ಕದನ ಕಣ್ತುಂಬಿಕೊಳ್ಳೋಕೆ ಕೋಟ್ಯಂತರ ಅಭಿಮಾನಿಗಳು ಕಾಯ್ತಿದ್ದಾರೆ. ಹೀಗಿರುವಾಗ್ಲೇ ಬೆಂಗಳೂರಲ್ಲಿ ಮಳೆ ಬೀಳುವ ಆತಂಕ ಇದ್ದು ಪಂದ್ಯ ರದ್ದಾಗುವ ಭೀತಿ ಅಭಿಮಾನಿಗಳನ್ನ ಕಾಡ್ತಿದೆ. ಆದ್ರೆ ಫ್ಯಾನ್ಸ್ ಮಳೆ ಬಗ್ಗೆ ಚಿಂತೆ ಮಾಡೋದನ್ನ ಬಿಟ್ಟು ರಿಸಲ್ಟ್ ಬಗ್ಗೆ ಯೋಚನೆ ಮಾಡಿ. ಯಾಕಂದ್ರೆ ಅದೆಂಥದ್ದೇ ಮಳೆ ಬಂದ್ರೂ ಬೆಂಗಳೂರಲ್ಲಿ ಮ್ಯಾಚ್ ನಡೆಯೋದಂತೂ ಪಕ್ಕಾ. ವರುಣಾರ್ಭಟದ ನಡುವೆಯೂ ಪಂದ್ಯ ಹೇಗೆ ನಡೆಯುತ್ತೆ? ಚಿನ್ನಸ್ವಾಮಿ ಸ್ಟೇಡಿಯಂ ಸ್ಪೆಷಾಲಿಟಿ ಏನು? 5 ಓವರ್​ಗಳಲ್ಲಿ ರಿಸಲ್ಟ್ ಕೊಡ್ತಾರಾ? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಆರ್‌ಸಿಬಿ Vs ಸಿಎಸ್‌ಕೆ ಹೈವೋಲ್ಟೇಜ್‌ ಪಂದ್ಯಕ್ಕೆ ಕೌಂಟ್‌ಡೌನ್‌ – ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾಗಿದ್ಯಾಕೆ ಸರ್ಕಾರ?

ಮೇ 18 ಅಂದ್ರೆ ಶನಿವಾರ ನಡೆಯಲಿರೋ ಬೆಂಗಳೂರು ವರ್ಸಸ್ ಚೆನ್ನೈ ಮ್ಯಾಚ್ ನೋಡೋಕೆ ಇಡೀ ಕ್ರಿಕೆಟ್ ಜಗತ್ತೇ ಕಾದು ಕುಳಿತಿದೆ. ಕ್ರಿಕೆಟ್ ಲೆಜೆಂಡ್ ಧೋನಿ ಮತ್ತು ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ. ಸತತ ಐದು ಪಂದ್ಯಗಳನ್ನ ಗೆದ್ದು ಇನ್ನೊಂದು ಪಂದ್ಯದಲ್ಲಿ ವಿಕ್ಟರಿ ಬಾರಿಸಿ ಪ್ಲೇಆಫ್​ಗೆ ಕ್ವಾಲಿಫೈ ಆಗೋ ತವಕದಲ್ಲಿ ಆರ್​ಸಿಬಿ ಇದ್ರೆ ಚೆನ್ನೈ ಕೂಡ 6ನೇ ಬಾರಿಗೆ ಟ್ರೋಫಿಯತ್ತ ಹೆಜ್ಜೆ ಹಾಕೋಕೆ ತುದಿಗಾಲಲ್ಲಿ ಕಾಯ್ತಿದೆ. ಅದ್ರಲ್ಲೂ ಈ ಪಂದ್ಯ ಆರ್​ಸಿಬಿ ಕಿಂಗ್ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಪಡೆಯ ತಲಾ ಧೋನಿಯ ಪ್ರತಿಷ್ಠೆಯ ಕದನವೂ ಹೌದು. ಪ್ಲೇ ಆಫ್ ಲೆಕ್ಕಾಚಾರದ ನಡುವೆ ಯಾರು ಗೆಲ್ತಾರೆ ಅನ್ನೋದನ್ನ ನೋಡಲು ಕಾಯ್ತಿದ್ದ ಫ್ಯಾನ್ಸ್​ಗೆ ಮಳೆ ಶಾಕ್ ಕೊಟ್ಟಿದೆ. ಹಾಗೇನಾದ್ರೂ ಮಳೆ ಬಂದು ಪಂದ್ಯ ರದ್ದಾದ್ರೆ ಪ್ಲೇ ಆಫ್ ಲೆಕ್ಕಾಚಾರವನ್ನೇ ಬುಡಮೇಲು ಮಾಡಬಹುದು.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮೇ 20ರ ವರೆಗೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.  ಹಾಗೇ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌‌ ಘೋಷಣೆ ಮಾಡಿದೆ. ಮಳೆ ಮಾತ್ರವಲ್ಲದೆ ಗಾಳಿ ಸಹ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆದ್ರೆ ಗುಡ್ ನ್ಯೂಸ್ ಏನಂದ್ರೆ ನಮ್ಮ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಎಂಥದ್ದೇ ಮಳೆ ಬಂದ್ರೂ ಪಂದ್ಯ ಕ್ಯಾನ್ಸಲ್ ಆಗೋಕೆ ಸಾಧ್ಯನೇ ಇಲ್ಲ.ಯಾಕಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣ ಚಿನ್ನದಂಥ ಕ್ರೀಡಾಂಗಣ.

ಭಾರತದ ಅತ್ಯಂತ ಸುಸಜ್ಜಿತ ಕ್ರಿಕೆಟ್‌ ಮೈದಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಗ್ಗೆ ನೀವು ತಿಳ್ಕೊಳ್ಳೇ ಬೇಕು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೂ, ಮಳೆ ನಿಂತ ಕೇವಲ 15ರಿಂದ 20 ನಿಮಿಷದಲ್ಲಿ ಮೈದಾನವು ಪಂದ್ಯ ನಡೆಸಲು ಸಜ್ಜಾಗುತ್ತದೆ. ಇಲ್ಲಿನ ಸಬ್‌ಏರ್‌ ವ್ಯವಸ್ಥೆ ಮತ್ತು ವಾಕ್ಯೂಮ್ ಪವರ್ಡ್  ಒಳಚರಂಡಿ ವ್ಯವಸ್ಥೆಯಿಂದಾಗಿ ಮಳೆ ನೀರು ಬೇಗನೆ ತೆರವಾಗುತ್ತದೆ. ಕಳೆದ ಕೆಲ ವರ್ಷಗಳ ಹಿಂದೆ ಚಿನ್ನಸ್ವಾಮಿ ಮೈದಾನಕ್ಕೆ ಈ ಸಬ್ ಏರ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಗಂಟೆಗಟ್ಟಲೆ ಮಳೆ ಬಂದು ಮೈದಾನವೆಲ್ಲಾ ಸಂಪೂರ್ಣ ಒದ್ದೆಯಾದರೂ ಕೆಲವೇ ನಿಮಿಷಗಳಲ್ಲಿ ಔಟ್‌ ಫೀಲ್ಡ್‌ ಅನ್ನು ಸ್ವಚ್ಚಗೊಳಿಸಿ ಪಂದ್ಯ ನಡೆಯುವಂತೆ ಮಾಡುವ ಸಾಮರ್ಥ್ಯ ‘ಸಬ್‌ ಏರ್‌’ ಯಂತ್ರ ಹೊಂದಿದೆ. ಇದರಿಂದಾಗಿ ಮೇ 18ರ ಚೆನ್ನೈ-ಆರ್‌‌ಸಿಬಿ ಪಂದ್ಯಕ್ಕೆ ಮಳೆ ಬಂದರೂ ಅಡ್ಡಿಯಾಗುವುದಿಲ್ಲ.

ಅಷ್ಟಕ್ಕೂ ಏನಿದು ಏನಿದು ಸಬ್ ಏರ್ ಸಿಸ್ಟಮ್ ಅಂತಾ ನಿಮಗೆ ಅನ್ನಿಸಬಹುದು. ಮೈದಾನದ ಔಟ್‌ಫೀಲ್ಡ್‌ನಲ್ಲಿ ಸುಮಾರು 1 ಅಡಿ ಅಳದಲ್ಲಿ ಕೊಳವೆಗಳನ್ನು ಅಳವಡಿಸಲಾಗುತ್ತದೆ. ಈ ಕೊಳವೆ ಮೂಲಕ ಮೈದಾನದಲ್ಲಿನ ನೀರನ್ನು ಹೀರಲು ಅತ್ಯಾಧುನಿಯ ಯಂತ್ರ ಬಳಸಲಾಗುತ್ತದೆ. ಮಳೆ ಆರಂಭವಾದ ತಕ್ಷಣ ಸಬ್‌ ಏರ್‌ ಸಿಸ್ಟಮ್‌ ನೀರನ್ನು ಹೀರಲು ಶುರು ಮಾಡುತ್ತದೆ. ಕೇವಲ ನೀರನ್ನು ಹೀರುವುದು ಮಾತ್ರವಲ್ಲದೇ ಬಳಿಕ ತಕ್ಷಣ ಕೊಳವೆಗಳ ಮೂಲಕ ಬಿಸಿ ಗಾಳಿಯನ್ನು ಕ್ರೀಡಾಂಗಣಕ್ಕೆ ರವಾನಿಸುತ್ತದೆ. ಕ್ರೀಡಾಂಗಣವನ್ನು ಪಂದ್ಯಕ್ಕೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ನೀರನ್ನು ತೆಗೆದು ಮೈದಾನವನ್ನು ಒಣಗಿಸಲು ಈ ವ್ಯವಸ್ಥೆ ಸಹಕಾರಿಯಾಗಿದೆ. ಅಂದರೆ, ಸಾಮಾನ್ಯವಾಗಿ ಮೈದಾನಕ್ಕೆ ಬೀಳುವ ನೀರು ತೆರವಾಗಲು ತೆಗೆದುಕೊಳ್ಳುವ ಸಮಯಕ್ಕಿಂತ 36 ಪಟ್ಟು ವೇಗವಾಗಿ ಈ ವ್ಯವಸ್ಥೆಯು ನೀರನ್ನು ತೆರವುಗೊಳಿಸುತ್ತದೆ. ನಿಮಿಷಕ್ಕೆ ಬರೋಬ್ಬರಿ 10,000 ಲೀಟರ್‌ ನೀರನ್ನು ಈ ವಿಧಾನದ ಮೂಲಕ ಹೊರಹಾಕಬಹುದು. ಹಾಗೇ ಬೆಂಗಳೂರು ಕ್ರೀಡಾಂಗಣದ ಔಟ್‌ಫೀಲ್ಡ್ ಮಳೆ ನಿಂತ ಬೆನ್ನಲ್ಲೇ ತುಂಬಾನೇ ಬೇಗ ಡ್ರೈ ಆಗುತ್ತೆ. ಇದಕ್ಕೆ ಹೆಚ್ಚುವರಿ ಒಣಗಿಸುವ ಪ್ರಕ್ರಿಯೆ ಇರೋದಿಲ್ಲ.

ಮೈದಾನದ ಪಿಚ್ ಮತ್ತು ಬೌಲರ್‌ಗಳು ಓಡಿಬರುವ ಸ್ಥಳವನ್ನು ಉತ್ತಮ ಗುಣಮಟ್ಟದ ಕವರ್‌ಗಳಿಂದ ಮುಚ್ಚೋದ್ರಿಂದ ಈ ಜಾಗ ತೇವ ಆಗೋದಿಲ್ಲ. ಈ ಸ್ಥಳಗಳಲ್ಲಿ ಮಳೆ ನಿಂತ ಬೆನ್ನಲೇ ಸ್ವಲ್ಪ ರೋಲಿಂಗ್ ಮಾಡಿದ್ರೂ ಸಾಕಾಗುತ್ತೆ. ಸದ್ಯ ದೇಶದಲ್ಲಿಯೇ ಎರಡು ಮೈದಾನಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ. ಅದು ಚಿನ್ನಸ್ವಾಮಿ ಮೈದಾನವನ್ನು ಹೊರತುಪಡಿಸಿದರೆ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಾತ್ರ. ಇಲ್ಲಿನ ಮೈದಾನಗಳ ಸಿಬ್ಬಂದಿಗೆ ಮಳೆ ನಿಂತ ಬಳಿಕ ಹೆಚ್ಚು ಕೆಲಸಗಳಿರುವುದಿಲ್ಲ. ಅಲ್ದೇ ಸಬ್‌ ಏರ್‌ ಸಿಸ್ಟಮ್‌ ತಂತ್ರಜ್ಞಾನವನ್ನು ಅಳವಡಿಸಿದ ವಿಶ್ವದ ಮೊದಲ ಕ್ರಿಕೆಟ್‌ ಮೈದಾನ ಎಂಬ ಖ್ಯಾತಿಗೆ ನಮ್ಮ ಚಿನ್ನಸ್ವಾಮಿ ಕ್ರೀಡಾಂಗಣ ಪಾತ್ರವಾಗಿದೆ. ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಮುಂದುವರೆದ ರಾಷ್ಟ್ರಗಳ ಗಾಲ್ಫ್ ಮೈದಾನಗಳಲ್ಲಿ ಇಂತಹ ಅತ್ಯಾಧುನಿಕ ವ್ಯವಸ್ಥೆ ಇವೆ. ಕ್ರಿಕೆಟ್‌ನಲ್ಲಿ, ಅದರಲ್ಲೂ ಭಾರತದಲ್ಲಿ ಈ ವ್ಯವಸ್ಥೆ ಮೊದಲ ಬಾರಿ ಅಳವಡಿಸಿದ ಹಿರಿಮೆ ಚಿನ್ನಸ್ವಾಮಿ ಮೈದಾನದ್ದು. ಸಬ್‌ ಏರ್‌ ಸಿಸ್ಟಮ್‌ ತಂತ್ರಜ್ಞಾನ ಮಾತ್ರವಲ್ಲದೆ ಇನ್ನೂ ಕೆಲವು ವಿಶೇಷ ವ್ಯವಸ್ಥೆಗಳು ಚಿನ್ನಸ್ವಾಮಿ ಮೈದಾನದಲ್ಲಿವೆ. ಸೌರ ವಿದ್ಯುತ್‌ ವ್ಯವಸ್ಥೆ, ಮಳೆ ನೀರಿನ ಕೊಯ್ಲು, ವಿಶೇಷ ಚೇತನರಿಗೆ ನೆರವಾಗಲು ವಿದ್ಯುತ್‌ ಚಾಲಿತ ಕುರ್ಚಿ ಒದಗಿಸುವ ಸೌಲಭ್ಯ ಕೂಡಾ ಇಲ್ಲಿದೆ.

ಇದೆಲ್ಲ ಓಕೆ.. ಮಳೆ ಬಂದು ನಿಂತ್ರೇನೋ ಬೇಗ ಕ್ರೀಡಾಂಗಣ ಸಿದ್ಧ ಮಾಡ್ತಾರೆ. ಆಟ ಆಡಿಸ್ತಾರೆ. ಒಂದು ವೇಳೆ ಸಂಜೆ ಮಳೆ ಶುರುವಾಯ್ತು. ರಾತ್ರಿಯಾದ್ರೂ ಬಿಡ್ತಾನೇ ಇಲ್ಲ ಆಗ ಏನ್ ಮಾಡೋದು ಅನ್ನಿಸ್ಬೋದು. ಹೌದು. ಮಳೆ ಬಂದ್ರೂ ಏಕಾಏಕಿ ಪಂದ್ಯವನ್ನ ನಿಲ್ಲಿಸೋದಿಲ್ಲ. ಲಾಸ್ಟ್ ಮೂಮೆಂಟ್​ವರೆಗೂ ಪಂದ್ಯವನ್ನು ಆಯೋಜಿಸಲು ವಿವಿಧ ನಿಯಮಗಳಿವೆ. ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯ ಸ್ಟಾರ್ಟ್ ಆಗೋದು ಸಂಜೆ 7:30ಕ್ಕೆ. ಪಂದ್ಯದ ಹೆಚ್ಚುವರಿ ಕಟ್ ಆಫ್ ಸಮಯ ರಾತ್ರಿ 11:50. ಅದುವರೆಗೆ ಪಂದ್ಯ ಆಯೋಜಿಸಲು ಸಾಧ್ಯನಾ ಎಂಬುದನ್ನು ನೋಡ್ತಾರೆ. ಇದರ ನಡುವೆ ಪಂದ್ಯ ನಡೆಸಲು ಅವಕಾಶವಿದ್ದರೆ ಹೆಚ್ಚುವರಿ ಸಮಯವನ್ನು ಬಳಸುತ್ತಾರೆ. ಅಂದರೆ ಮಳೆಯ ಕಾರಣ ಪಂದ್ಯದ ಆರಂಭವು ವಿಳಂಬವಾದರೆ ಅಥವಾ ಅಡಚಣೆಯ ಸಂದರ್ಭದಲ್ಲಿ, 60 ನಿಮಿಷಗಳ ಹೆಚ್ಚುವರಿ ಸಮಯವನ್ನು ತೆಗೆದುಕೊಳ್ಳಲಾಗುತ್ತದೆ. ಅದರಂತೆ ಪೂರ್ಣ 20 ಓವರ್​ಗಳನ್ನು ಆಡಿಸಲು ಅವಕಾಶ ಇದ್ಯಾ ಅಂತಾ ಫಸ್ಟ್ ಚೆಕ್ ಮಾಡ್ತಾರೆ. ಹಾಗೇನಾದ್ರೂ ನಿಗದಿತ ಸಮಯದೊಳಗೆ 20 ಓವರ್​ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದು ಕಂಡು ಬಂದರೆ ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇಲ್ಲಿ ಟೈಮ್ ಔಟ್ ಸಮಯ ಹಾಗೂ ಇನ್ನಿಂಗ್ಸ್ ಬ್ರೇಕ್​ಗಳನ್ನು ಸಹ ತೆಗೆದು ಹಾಕಲಾಗುತ್ತದೆ. ಆ ಮೂಲಕ ಓವರ್​ ಕಡಿತದೊಂದಿಗೆ ಪಂದ್ಯ ಆಯೋಜಿಸಲಾಗುತ್ತದೆ. ಪಂದ್ಯ ಶುರುವಾದ ಬಳಿಕ ಮಳೆ ಬಂದರೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 5 ಓವರ್​ಗಳ ಇನಿಂಗ್ಸ್​ ಅನ್ನು ಆಡಿರಲೇಬೇಕು. ಇದಕ್ಕಿಂತ ಕಡಿಮೆ ಓವರ್​ಗಳ ಪಂದ್ಯಗಳನ್ನು ಆಯೋಜಿಸಲಾಗುವುದಿಲ್ಲ. ಅದರಂತೆ ಎರಡೂ ತಂಡಗಳು ಕನಿಷ್ಠ 5 ಓವರ್​ಗಳನ್ನು ಬೌಲಿಂಗ್ ಮಾಡಿದ್ರೆ ಮಾತ್ರ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಮೊದಲ ಇನಿಂಗ್ಸ್ ಆಡಿದ ತಂಡ 10 ಓವರ್ ಆಡಿದ್ರೆ, 2ನೇ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್​ಗಳನ್ನು ಆಡಿರಲೇಬೇಕು. ಅಂದರೆ ಮಾತ್ರ ಇಲ್ಲಿ ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಲಾಗುತ್ತದೆ. ಹೀಗಾಗಿಯೇ ಆರ್​ಸಿಬಿ-ಸಿಎಸ್​ಕೆ ತಂಡಗಳ ನಡುವಣ ಪಂದ್ಯದ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್​ಗಳ ಪಂದ್ಯವಾದರೂ ನಡೆಯಲೇಬೇಕು. ಆರ್​ಸಿಬಿ-ಸಿಎಸ್​ಕೆ​ ನಡುವಣ ಪಂದ್ಯದ 5 ಓವರ್​ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಮ್ಯಾಚ್​ ಅನ್ನು ರದ್ದುಗೊಳಿಸುವ ಬಗ್ಗೆ ಮ್ಯಾಚ್ ರೆಫರಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಕನಿಷ್ಠ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಮಾತ್ರ ಮ್ಯಾಚ್​ನ್ನು ರದ್ದು ಪಡಿಸಲಾಗುತ್ತದೆ. ಇದಾದ ಬಳಿಕ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ. ಮೇ 13 ರಂದು ಗುಜರಾತ್‌ ಟೈಟನ್ಸ್‌ ಮತ್ತು ಕೋಲ್ಕತ್ತಾ ನೈಟ್‌‌ ರೈಡರ್ಸ್ ನಡುವಿನ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಇದೇ ನಿಯಮದ ಪ್ರಕಾರವೇ ಉಭಯ ತಂಡಗಳಿಗೆ ಒಂದೊಂದು ಅಂಕವನ್ನ ನೀಡಲಾಗಿತ್ತು.. ಹಾಗೇನಾದ್ರೂ ಮಳೆಯಿಂದಾಗಿ ಆರ್​ಸಿಬಿ ಮತ್ತು ಸಿಎಸ್​ಕೆ ಮ್ಯಾಚ್ ಕೂಡ ರದ್ದಾದ್ರೆ ಅದು ಚೆನ್ನೈ ತಂಡಕ್ಕೆ ಲಾಭವಾಗಲಿದೆ. ಸಿಎಸ್​ಕೆ ತಂಡವು ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಯಾಕಂದ್ರೆ ಈಗಾಗ್ಲೇ 14 ಅಂಕಗಳನ್ನು ಹೊಂದಿರುವ ಸಿಎಸ್​ಕೆ ತಂಡವು ಪಂದ್ಯ ರದ್ದತಿಯಿಂದ ಒಂದು ಅಂಕ ಪಡೆಯಲಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಟ್ಟು ಅಂಕ 15 ಕ್ಕೇರಲಿದೆ. ಸದ್ಯ ಆರ್​ಸಿಬಿ ಆಡಿರುವ 13 ಪಂದ್ಯಗಳ ಪೈಕಿ 6ರದಲ್ಲಿ ಗೆದ್ದು 12 ಅಂಕಗಳನ್ನು ಹೊಂದಿದೆ. ಶನಿವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಉತ್ತಮ ನೆಟ್ ರನ್​ ರೇಟ್​ನೊಂದಿಗೆ ಗೆದ್ರೆ 14 ಅಂಕಗಳ ಮೂಲಕ ಪ್ಲೇ ಆಫ್ ಪ್ರವೇಶ ಮಾಡಲಿದೆ. ಪಂದ್ಯ ರದ್ದಾದ್ರೆ 1 ಅಂಕ ಸೇರಿ ಒಟ್ಟಾರೆ 13 ಅಂಕಗಳೊಂದಿಗೆ ಐಪಿಎಲ್​ನಿಂದ ಹೊರಬೀಳಲಿದೆ.  ಒಟ್ಟಾರೆ ಬ್ಯಾಕ್ ಟು ಬ್ಯಾಕ್ ಐದು ವಿಕ್ಟರಿ ಗಳಿಸಿರೋ ಬೆಂಗಳೂರು ಟೀಂ ಇನ್ನೊಂದು ಪಂದ್ಯದ ಮೂಲಕ ಪ್ಲೇಆಫ್​ಗೇರೋ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಚೆನ್ನೈ ತಂಡ ಕೂಡ ಅದೇ ಭರವಸೆಯಲ್ಲಿದೆ. ಶನಿವಾರದ ಪಂದ್ಯಕ್ಕೆ ಮಳೆ ಆತಂಕ ಇರೋದ್ರಿಂದ ಅಭಿಮಾನಿಗಳೂ ಕೂಡ ಕೊಂಚ ಆತಂಕದಲ್ಲಿದ್ದಾರೆ.

Shwetha M