ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಸಾಧ್ಯತೆ – ಸಿಲಿಕಾನ್ ಸಿಟಿಯಲ್ಲಿ 5 ಮನೆಗಳು ಕುಸಿತ, ಕಾರುಗಳು ಜಖಂ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೂ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಅಭ್ಯರ್ಥಿಗಳಲ್ಲಿ ಹಾಗೂ ಚುನಾವಣಾ ಆಯೋಗಕ್ಕೆ ಆತಂಕ ಶುರುವಾಗಿದೆ.
ರಾಜ್ಯದ ಹಲವೆಡೆ ಮೇ 1 ರಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇನ್ನೂ ಐದು ದಿನಗಳ ಕಾಲ (ಮೇ 13ರವರೆಗೆ) ನಗರದಲ್ಲಿ ಗುಡುಗು ಸಹಿತ ಮಳೆ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಇವತ್ತು ಮನೆ ಮನೆ ಮತಶಿಕಾರಿ – ಅಭ್ಯರ್ಥಿಗಳ ಕೊನೇ ಕ್ಷಣದ ಕಸರತ್ತು!
ಮೇ 1 ರಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ವಾಸ್ತವವಾಗಿ, ಮೇ 5 ರಂದು 40 ಮಿ.ಮೀ ಮಳೆ ಸುರಿದಿದೆ. ಈ ಹಿಂದಿನ 24 ಗಂಟೆಗಳಲ್ಲಿ ಕೇವಲ ತುಂತುರು ಮಳೆಯಾಗಿದೆ. ಮೇ ತಿಂಗಳ ಮೊದಲ ಆರು ದಿನಗಳಲ್ಲಿ ನಗರದಲ್ಲಿ ಈಗಾಗಲೇ 107.8 ಮಿ.ಮೀ ಮಳೆಯಾಗಿದೆ.
ಸೋಮವಾರ ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ನಗರದ ಪಿಇಎಸ್ ಕಾಲೇಜ್ ಬಳಿಯ ವೀರಭದ್ರನಗರದ ಸ್ಲಮ್‍ನಲ್ಲಿ ಮಳೆಗೆ 5 ಮನೆಗಳು ಕುಸಿದು ಬಿದ್ದಿವೆ. ಜೊತೆಗೆ ಕಾಂಪೌಂಡ್ ಗೋಡೆ ಸಹ ಕುಸಿದಿದೆ. ಪಕ್ಕದ ಅಪಾರ್ಟ್‌ಮೆಂಟ್ ನಿಲ್ಲಿಸಿದ್ದ ಕಾರಗಳು ಸಂಪೂರ್ಣ ಜಖಂಗೊಂಡಿವೆ. ಅದೃಷ್ಟವಶಾತ್ ಸಾವು-ನೋವು ಉಂಟಾಗಿಲ್ಲ.