ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಲವು ದಿನಗಳಿಂದ ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿತ್ತು. ನಗರವಾಸಿಗಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಗುರುವಾರ ದೆಹಲಿಯ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ. ಇದರಿಂದಾಗಿ ದೆಹಲಿಯಾದ್ಯಂತ ವಿಷಕಾರಿ ಎನಿಸಿಕೊಂಡಿದ್ದ ಗಾಳಿಯ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿದೆ.

ಗುರುವಾರ ರಾತ್ರಿ ದೆಹಲಿಯ ಹಲವು ಭಾಗಗಳಾದ ನೋಯ್ಡಾ, ಗುರುಗ್ರಾಮ, ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಘುವಾದ ಮಳೆ ಸುರಿದಿದೆ. ಮಳೆಯಿಂದಾಗಿ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 85 ದಾಖಲಾಗಿದೆ. ಇದು ಗಾಳಿ ಗುಣಮಟ್ಟದ ಸುಧಾರಣೆಯಾಗಿದ್ದು, ಉತ್ತಮ ವಿಭಾಗದಲ್ಲಿ ಬರುತ್ತದೆ. ಇದರಿಂದ ನಗರದ ವಾಯುಗುಣಮಟ್ಟ ಸುಧಾರಿಸಿದ್ದು, ಅಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ಮುಂದುವರಿದ ವರುಣಾರ್ಭಟ – ಹಲವೆಡೆ ಭೂಕುಸಿತ, ರೈಲು ಸಂಚಾರ ಸ್ಥಗಿತ!

ನಗರದಲ್ಲಿ ಉಂಟಾಗಿದ್ದ ತೀವ್ರ ವಾಯುಮಾಲಿನ್ಯವನ್ನು ತಗ್ಗಿಸಲು ನವೆಂಬರ್ 20-21 ರಂದು ಮೋಡ ಬಿತ್ತನೆಯ ಮೂಲಕ ಕೃತಕ ಮಳೆ ಸುರಿಸಲು ದೆಹಲಿ ಸರ್ಕಾರದ ಯೋಜಿಸಿತ್ತು. ಇದೀಗ ಸುರಿದಿರುವ ಮಳೆ ತಾತ್ಕಾಲಿಕ ಪರಿಹಾರ ನೀಡಿದ್ದು, ಜನತೆ ನಿಟ್ಟುಸಿರು ಬಿಡುವಂತಾಗಿದೆ.

ದೆಹಲಿ-ಎನ್‌ಸಿಆರ್ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ ಭಾಗಶಃ ಮೋಡ ಕವಿದ ವಾತಾವರಣ, ಕೊಂಚ ಮಂಜು ಮುಸುಕಿದ ವಾತಾವರಣವಿರಲಿದೆ. ಒಂದೆರಡು ಪ್ರದೇಶಗಳಲ್ಲಿ ಹಗುರ ಇಲ್ಲವೇ ತುಂತುರು ಮಳೆಯ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ 30 ಹಾಗೂ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ದೆಹಲಿಯ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ.

Shwetha M