ರಾಜ್ಯದ ಹಲವೆಡೆ ವರುಣಾರ್ಭಟ – ಇನ್ನೂ 4 ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದ ಹಲವೆಡೆ ವರುಣಾರ್ಭಟ – ಇನ್ನೂ 4 ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದೆ. ಸೋಮವಾರ ಸಂಜೆಯಿಂದ ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ನಿನ್ನೆ (ಸೋಮವಾರ) ರಾತ್ರಿ ಇಡೀ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಜಲಾವೃತವಾಗಿ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು.

ಇದನ್ನೂ ಓದಿ: ಚಿಂದಿ ಆಯುವ ವ್ಯಕ್ತಿಗೆ ಬಂಪರ್‌! – ರಸ್ತೆ ಬದಿಯಲ್ಲಿ ಸಿಕ್ಕ ಪ್ಲಾಸ್ಟಿಕ್ ಬ್ಯಾಗ್‌ ನಲ್ಲಿತ್ತು 30 ಲಕ್ಷ ರೂಪಾಯಿ!

ಇನ್ನು ಭಾರಿ ಮಳೆಯಿಂದಾಗಿ ವಿಧಾನ ಸೌಧ, ಆರ್.ಟಿ ನಗರ, ಕಾವಲ್ ಭೈರಸಂದ್ರ, ಬಾಣಸವಾಡಿ, ಕಾಕ್ಸ್ ಟೌನ್, ಶ್ರೀರಾಂಪುರ, ಯಲಹಂಕ ರಸ್ತೆ ಭಾಗದಲ್ಲಿ ರಸ್ತೆಗಳು ಕೆರೆಗಳಂತೆ ಬದಲಾಗಿದ್ದವು. ವಿಧಾನ ಸೌಧ ಮುಂಭಾಗದ ರಸ್ತೆ, ಲಿಂಗರಾಜ ಪುರಂ ಅಂಡರ್ ಪಾಸ್, ಬಾಣವಾಡಿ ರೈಲ್ವೇ ಗೇಟ್ ಮುಂಭಾಗ ಜಲಾವೃತವಾಗಿದ್ದವು. ಮ್ಯಾನ್‌ಹೋಲ್‌ಗಳಿಂದ ಚರಂಡಿ ನೀರು ಚಿಮ್ಮುತ್ತಿದ್ದರಿಂದ ರಸ್ತೆ ಮೇಲೆಯೇ ಭಾರಿ ಪ್ರಮಾಣದ ನೀರು ಹರಿಯುತ್ತಿತ್ತು. ಯಲಹಂಕ ರಸ್ತೆ ಕೋಗಿಲು ಕ್ರಾಸ್ ಬಳಿ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್‌ಗೆ ನೀರು ನುಗ್ಗಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಿದ್ದವು. ಬಾಣಸವಾಡಿ ಹಾಗೂ ಫ್ರೆಸರ್ ಟೌನ್ ಬಳಿಯ ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ರಸ್ತೆಯುದ್ದಕ್ಕೂ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು. ಮಳೆಯಿಂದಾಗಿ ಶ್ರೀರಾಂಪುರ ಅಂಡರ್ ಪಾಸ್ ಕೆರೆಯಂತಾಗಿತ್ತು.

ಇನ್ನೂ 4  ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ವರುಣ ಅಬ್ಬರ ಜೋರಾಗಿಯೇ ಇರಲಿದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುಡುಗು, ಮಿಂಚು ಸಹಿತ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮಂಗಳವಾರ ಹಾಗೂ ಬುಧವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ತಗ್ಗುಪ್ರದೇಶದಲ್ಲಿ ವಾಸಿಸುವವರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, ಹಿಂಗಾರು ಕೈ ಹಿಡಿಯುವ ಆಶಾಭಾವನೆ ಮೂಡಿದೆ. ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.

Shwetha M