ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟ – ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟ – ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಬೆಂಗಳೂರು: ರಾಜ್ಯದಾದ್ಯಂತ ಮಳೆಯ ಅಬ್ಬರ ಮುಂದುವರಿದಿದೆ. ಕಳೆದೊಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಈ ವಾರವೂ ಭಾರೀ ಮಳೆಯ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಹಾಸನ, ಧಾರವಾಡ, ದಾವಣಗೆರೆ ಸೇರಿದಂತೆ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಇಂದು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ದೇಶ ಸೀಲ್ಯಾಂಡ್ –ಈ ದೇಶದಲ್ಲಿ ಇರುವುದು ಕೇವಲ 27 ಮಂದಿ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗೇ ಮಳೆ ಮುಂದುವರಿದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಇನ್ನು ಕರಾವಳಿ ಕರ್ನಾಟಕದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜುಲೈ 23 ರಿಂದ ಜುಲೈ 28ರ ವರೆಗೆ ಭಾರೀ ಮಳೆಯಾಗಲಿದೆ ಎನ್ನಲಾಗಿದೆ.

ಮಂಗಳೂರಿನಿಂದ ಕಾರವಾರದವರೆಗೆ ಕಡಲಿನ ಅಲೆಗಳ ಅಬ್ಬರವು ಜೋರಾಗಲಿದೆ. 3.5 ಯಿಂದ 4 ಮೀಟರ್‌ ಎತ್ತರದವರೆಗೂ ಅಲೆಗಳು ಆರ್ಭಟಿಸಲಿದೆ. ಹೀಗಾಗಿ ಮೀನುಗಾರರು, ಸಾರ್ವಜನಿಕರು ಸಮುದ್ರ ದಡದಿಂದ ಆದಷ್ಟು ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 24 ಮತ್ತು 25 ರಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದ್ದು, ಎರಡು ದಿನಗಳ ಕಾಲ ಮಳೆ ಪ್ರಮಾಣ ತಗ್ಗಿದ್ದರೂ ಯೆಲ್ಲೋ ಅಲರ್ಟ್‌ ಮುಂದುವರೆಯಲಿದೆ.

ಇನ್ನು ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರಿದ ಹಿನ್ನೆಲೆ ಜಿಲ್ಲೆಯ ಶಾಲಾ‌, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ. ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಮುಂದುವರಿದ ಹಿನ್ನೆಲೆ ನಾಳೆ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ್ ಕವಲಿಕಟ್ಟಿ ಆದೇಶಿಸಿದ್ದಾರೆ.

suddiyaana