ತಮಿಳುನಾಡಿನಲ್ಲಿ ಮುಂದುವರಿದ ವರುಣಾರ್ಭಟ – ಹಲವೆಡೆ ಭೂಕುಸಿತ, ರೈಲು ಸಂಚಾರ ಸ್ಥಗಿತ!

ಈಶಾನ್ಯ ಮಾನ್ಸೂನ್ ತೀವ್ರಗೊಂಡಿದ್ದರಿಂದ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಮಿಳುನಾಡಿನ ಸುಮಾರು 12 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತದ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಘಾಜಿ ಹತ್ಯೆ
ಭಾರಿ ಮಳೆಯ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಾದ ತಿರುವರೂರ್ ಹಾಗೂ ಪುದುಚೇರಿಯ ಕಾರೈಕ್ಕಲ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ ತಂಜಾವೂರು, ತಿರುವಾರೂರ್, ನಾಗಪಟ್ಟಣಂ, ಮೈಲಾಡುತುರೈ, ಪುದುಕೊಟ್ಟೈ, ಶಿವಗಂಗೈ, ರಾಮನಾಥಪುರಂ, ವಿರುಧುನಗರ, ತೂತುಕುಡಿ, ತೆಂಕಾಸಿ, ತಿರುನಲ್ವೇಲಿ ಮತ್ತು ಕನ್ನಿಯಾಕುಮಾರಿ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನೀಲಗಿರಿ ಮೌಂಟೇನ್ ರೈಲ್ವೆಯ ಕಲ್ಲಾರ್ ಮತ್ತು ಕುನ್ನೂರ್ ವಿಭಾಗದ ನಡುವಿನ ಹಳಿಯಲ್ಲಿ ಭೂಕುಸಿತ ಮತ್ತು ಮರಗಳು ಬಿದ್ದ ಕಾರಣ, ನವೆಂಬರ್ 16 ರವರೆಗೆ ಎರಡು ರೈಲುಗಳ ಸೇವೆಗಳನ್ನು ರದ್ದುಗೊಳಿಸಿದೆ. ಮೆಟ್ಟುಪಾಳ್ಯಂನಿಂದ ಉದಗಮಂಡಲಕ್ಕೆ ಸಂಚರಿಸುವ 06136 ಮತ್ತು 06137 ಪ್ಯಾಸೆಂಜರ್ ವಿಶೇಷ ರೈಲುಗಳ ಸಂಚಾರವನ್ನು ನ. 10 ರಿಂದ ನ. 16 ರವರೆಗೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದ ಮಧುರೈ, ಕೊಯಮತ್ತೂರು ಮತ್ತು ತೂತುಕುಡಿ ಸೇರಿದಂತೆ ಹಲವು ನಗರಗಳಲ್ಲಿ ಗುರುವಾರ ತೀವ್ರ ಜಲಾವೃತವಾಗಿತ್ತು. ಕೊಯಮತ್ತೂರಿನ ಕುಂಜಪ್ಪ-ಪನೈ ಬಳಿಯ ರಸ್ತೆ ಮತ್ತು ಕೋಟಗಿರಿ ಮೆಟ್ಟುಪಾಳ್ಯಂ ಪ್ರದೇಶದ ಮೆಟ್ಟುಪಾಳ್ಯಂ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ.