ರೈಲು ಚಾಲಕರು ನಿದ್ರೆಗೆ ಜಾರಿದ್ರೆ ಬಡಿಯುತ್ತೆ ಅಲರಾಂ! – ರೈಲ್ವೇ ಇಲಾಖೆಯಿಂದ ವಿಶಿಷ್ಟ ಸಾಧನ ಅಭಿವೃದ್ದಿ!

ರೈಲು ಚಾಲಕರು ನಿದ್ರೆಗೆ ಜಾರಿದ್ರೆ ಬಡಿಯುತ್ತೆ ಅಲರಾಂ! – ರೈಲ್ವೇ ಇಲಾಖೆಯಿಂದ ವಿಶಿಷ್ಟ ಸಾಧನ ಅಭಿವೃದ್ದಿ!

ನವದೆಹಲಿ: ರೈಲು ಚಾಲಕರು ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿರುತ್ತಾರೆ. ಚಾಲನೆ ವೇಳೆ ನಿದ್ರೆಗೆ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದಾಗಿ ರೈಲು ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇತ್ತೀಚಿಗೆ ರೈಲುಗಳ ಅಪಘಾತ ಹೆಚ್ಚುತ್ತಿದ್ದು, ಭಾರತೀಯ ರೈಲ್ವೆ ತನ್ನ ರೈಲು ಕಾರ್ಯಾಚರಣೆಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸುವ ಭಾಗವಾಗಿ ವಿಶಿಷ್ಟ ಸಾಧನವೊಂದನ್ನು ರೈಲಿಗೆ  ಅಳವಡಿಸಲು ರೈಲ್ವೇ ಇಲಾಖೆ ಮುಂದಾಗಿದೆ.

ರೈಲು ಚಾಲಕರು ಆಗಾಗ ನಿದ್ರೆ ಜಾರುತ್ತಾರೆ. ಇದರಿಂದಾಗಿ ದೊಡ್ಡ ಅನಾಹುತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಚಾಲಕರು ನಿದ್ರೆ ಮಾಡುತ್ತಿದ್ದರೆ ಅಥವಾ ತೂಕಡಿಸುತ್ತಿದ್ದರೆ ಅವರನ್ನು ಎಚ್ಚರಿಸುವ ಸಾಧನವೊಂದನ್ನು ರೈಲ್ವೆ ಇಲಾಖೆ ಅಭಿವೃದ್ದಿಪಡಿಸಿದೆ. ಈಶಾನ್ಯ ಗಡಿ ರೈಲ್ವೆ ವಿಭಾಗವು ಅಭಿವೃದ್ಧಿಪಡಿಸಿರುವ ಈ ಸಾಧನಕ್ಕೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗಿದೆ. ರೈಲಿನ ಲೋಕೋಪೈಲಟ್‌ನ ಕಣ್ಣು ರೆಪ್ಪೆ ಆಡಿಸುವುದನ್ನೇ ಈ ಸಾಧನ ಗಮನಿಸುತ್ತಿರುತ್ತದೆ. ಒಂದು ವೇಳೆ ಕಣ್ಣು ಮುಚ್ಚಿದ್ದರೆ ಕೂಡಲೇ ಅಲಾರ್ಮ್‌ ಗಂಟೆ ಬಾರಿಸುತ್ತದೆ. ಒಂದು ವೇಳೆ ಚಾಲಕ ನಿದ್ರೆಯಿಂದ ಏಳದಿದ್ದರೆ ರೈಲನ್ನು ನಿಲ್ಲಿಸುವ ಆಯ್ಕೆಯೂ ಈ ಸಾಧನದ ಬಳಿ ಇರಲಿದೆ.

ಇದನ್ನೂ ಓದಿ: ಬ್ರಹ್ಮಚಾರಿಗಳಾಗಿಯೇ ಉಳಿಯಬೇಕಾದ ಅನಿವಾರ್ಯತೆಯಲ್ಲಿ ಯುವಕರು – ವಿದ್ಯಾವಂತರಾದರೂ ಹೆಣ್ಣು ಸಿಗುತ್ತಿಲ್ಲವೇಕೆ?

ಇದೇ ವರ್ಷ ಜೂನ್‌ನಲ್ಲಿ ರೈಲ್ವೆ ಮಂಡಳಿಯು ಈಶಾನ್ಯ ಗಡಿ ರೈಲ್ವೆಗೆ ಈ ಸಂಬಂಧ ಸೂಚನೆ ನೀಡಿತ್ತು. ರೈಲಿನ ಲೋಕೋ ಪೈಲಟ್ ಜಾಗೃತವಾಗಿದ್ದಾರೆಯೇ, ಇಲ್ಲವೇ ಅನ್ನೋದನ್ನ ಪತ್ತೆ ಹಚ್ಚುವ ಸಲುವಾಗಿ ಚಾಲಕರ ಕಣ್ಣು ರೆಪ್ಪೆ ಆಡಿಸುವುದರ ಆಧಾರದ ಮೇಲೆ ಪತ್ತೆ ಹಚ್ಚುವ ಸಾಧನ ಕಂಡು ಹಿಡಿಯುವಂತೆ ಸೂಚಿಸಿತ್ತು. ರೈಲ್ವೇ ಮಂಡಳಿಯ ಸೂಚನೆ ಮೇರೆಗೆ ಬ್ಲಿಂಕ್ ಡಿಟೆಕ್ಟಿಂಗ್ ಎಂಬ ವಿಶಿಷ್ಟ ಸಾಧನ ಅಭಿವೃದ್ಧಿಪಡಿಸಲಾಗಿದೆ. ಈ ಸಾಧನಕ್ಕೆ ರೈಲ್ವೆ ಚಾಲಕರ ಸಹಾಯಕ ವ್ಯವಸ್ಥೆ ಎಂದು ಹೆಸರಿಡಲಾಗಿದೆ. ಈ ಸಾಧನವು ನಿದ್ರೆಗೆ ಜಾರುವ ರೈಲು ಚಾಲಕರನ್ನು ಎಬ್ಬಿಸುವ ಕೆಲಸ ಮಾಡೋದಷ್ಟೇ ಅಲ್ಲ. ತುರ್ತು ಸಂದರ್ಭಗಳಲ್ಲಿ ರೈಲನ್ನು ನಿಲ್ಲಿಸುವ ಕೆಲಸವನ್ನೂ ಮಾಡಲಿದೆ. ಈ ಸಾಧನವು ತುರ್ತು ಸಂದರ್ಭದಲ್ಲಿ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸುವ ವೇಳೆ ಕೇಂದ್ರೀಯ ನಿಯಂತ್ರಣದ ಸಂಪರ್ಕವನ್ನೂ ಸಾಧಿಸಲಿದೆ.

ಸದ್ಯ ಈ ಸಾಧನ ಇನ್ನೂ ಅಭಿವೃದ್ದಿಯ ಹಂತದಲ್ಲಿದೆ. ಈ ಕುರಿತಾದ ಪ್ರಾಯೋಗಿಕ ಪರೀಕ್ಷೆಗಳನ್ನು ಇನ್ನಷ್ಟೇ ನಡೆಸಬೇಕಿದೆ. ಈ ಸಾಧನ ನಿರ್ಮಿಸಲು ಈಶಾನ್ಯ ಗಡಿ ರೈಲ್ವೆ ತಜ್ಞರ ತಂಡ ಶ್ರಮಿಸಿದೆ. ಕೆಲವೇ ತಿಂಗಳಲ್ಲಿ ಈ ಸಾಧನ ಬಳಕೆಗೆ ಲಭ್ಯವಾಗಿದೆ. ಈ ಸಾಧನ ಬಳಕೆಗೆ ಸಿದ್ದವಾದಾಗ ಮೊದಲಿಗೆ 20 ಗೂಡ್ಸ್ ರೈಲುಗಳಿಗೆ ಹಾಗೂ ಪ್ರಯಾಣಿಕ ರೈಲುಗಳಿಗೆ ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಸಾಧನದ ಕಾರ್ಯ ವೈಖರಿ, ಸುಧಾರಣೆಯ ಅಗತ್ಯತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ದೇಶಾದ್ಯಂತ ಅಳವಡಿಕೆ ಮಾಡಲು ತೀರ್ಮಾನ ಕೈಗೊಳ್ಳಾಗುವುದು ಎಂದು ತಿಳಿದು ಬಂದಿದೆ.

suddiyaana