2024ರ ಲೋಕಸಭಾ ಚುನಾವಣೆಗೆ ದಕ್ಷಿಣದಿಂದಲೇ ರಾಹುಲ್ ಗಾಂಧಿ ಅಖಾಡಕ್ಕೆ – ಕನ್ಯಾಕುಮಾರಿ ಅಥವಾ ಕರ್ನಾಟಕದಿಂದ ಸ್ಪರ್ಧೆ..?

2024ರ ಲೋಕಸಭಾ ಚುನಾವಣೆಗೆ ದಕ್ಷಿಣದಿಂದಲೇ ರಾಹುಲ್ ಗಾಂಧಿ ಅಖಾಡಕ್ಕೆ – ಕನ್ಯಾಕುಮಾರಿ ಅಥವಾ ಕರ್ನಾಟಕದಿಂದ ಸ್ಪರ್ಧೆ..?

2024ರ ಲೋಕಸಭಾ ಚುನಾವಣೆಗೆ ಇನ್ನು ಆರೇ ತಿಂಗಳು ಬಾಕಿ ಇದ್ದು, ಈಗಿನಿಂದಲೇ ಚುನಾವಣಾ ಅಖಾಡ ರಂಗೇರುತ್ತಿದೆ. ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು, ಹೇಗೆ ಮತದಾರರ ಮನ ಗೆಲ್ಲಬೇಕು ಎಂದು ಲೆಕ್ಕಾಚಾರ ನಡೆಯುತ್ತಿದೆ. ಇದರ ನಡುವೆ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಪ್ರಸ್ತುತ ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿರುವ ರಾಹುಲ್ ಗಾಂಧಿ ಮುಂದಿನ ಚುನಾವಣೆಗೆ ಕ್ಷೇತ್ರ ಬದಲಾವಣೆ ಮಾಡುತ್ತಾರೆಂಬ ಮಾತುಗಳು ದಟ್ಟವಾಗುತ್ತಿದೆ. ಮತ್ತೊಮ್ಮೆ ದಕ್ಷಿಣ ಭಾರತದಲ್ಲೇ ರಣರಂಗಕ್ಕೆ ಧುಮುಕುವ ಎಲ್ಲಾ ಸಾಧ್ಯತೆ ಇದೆ.

ದೇಶದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಯಾವುದೇ ಪಕ್ಷವಾದರೂ ಉತ್ತರ ಭಾರತದ ರಾಜ್ಯಗಳ ಗೆಲುವೇ ಪ್ರಧಾನವಾಗಿರುವ ಇತಿಹಾಸವಿದೆ. ಹೀಗಿದ್ರೂ ರಾಹುಲ್ ಗಾಂಧಿ ಚಿತ್ತ ದಕ್ಷಿಣ ಭಾರತದತ್ತಲೇ ನೆಟ್ಟಿರೋದು ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನ ಮೂಡಿಸಿದೆ. ರಾಹುಲ್‌ ವಲಸೆಯಿಂದ ಕಾಂಗ್ರೆಸ್‌ ಗೆ ದಕ್ಷಿಣದಲ್ಲಿ ನಿಜಕ್ಕೂ ಲಾಭವಾಗುವುದೇ ಅಥವಾ ಉತ್ತರದ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೇ ಎಂಬ ಚರ್ಚೆ ನಡೆಯುತ್ತಿದೆ. ಯಾಕಂದ್ರೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲೇ ರಾಹುಲ್ ಹೀನಾಯ ಸೋಲು ಕಂಡಿದ್ರು. ಇಂಥಾ ಟೈಮಲ್ಲಿ ಕೇರಳದ ವಯನಾಡು ಕ್ಷೇತ್ರ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿತ್ತು. ಇದೇ ಕಾರಣಕ್ಕೋ ಏನೋ ದಕ್ಷಿಣದತ್ತಲೇ ರಾಹುಲ್ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅದೂ ಕೂಡ ಭಾರತ್ ಜೋಡೋ ಯಾತ್ರೆಯ ಕೇಂದ್ರಬಿಂದುವಾಗಿದ್ದ ಕನ್ಯಾಕುಮಾರಿ ಕ್ಷೇತ್ರದಿಂದಲೇ ಅಖಾಡಕ್ಕೆ ಇಳಿಯುತ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ಅಲ್ಲದೆ ತನ್ನ ಅಜ್ಜಿ, ತಾಯಿಗೆ ಚೈತನ್ಯ ನೀಡಿದ್ದ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳೂ ಕೇಳಿ ಬರ್ತಿವೆ.

2024ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಮತ್ತೆ ವಯನಾಡ್ ನಿಂದ ಸ್ಪರ್ಧಿಸಲ್ವಾ ಅನ್ನೋ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳುನಾಡಿನ ಕನ್ಯಾಕುಮಾರಿ ಅಥವಾ ಕರ್ನಾಟಕದ ಒಂದು ಕ್ಷೇತ್ರದಿಂದ ರಾಹುಲ್​ ಸ್ಪರ್ಧೆ ಮಾಡಬಹುದು ಅನ್ನೋ ಮಾತುಗಳು ಕೇಳಿ ಬರ್ತಿದೆ. ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಮುಲ್ಲಪ್ಪಲ್ಲಿ ರಾಮಚಂದ್ರನ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ವಿ.ವಿಜಯ ಕುಮಾರ್ ಕನ್ಯಾಕುಮಾರಿ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿದ್ದಾರೆ.  ತಂದೆ ನಿಧನದ ಬಳಿಕ 2021ರ ಉಪಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯ ಕುಮಾರ್  ಗೆದ್ದಿದ್ರು. ದಕ್ಷಿಣ ಭಾರತದ ಕ್ಷೇತ್ರದಿಂದಲೇ ರಾಹುಲ್ ಸ್ಪರ್ಧೆಗೆ ಕೆಲ ನಾಯಕರು ಕೂಡ ಚಿಂತನೆ ನಡೆಸ್ತಿದ್ದಾರೆ.

ಮತ್ತೊಂದೆಡೆ ಉತ್ತರ ಭಾರತದಿಂದಲೇ ಮತ್ತೆ ರಾಹುಲ್ ರನ್ನ ಸ್ಪರ್ಧೆಗಿಳಿಸಲು ಒತ್ತಡ ಕೂಡ ಹೆಚ್ಚಾಗುತ್ತಿದೆ. ರಾಹುಲ್ ಉತ್ತರ ಭಾರತದಲ್ಲಿ ಸ್ಪರ್ಧಿಸೋದ್ರಿಂದ ಹಿಂದಿ ಬೆಲ್ಟ್‌ ನಲ್ಲಿ ಪ್ರತಿಪಕ್ಷಗಳ INDIA ಮೈತ್ರಿಕೂಟಕ್ಕೆ ಪುನಶ್ಚೇತನ ದೊರೆಯಲಿದೆ. ಭಾರತ್ ಜೋಡೋ ಯಾತ್ರೆ ಬಳಿಕ ಉತ್ತರ ಭಾರತದಲ್ಲಿ ರಾಹುಲ್ ಇಮೇಜ್ ಚೇಂಜ್ ಆಗಿದೆ ಅನ್ನೋದು ಅಲ್ಲಿನ ಕಾಂಗ್ರೆಸ್ ನಾಯಕರ ವಾದ. ಇದನ್ನ ಗಮನದಲ್ಲಿಟ್ಟುಕೊಂಡು 2024ರಲ್ಲಿ ಹಿಂದಿ ಬೆಲ್ಟ್ ನಿಂದಲೇ ಸ್ಪರ್ಧಿಸುವಂತೆ ಆಗ್ರಹಿಸ್ತಿದ್ದಾರೆ. ಉತ್ತರ ಪ್ರದೇಶದಿಂದ ರಾಹುಲ್ ಸ್ಪರ್ಧಿಸಿದ್ರೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಲಾಭವಾಗುವ ನಿರೀಕ್ಷೆ ಇದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಉತ್ತರ ಭಾರತಕ್ಕೆ ರಾಹುಲ್ ಗಾಂಧಿ ಅವಶ್ಯಕತೆಯೂ ಇದೆ.

ಹೀಗಾಗಿ ಹಿಂದಿ ಪ್ರಾಬಲ್ಯವಿರುವ ರಾಜ್ಯಗಳಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದು ಹಲವು ಕಾಂಗ್ರೆಸ್ ನಾಯಕರು ಒತ್ತಡ ಹೇರುತ್ತಿದ್ದಾರೆ. ಮತ್ತಷ್ಟು ನಾಯಕರು ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದಲೇ ಮರುಸ್ಪರ್ಧೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.  ಯಾಕಂದ್ರೆ ರಾಹುಲ್ ಗಾಂಧಿ ವಯನಾಡಿನಿಂದ ಮರು ಸ್ಪರ್ಧಿಸಲು ನಿರ್ಧರಿಸಿದರೆ, ಲೋಕಸಭೆ ಚುನಾವಣೆಗೆ ಕೇರಳದಲ್ಲಿ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್‌ಗೆ ಸುಗಮವಾಗಲಿದೆ. ಹಾಗೇ ಹೆಚ್ಚಿನ ಹಾಲಿ ಸಂಸದರು ಈ ಬಾರಿಯೂ ಮುಂದುವರಿಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ಆಲಪ್ಪುಳ ಮತ್ತು ಕಣ್ಣೂರಿನ ಜೊತೆಗೆ ವಯನಾಡ್‌ ಕ್ಷೇತ್ರಕ್ಕೆ ಗೆಲ್ಲುವ ಅಭ್ಯರ್ಥಿಗಳನ್ನ ಹುಡುಕಬೇಕಾಗುತ್ತದೆ. ತಂದೆ ರಾಜೀವ್ ಗಾಂಧಿ ಸ್ಪರ್ಧಿಸುತ್ತಿದ್ದ ಅಮೇಥಿ ಕ್ಷೇತ್ರದಿಂದಲೇ ಮೂರು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದ ರಾಹುಲ್ ಕಳೆದ ಬಾರಿ ಸ್ಮೃತಿ ಇರಾನಿ ಎದುರು ಸೋಲು ಕಂಡಿದ್ರು. ಹೀಗಾಗಿ ಈ ಬಾರಿಯೂ ಅಮೇಥಿ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಬಿಜೆಪಿ ನಾಯಕರು ರಾಹುಲ್ ಗಾಂಧಿಗೆ ಸವಾಲು ಹಾಕುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆ ರಾಹುಲ್ ಗಾಂಧಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. 2022ರ ಸೆಪ್ಟೆಂಬರ್ ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿದ್ರು.  12 ರಾಜ್ಯಗಳಲ್ಲಿ ನಡೆಸಿದ ಪಾದಯಾತ್ರೆ 2023ರ ಜನವರಿ 21ರಂದು ಮುಕ್ತಾಯಗೊಂಡಿತ್ತು. ಜಮ್ಮು ಕಾಶ್ಮೀರದಲ್ಲಿ ಜೋಡೋ ಯಾತ್ರೆ ಮುಗಿಯುವ ವೇಳೆಗೆ ದೊಡ್ಡ ಯಶಸ್ಸು ಕಂಡಿತ್ತು. ಹೀಗಾಗಿ ಪಾದಯಾತ್ರೆ ಆರಂಭಿಸಿದ್ದ ಕನ್ಯಾಕುಮಾರಿ ಕ್ಷೇತ್ರದಿಂದಲೇ ರಾಹುಲ್​ ಲೋಕಸಭೆಗೆ ಸ್ಪರ್ಧಿಸ್ತಾರಾ ಅನ್ನೋ ಬಗ್ಗೆ ಚರ್ಚೆಯಾಗ್ತಿದೆ.

ಕಳೆದ ಬಾರಿ ಉತ್ತರದಲ್ಲಿ ಸೋತರೂ ರಾಹುಲ್​ಗೆ ದಕ್ಷಿಣದಲ್ಲಿ ರಾಜಕೀಯ ಪುನರ್ಜನ್ಮ ಸಿಕ್ಕಿತ್ತು. 2024ರ ಲೋಕಸಭಾ ಚುನಾವಣೆಗೆ ದಕ್ಷಿಣದಿಂದ ಸ್ಪರ್ಧಿಸಿದ್ರೆ ಪಕ್ಷದ ಬಲವರ್ಧನೆಯಾಗುತ್ತೆ.  ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ವರ್ಚಸ್ಸು ಹೆಚ್ಚುತ್ತೆ ಅನ್ನೋದು ಕಾಂಗ್ರೆಸಿಗರ ಲೆಕ್ಕಾಚಾರ. ಆದರೆ ಕನ್ಯಾಕುಮಾರಿಯಿಂದ ಸ್ಪರ್ಧಿಸಿದರೆ ರಾಹುಲ್​ಗೆ ಗೆಲುವು ಅಷ್ಟೊಂದು ಸುಲಭವಿಲ್ಲ. ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುತ್ತೆ. 2009ರಲ್ಲಿ ಡಿಎಂಕೆ ಅಭ್ಯರ್ಥಿ ಗೆಲುವು ಕಂಡಿದ್ರು. 2014ರಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ರು, 2019ರಲ್ಲಿ ಕಾಂಗ್ರೆಸ್ ವಸಂತಕುಮಾರ್ ಕನ್ಯಾಕುಮಾರಿಯಲ್ಲಿ ಗೆದ್ರು. 2021ರಲ್ಲಿ ಕೊರೊನಾಗೆ ಮೃತಪಟ್ಟಿದ್ರು. 2021ರಲ್ಲಿ ತಂದೆ ನಿಧನದ ಬಳಿಕ ಬೈಎಲೆಕ್ಷನ್ ನಲ್ಲಿ ಸ್ಪರ್ಧಿಸಿ ಗೆದ್ದಿರುವ ವಿಜಯಕುಮಾರ್ ಗೆದ್ರು. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಸುಲಭವಾಗಿ ಗೆಲ್ಲಬಹುದು ಅಂತಾ ಹೇಳೋಕೆ ಆಗಲ್ಲ. ಮತ್ತೊಂದೆಡೆ ಕರ್ನಾಟಕದ ಯಾವುದಾದರೊಂದು ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಸ್ಪರ್ಧಿಸುವ ಬಗ್ಗೆ ಚರ್ಚೆಯಾಗ್ತಿದೆ. ಕರ್ನಾಟಕ ವಿಧಾನಸಭೆ ಗೆಲುವಿನಿಂದ ಕಾಂಗ್ರೆಸ್​​ಗೆ ಬಲ ಬಂದಿರೋದು ಸುಳ್ಳಲ್ಲ.  ಗಾಂಧಿ ಕುಟುಂಬದ ನಾಯಕರಿಗೆ ಈ ಹಿಂದೆ ಕರ್ನಾಟಕದಿಂದಲೇ ರಾಜಕೀಯ ಪುನರ್ಜನ್ಮ ಸಿಕ್ಕಿತ್ತು.  1978ರಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಇಂದಿರಾ ಗಾಂಧಿ ಗೆದ್ದಿದ್ರು.  1999ರಲ್ಲಿ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಗೆಲುವು ಕಂಡಿದ್ರು.

ಹೀಗೆ ಕರ್ನಾಟಕ ಕೂಡ ಗಾಂಧಿ ಕುಟುಂಬಕ್ಕೆ ಈ ಹಿಂದೆ ಹೊಸ ಚೈತನ್ಯ ನೀಡಿದ ಇತಿಹಾಸವಿದೆ. ಹೀಗಾಗಿ ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಿದ್ರೂ ಅಚ್ಚರಿ ಇಲ್ಲ. ರಾಹುಲ್ ಗಾಂಧಿ ಹೇಳಿ ಕೇಳಿ ಭಾರತದ ರಾಜಕೀಯದಲ್ಲಿ ದೊಡ್ಡ ಇತಿಹಾಸವನ್ನೇ ಹೊಂದಿರುವ ಕುಟುಂಬದಲ್ಲಿ ಜನಿಸಿದವರು. ಇವರ ಕುಟುಂಬ ಮೂವರು ಪ್ರಧಾನಮಂತ್ರಿಗಳನ್ನ ಕಂಡಿದೆ. ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ ನೆಹರು ಅವರ ಮರಿಮೊಮ್ಮಗ ಇವರು. ಇವರ ಅಜ್ಜಿ ಇಂದಿರಾ ಗಾಂಧಿ ಸಹ ಭಾರತದ ಪ್ರಧಾನಿಯಾಗಿದ್ದರು. ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಇವರ ತಂದೆ. ಹಾಗೇ ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ಇವರ ತಾಯಿ.. ಇವರ ಸಹೋದರಿ ಪ್ರಿಯಾಂಕಾ ಗಾಂಧಿ ಸಹ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಹೀಗೆ ಇಡೀ ಕುಟುಂಬವೇ ರಾಜಕೀಯ ಹಿನ್ನೆಲೆ ಹೊಂದಿದೆ.

ರಾಜಕೀಯದಲ್ಲಿ ನೆಹರು-ಗಾಂಧಿ ಕುಟುಂಬದ 4ನೇ ತಲೆಮಾರು ರಾಹುಲ್ ಗಾಂಧಿ. 2004ರಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮೊದಲ ಬಾರಿಗೆ ರಾಹುಲ್ ಸ್ಪರ್ಧಿಸಿದ್ರು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಅಮೇಥಿ ಲೋಕಸಭಾ ಕ್ಷೇತ್ರ, ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಸ್ಪರ್ಧಿಸಿದ್ರು.

ಮೊದಲ ಬಾರಿ ಚುನಾವಣೆಯಲ್ಲೇ ರಾಹುಲ್ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡಿದ್ರು. 2009, 2014 ರಲ್ಲಿ ಅಮೇಥಿ ಕ್ಷೇತ್ರದಿಂದಲೇ ಲೋಕಸಭಾ ಚುನಾವಣೆಯಲ್ಲಿ ಜಯ ದಾಖಲಿಸಿದ್ರು. 2019ರ ಚುನಾವಣೆಯಲ್ಲಿ ಅಮೇಥಿ & ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಎದುರು ಸೋತಿದ್ರು. ಅದೃಷ್ಟಕ್ಕೆ ಕೇರಳದ ವಯನಾಡು ಕ್ಷೇತ್ರ ರಾಹುಲ್ ಕೈ ಹಿಡಿದಿತ್ತು. 2013 ರಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ರಾಹುಲ್ ಗಾಂಧಿ, 2014 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಆಗಿದ್ರೂ ಬಹುಮತ ಸಿಗಲಿಲ್ಲ.   2017ರಲ್ಲಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್, 2019ರ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಕಂಡ್ರು. 2019ರ ಲೋಕಸಭೆಯಲ್ಲಿ ರಾಹುಲ್​ ನೇತೃತ್ವದಲ್ಲಿ ಕಾಂಗ್ರೆಸ್ ಸೋತಾಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ  ರಾಜೀನಾಮೆ ನೀಡಿದ್ರು.  2023ರ ಮಾರ್ಚ್ ನಲ್ಲಿ ಮೋದಿ ಸರ್ ನೇಮ್ ವಿವಾದದಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡ್ರು. ವಯನಾಡು ಕ್ಷೇತ್ರದ ಸಂಸದ ಸ್ಥಾನದಿಂದ ಗುಜರಾತ್ ಹೈಕೋರ್ಟ್ ರಾಹುಲ್​ ಗಾಂಧಿಯನ್ನ ಅನರ್ಹಗೊಳಿಸಿತ್ತು.  2023ರ ಜುಲೈನಲ್ಲಿ ರಾಹುಲ್ ಗಾಂಧಿಯವರ ಅನರ್ಹತೆಗೆ ಸುಪ್ರೀಂ ಕೋರ್ಟ್  ತಡೆ ನೀಡಿತ್ತು.

ತಮ್ಮ ಎರಡು ದಶಕಗಳ ರಾಜಕೀಯ ಜೀವನದಲ್ಲಿ ರಾಹುಲ್ ಗಾಂಧಿ ಸೋಲಿನ ರುಚಿಯನ್ನೂ ಕಂಡಿದ್ದಾರೆ. ಅನರ್ಹತೆಯನ್ನೂ ಎದುರಿಸಿದ್ದಾರೆ. ಭಾರತ್ ಜೋಡೋ ಯಾತ್ರೆ ಬಳಿಕ ಜನಸಾಮಾನ್ಯರ ಜೊತೆ ಬೆರೆಯುತ್ತಿರುವ ರಾಹುಲ್ ಅವ್ರನ್ನ ಭೇಟಿಯಾಗಿ ಅವರ ಕಷ್ಟಗಳನ್ನ ತೀರಾ ಹತ್ತಿರದಿಂದ ಆಲಿಸುತ್ತಿದ್ದಾರೆ. ಡ್ರೈವರ್, ಗ್ಯಾರೇಜ್, ಹಮಾಲಿ ಸೇರಿದಂತೆ ವಿವಿಧ ಸಮುದಾಯಗಳ ಜೊತೆ ಮಾತುಕತೆ ಕೂಡ ನಡೆಸಿದ್ದಾರೆ. ಒಟ್ಟಾರೆ ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಚರ್ಚೆ ಜೋರಾಗಿದೆ.

 

Shantha Kumari