ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ರಾಹುಲ್ ವಲಸೆ? – ರಾಹುಲ್ ದಾರಿ ಯಾವುದಯ್ಯ?

ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ರಾಹುಲ್ ವಲಸೆ? – ರಾಹುಲ್ ದಾರಿ ಯಾವುದಯ್ಯ?

ಲೋಕಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಈಗಾಗಲೇ ಕೆಲ ಪಕ್ಷಗಳು ಅಭ್ಯರ್ಥಿಗಳ ಲಿಸ್ಟ್ ಕೂಡ ಅನೌನ್ಸ್ ಮಾಡಿವೆ. ಸ್ಥಳೀಯ ಮಟ್ಟದಲ್ಲೂ ಮೈತ್ರಿ ಮಾಡಿಕೊಂಡು ರಣತಂತ್ರ ಹೆಣೆಯುತ್ತಿವೆ. ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ. ಆದ್ರೆ ಕೇರಳದ ವಯನಾಡು ಕ್ಷೇತ್ರದ ಹಾಲಿ ಸಂಸದರಾಗಿರುವ ರಾಹುಲ್ ಗಾಂಧಿ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ವಯನಾಡು ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ಮಾಡಲ್ಲ ಎನ್ನಲಾಗಿದೆ. ಹಾಗಾದ್ರೆ ರಾಹುಲ್ ಗಾಂಧಿ ಎಲ್ಲಿಂದ ಸ್ಪರ್ಧೆ ಮಾಡ್ತಾರೆ..? ಈ ಸಲವೂ 2 ಕ್ಷೇತ್ರಗಳಿಂದ ಸ್ಪರ್ಧಿಸ್ತಾರಾ..? ಕಾಂಗ್ರೆಸ್ಸಿಗರ ಲೆಕ್ಕಾಚಾರ ಏನು..? ಈ ಬಗೆಗಿನ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ VS ಸ್ಮೃತಿ ಇರಾನಿ – ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿಯನ್ನ ಮಣಿಸೋಕೆ ಸಾಧ್ಯಾನಾ?

ಮಹತ್ವದ ರಾಜಕಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡು ಕ್ಷೇತ್ರ ತೊರೆದು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. 2019ರಲ್ಲಿ ಉತ್ತರ ಪ್ರದೇಶದ ಅಮೇಠಿ ಹಾಗೂ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ, ವಯನಾಡು ಕ್ಷೇತ್ರದಲ್ಲಿ 4 ಲಕ್ಷ ಮತಗಳ ಭಾರೀ ಅಂತರದಿಂದ ಜಯಗಳಿಸಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಸೋಲು ಕಂಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ರಾಜಕೀಯ ಕಾರಣದಿಂದ ವಯನಾಡು ಕ್ಷೇತ್ರ ಬಿಟ್ಟು ಮತ್ತೊಂದು ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದಾರೆ. ಈ ಬಾರಿಯೂ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಒಲವು ತೋರಿದ್ದಾರೆ. ಕಾಂಗ್ರೆಸ್‌ ಉನ್ನತ ಮೂಲಗಳ ಪ್ರಕಾರ ಉತ್ತರ ಪ್ರದೇಶದ ಒಂದು ಕ್ಷೇತ್ರ, ಕರ್ನಾಟಕ ಅಥವಾ ತೆಲಂಗಾಣದ ಒಂದು ಕ್ಷೇತ್ರದಿಂದ ರಾಹುಲ್‌ ಗಾಂಧಿ ಅವರು ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ. ಉತ್ತರ ಪ್ರದೇಶದ ಅಮೇಠಿ ಜತೆಗೆ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಅಥವಾ ತೆಲಂಗಾಣದ ಮಲ್ಕಾಜಗಿರಿ ಕ್ಷೇತ್ರದಿಂದ ಸ್ಫರ್ಧೆ ಮಾಡುವ ಸಂಭವವಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಡಿಕೆ ಶಿವಕುಮಾರ್‌ ಸಹೋದರ ಡಿಕೆ ಸುರೇಶ್‌ ಪ್ರತಿನಿಧಿಸುತ್ತಿದ್ದರೆ, ಮಲ್ಕಾಜಗಿರಿ ಕ್ಷೇತ್ರವನ್ನು ಹಾಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಪ್ರತಿನಿಧಿಸುತ್ತಿದ್ದರು.

ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ಮಣಿಸಲು ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಇಂಡಿಯಾ ಹೆಸರಿನ ಮೈತ್ರಿ ಕೂಡ ರಚಿಸಿಕೊಂಡಿವೆ. ಮೈತ್ರಿಕೂಟದ ಭಾಗವಾಗಿರುವ ಇಂಡಿಯನ್‌ ಯುನಿಯನ್‌ ಮುಸ್ಲಿಂ ಲೀಗ್‌  ಹಾಗೂ ಸಿಪಿಐ ಪಕ್ಷಗಳು ವಯನಾಡು ಕ್ಷೇತ್ರ ಬಿಟ್ಟುಕೊಡುವಂತೆ ಕಾಂಗ್ರೆಸ್‌ ಮೇಲೆ ಒತ್ತಡ ಹೇರಿವೆ. ಇದ್ರ ನಡುವೆ ಸಿಪಿಐ ಪಕ್ಷ ವಯನಾಡು ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟಿಸಿದೆ. ಸಿಪಿಐ ಪ್ರಧಾನ ಕಾರ‍್ಯದರ್ಶಿ ಡಿ. ರಾಜಾ ಅವರ ಪತ್ನಿ ಅನ್ನಿ ರಾಜಾ ಅವರನ್ನು ವಯನಾಡು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಹೀಗಾಗಿ ರಾಹುಲ್‌ ಗಾಂಧಿ ಅನಿವಾರ್ಯವಾಗಿ ವಯನಾಡು ಕ್ಷೇತ್ರ ಬಿಟ್ಟುಕೊಡಬೇಕಾಗಿದೆ. ಹಾಗಾದ್ರೆ ರಾಹುಲ್ ಬೇರೆ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಅನ್ನೋ ಪ್ರಶ್ನೆ ಎದುರಾಗಿದೆ.

ಕರ್ನಾಟಕ, ತೆಲಂಗಾಣ ಯಾಕೆ? 

ವಯನಾಡು ಕ್ಷೇತ್ರ ತ್ಯಾಗದಿಂದಾಗಿ  ರಾಹುಲ್ ಗಾಂಧಿ ಕರ್ನಾಟಕದ ಒಂದು ಕ್ಷೇತ್ರ ಅಥವಾ ತೆಲಂಗಾಣದ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಉಚಿತ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರ ರಚನೆಯಾಗಿ ಇನ್ನೂ ಒಂದು ವರ್ಷವಾಗಿಲ್ಲ. ಹೀಗಾಗಿ ವಿರೋಧಿ ಅಲೆಗಳೂ ಇಲ್ಲ. ರಾಹುಲ್ ಗಾಂಧಿ ಸ್ಪರ್ಧೆಯಿಂದ ಕರ್ನಾಟಕದ ಇತರ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಲಾಭವಾಗಲಿದೆ. ಬಿಜೆಪಿ ಅಭೂತಪೂರ್ವ ಗೆಲುವಿನ ನಾಗಾಲೋಟ ತಪ್ಪಿಸಲು ನೆರವಾಗಲಿದೆ ಅನ್ನೋ ಲೆಕ್ಕಾಚಾರಗಳು ನಡೆಯುತ್ತಿದೆ. ಇಲ್ಲದಿದ್ರೆ ತೆಲಂಗಾಣದ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿದೆ. ಅಲ್ಲಿಯೂ ಕೂಡ ಇತ್ತೀಚೆಗಷ್ಟೇ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಕಾಂಗ್ರೆಸ್ ಪರ ಅಲೆ ಇದೆ. ಹೀಗಾಗಿ ತೆಲಂಗಾಣದಿಂದ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಇಲ್ಲಿ ಪಕ್ಷದ ಪ್ರಭಾವ ಹೆಚ್ಚಲಿದೆ ಎಂದು ಕಾಂಗ್ರೆಸ್ ಮೂಲಗಳು ಭರವಸೆ ವ್ಯಕ್ತಪಡಿಸಿವೆ.

ಒಟ್ಟಾರೆ ರಾಹುಲ್ ಗಾಂಧಿ ವಯನಾಡು ಕ್ಷೇತ್ರ ಬಿಟ್ಟುಕೊಡೋದು ಕನ್ಫರ್ಮ್ ಆಗಿದೆ. ಆದ್ರೆ ಬೇರೆ ಯಾವ ಕ್ಷೇತ್ರಗಳಿಂದ ಸ್ಪರ್ಧೆ ಮಾಡ್ತಾರೆ.. ಒಂದು ಕ್ಷೇತ್ರದಿಂದ ಮಾತ್ರ ಕಣಕ್ಕೆ ಇಳೀತಾರಾ..? ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧೆನಾ..? ಅನ್ನೋದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Sulekha