ರೈತರ ಪ್ರತಿಭಟನೆಯತ್ತ ಹೊರಟ ರಾಹುಲ್ ಗಾಂಧಿ – 2ನೇ ಹಂತದ ‘ಭಾರತ ಜೋಡೋ ನ್ಯಾಯ ಯಾತ್ರೆ’ ಸ್ಥಗಿತ!
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಚಲೋಗೆ ಬೆಂಬಲ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ‘ಭಾರತ ಜೋಡೋ ನ್ಯಾಯ ಯಾತ್ರೆ’ಯನ್ನು ಸ್ಥಗಿತಗೊಳಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ವರದಿಯಾಗಿದೆ.
ಸದ್ಯ ರಾಹುಲ್ ಗಾಂಧಿ ನೇತೃತ್ವದ 2 ನೇ ಹಂತದ ‘ಭಾರತ ಜೋಡೋ ನ್ಯಾಯ ಯಾತ್ರೆ’ ಯನ್ನು ನಡೆಸುತ್ತಿದ್ದಾರೆ. ಈ ಯಾತ್ರೆ ಛತ್ತೀಸಗಢದಿಂದ ಜಾರ್ಖಂಡ್ ಗರ್ಹಾವ ಜಿಲ್ಲೆಯ ಮೂಲಕ ಬರಬೇಕಿತ್ತು. ಎರಡನೇ ಹಂತದ ಯಾತ್ರೆಗೆ ಬುಧವಾರ ದಿನಾಂಕ ನಿಗದಿಯಾಗಿತ್ತು. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ‘ಭಾರತ ಜೋಡೋ ನ್ಯಾಯ ಯಾತ್ರೆ’ಯನ್ನು ಜಾರ್ಖಂಡ್‌ನಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: 40 ಪರ್ಸೆಂಟ್ ಕಮೀಷನ್ ಆರೋಪದ ಬೆನ್ನಲ್ಲೇ ಸರ್ಕಾರ ಅಲರ್ಟ್ – ಗುತ್ತಿಗೆದಾರರ 600 ಕೋಟಿ ರೂ. ಬಿಡುಗಡೆ
ಮಂಗಳವಾರ ತಡರಾತ್ರಿ ಕೈಗೊಂಡ ನಿರ್ಧಾರದಂತೆ, ಜಾರ್ಖಂಡ್‌ನಲ್ಲಿ ನಡೆಯಬೇಕಿದ್ದ ‘ಭಾರತ ಜೋಡೋ ನ್ಯಾಯ ಯಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕಾಂಗ್ರೆಸ್ ವಕ್ತಾರ ಸೋನಲ್ ಶಾಂತಿ ತಿಳಿಸಿದ್ದಾರೆ.
ಯಾತ್ರೆಯು ಜಾರ್ಖಂಡ್‌ನಿಂದ ಪುನರಾರಂಭಗೊಳ್ಳುವುದು ಅಸಂಭವವಾಗಿದೆ. ಆದರೆ, ಗರ್ಹಾವ ಜಿಲ್ಲೆಯ ರಂಕಾದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರೊಂದಿಗೆ ನಿಗದಿಯಾಗಿದ್ದ ಮಾತುಕತೆಯನ್ನು ಜೈರಾಮ್ ರಮೇಶ್ ಹಾಗೂ ಇನ್ನಿತರ ನಾಯಕರು ನಡೆಸಿಕೊಡಲಿದ್ದಾರೆ ಎಂದೂ ಹೇಳಿದ್ದಾರೆ.
ಜಾರ್ಖಂಡ್‌ನಲ್ಲಿ ಫೆಬ್ರುವರಿ ಮೊದಲ ವಾರದಲ್ಲಿ ನಡೆದ 1ನೇ ಹಂತದ ಯಾತ್ರೆಯನ್ನು ರಾಹುಲ್ ಮುನ್ನಡೆಸಿದ್ದರು. ಪಶ್ಚಿಮ ಬಂಗಾಳ ಮೂಲಕ ಫೆಬ್ರುವರಿ 2ರಂದು ಜಾರ್ಖಂಡ್‌ಗೆ ಕಾಲಿಟ್ಟಿದ್ದ ಯಾತ್ರೆಯು, ಫೆಬ್ರುವರಿ 6ರಂದು ಒಡಿಶಾ ತಲುಪಿತ್ತು. ಇಂದು ಯಾತ್ರೆ ಸ್ಥಗಿತಗೊಳ್ಳದಿದ್ದರೆ, ಫೆಬ್ರುವರಿ 15ರಂದು ಬಿಹಾರ ತಲುಪುವವರೆಗೂ ರಾಹುಲ್ ಗಾಂಧಿ ಜಾರ್ಖಂಡ್‌ನಲ್ಲೇ ಉಳಿಯುತ್ತಿದ್ದರು.
ಮಣಿಪುರದಿಂದ ಜನವರಿ 14ರಂದು ಆರಂಭವಾಗಿರುವ ‘ಭಾರತ ಜೋಡೊ ನ್ಯಾಯ ಯಾತ್ರೆ’ಯು 67 ದಿನಗಳವರೆಗೆ 6,713 ಕಿ.ಮೀ ದೂರ ಸಾಗಲಿದೆ. ಮಾರ್ಚ್ 20ರಂದು ಮುಂಬೈ ತಲುಪುವ ಮುನ್ನ 15 ರಾಜ್ಯಗಳ 110 ಜಿಲ್ಲೆಗಳನ್ನು ಹಾದುಹೋಗಲಿದೆ.