ರಾಹುಲ್ ಗಾಂಧಿ VS ಸ್ಮೃತಿ ಇರಾನಿ – ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿಯನ್ನ ಮಣಿಸೋಕೆ ಸಾಧ್ಯಾನಾ?

ರಾಹುಲ್ ಗಾಂಧಿ VS ಸ್ಮೃತಿ ಇರಾನಿ – ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಸ್ಮೃತಿ ಇರಾನಿಯನ್ನ ಮಣಿಸೋಕೆ ಸಾಧ್ಯಾನಾ?

ರಾಹುಲ್ ಗಾಂಧಿ VS ಸ್ಮೃತಿ ಇರಾನಿ.. ಇಬ್ಬರೂ ರಾಷ್ಟ್ರ ರಾಜಕೀಯದ ಬದ್ಧ ವೈರಿಗಳು. ಅದು ಸಂಸತ್​ನ ಒಳಗೆಯೇ ಇರಲಿ, ಹೊರಗೆಯೇ ಇರಲಿ..ಸ್ಮತಿ ಇರಾನ್ ಮತ್ತು ರಾಹುಲ್​ ಗಾಂಧಿ ನಡುವಿನ ಜಟಾಪಟಿ ಯಾವಾಗಲೂ ಇನ್ನೊಂದು ರೇಂಜ್​​ನಲ್ಲಿರುತ್ತೆ. ಇವರಿಬ್ಬರ ಈ ರಾಜಕೀಯ ಕಾಳಗಕ್ಕೆ ಈಗ ಭರ್ತಿ 10 ವರ್ಷಗಳಾಗಿವೆ. 2014ರ ಲೋಕಸಭೆ ಚುನಾವಣೆ ವೇಳೆ ಉತ್ತರಪ್ರದೇಶದ ಅಮೇಥಿ ಅಖಾಡದಲ್ಲಿ ಎದುರುಬದುರಾದ ರಾಹುಲ್ ಮತ್ತು ಸ್ಮೃತಿ ಇರಾನಿ ಅಂದಿನಿಂದ ಇಂದಿನವರೆಗೂ ಅತ್ಯಂತ ಪ್ರಬಲ ಎದುರಾಳಿಗಳಾಗಿದ್ದಾರೆ. 2014ರಲ್ಲಿ ತಮ್ಮ ಮೊದಲ ಚುನಾವಣೆಯಲ್ಲೇ ಸ್ಮೃತಿ ಇರಾನಿ ರಾಹುಲ್​ ಗಾಂಧಿಯನ್ನ ಎದುರಿಸಿ ಸೋತಿದ್ರು. ಇದಾಗ ಐದು ವರ್ಷಗಳಲ್ಲಿ ಛಲಗಾತಿ ಸ್ಮೃತಿ ಇರಾನಿ ಅಮೇಥಿಯಿಂದಲೇ ಮತ್ತೊಮ್ಮೆ ಸ್ಪರ್ಧಿಸಿ 2019ರಲ್ಲಿ ರಾಹುಲ್​ ಗಾಂಧಿಯನ್ನ ಸೋಲಿಸಿಯೇ ಬಿಟ್ಟಿದ್ರು. ಅದು ಕೂಡ 55,000 ಮತಗಳ ಅಂತರದಿಂದ ಮಣಿಸಿದ್ರು. ಕಾಂಗ್ರೆಸ್​ ನಾಯಕನಿಗಷ್ಟೇ ಅಲ್ಲ, ಇಡೀ ಗಾಂಧಿ ಪರಿವಾರಕ್ಕೆ ಅಂದು ಭಾರಿ ಮುಖಭಂಗವಾಗಿತ್ತು. ಆದ್ರೆ ರಾಹುಲ್ ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿ ಗೆದ್ದು ಬಚಾವಾಗಿದ್ರು. ಹಾಗಂತಾ ಗಾಂಧಿ ಪರಿವಾರ ಮತ್ತು ಕಾಂಗ್ರೆಸ್ ಕೋಟೆಯಾಗಿದ್ದ ಅಮೇಥಿಯಲ್ಲಾದ ಸೋಲನ್ನ ಮರೆಯೋಕೆ ಹೇಗೆ ಸಾಧ್ಯ ಹೇಳಿ. ಐದು ವರ್ಷಗಳ ಹಿಂದೆ ಆದ ಸೋಲನ್ನ​ ರಾಹುಲ್​ ಸೇರಿದಂತೆ ಗಾಂಧಿ ಕುಟುಂಬಸ್ಥರಿಗೆ ಅರಗಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಹೀಗಾಗಿ ರಾಹುಲ್ ಈ ಬಾರಿ ಸೇಡು ತೀರಿಸಿಕೊಳ್ತಾರಾ ಅನ್ನೋ ಬಗ್ಗೆ ರಾಜಕೀಯವಲಯದಲ್ಲಿ ಚರ್ಚೆ ಶುರುವಾಗಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಹುಲ್​ ಮತ್ತೆ ಅಮೇಥಿಯಿಂದ ಸ್ಪರ್ಧಿಸಿ ಸ್ಮೃತಿ ಇರಾನಿ ಎದುರು ಹಾಕಿಕೊಳ್ಳೋ ಬಗ್ಗೆ ಸುದ್ದಿಗಳು ಹರಿದಾಡ್ತಾ ಇದೆ. ಹಾಗಿದ್ರೆ ಅಮೇಥಿಯಲ್ಲಿ ಸತತ ಮೂರನೇ ಬಾರಿಗೆ ಹೈವೋಲ್ಟೇಜ್ ಬ್ಯಾಟಲ್ ನಡೆಯುತ್ತಾ? ಅಮೇಥಿಯಲ್ಲಿ ರಾಹುಲ್​​ ಗಾಂಧಿಗೆ ಸ್ಮೃತಿ ಇರಾನಿಯನ್ನ ಮಣಿಸೋಕೆ ಸಾಧ್ಯಾನಾ? ಇಬ್ಬರ ನಡುವಿನ ಸ್ಪರ್ಧೆ ಬಗ್ಗೆ ನಾಯಕರು ಏನಂತಿದ್ದಾರೆ? ಹಾಗೆಯೇ ಪ್ರಧಾನಿ ಮೋದಿಯ ವಾರಾಣಸಿ ಬಗ್ಗೆ ರಾಹುಲ್ ನೀಡಿರೋ ಸ್ಟೇಟ್​​ಮೆಂಟ್ ಈಗ ಲೋಕಸಭೆ ಸಮರಕ್ಕೆ ಇನ್ನಷ್ಟು ಕಿಚ್ಚು ಹಚ್ಚಿದೆ.

ಇದನ್ನೂ ಓದಿ:ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ 5 ದಿನಗಳ ಕಾಲ ವಿರಾಮ! – ಕಾರಣವೇನು ಗೊತ್ತಾ?

ರಾಹುಲ್​ ಗಾಂಧಿಯ ಭಾರತ್​ ಜೋಡೋ ಯಾತ್ರೆ ಅಮೇಥಿಯನ್ನ ತಲುಪಿದ್ದಾರೆ ದೊಡ್ಡ ರಾಜಕೀಯ ಹೈಡ್ರಾಮವೇ ನಡೆದಿತ್ತು. ಅತ್ತ ರಾಹುಲ್ ಯಾತ್ರೆ ಬರ್ತಿದ್ರೆ, ಇತ್ತ ಸ್ಮೃತಿ ಇರಾನಿ ಅಮೇಥಿಯಲ್ಲೇ ಬೀಡು ಬಿಟ್ಟಿದ್ರು. ಅಷ್ಟೇ ಅಲ್ಲ, ಈ ಬಾರಿಯೂ ಅಮೇಥಿಯಲ್ಲೇ ಸ್ಪರ್ಧಿಸುವಂತೆ, ತನ್ನನ್ನ ಮತ್ತೊಮ್ಮೆ ಎದುರಿಸುವಂತೆ ಸ್ಮೃತಿ ಇರಾನಿ, ರಾಹುಲ್​​ ಗಾಂಧಿಗೆ ಸವಾಲ್ ಬೇರೆ ಹಾಕಿದ್ರು. ಇದಕ್ಕೆ ಪ್ರತಿಕ್ರಿಯಿಸಿರೋ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಅಮೇಥಿಯಿಂದ ಸ್ಪರ್ಧಿಸೋ ಬಗ್ಗೆ ರಾಹುಲ್ ಗಾಂಧಿಯೇ ಅಂತಿಮ ನಿರ್ಧಾರ ಕೈಗೊಳ್ತಾರೆ. ಆದ್ರೆ ಅಮೇಥಿಯ ಜನರಂತೂ ರಾಹುಲ್ ಮತ್ತೆ ಅಮೇಥಿಗೆ ಮರಳಬೇಕು ಅಂತಾ ಬಯಸಿದ್ದಾರೆ. 2019ರಲ್ಲಿ ಸ್ಮೃತಿ ಇರಾನಿಯನ್ನ ಗೆಲ್ಲಿಸಿ ತಪ್ಪು ಮಾಡಿದ್ದೇವೆ ಅನ್ನೋದು ಅಮೇಥಿ ಜನತೆಗೆ ಅರಿವಾಗಿದೆ. ಸ್ಮೃತಿ ಇರಾನಿಯ ಚಾಲೆಂಜ್​ಗೆ ನಾವು ಹೆದರೋದಿಲ್ಲ. ರಾಹುಲ್​ ಈ ಬಾರಿ ಅಮೇಥಿಯಲ್ಲಿ ಅಖಾಡಕ್ಕಿಳಿದ್ರೆ ಖಂಡಿತಾ ಗೆಲ್ತಾರೆ ಅಂತಾ ಜೈರಾಮ್ ರಮೇಶ್ ಹೇಳಿಕೆ ನೀಡಿದ್ದಾರೆ.

ಆಗಲೇ ಹೇಳಿದ ಹಾಗೆ ರಾಜಕೀಯವಾಗಿ ನೋಡೋದಾದ್ರೆ ಅಮೇಥಿ ಕಾಂಗ್ರೆಸ್​​ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಕ್ಷೇತ್ರ. ರಾಹುಲ್​ ಗಾಂಧಿ ಅಮೇಥಿಯಿಂದಲೇ ಸ್ಪರ್ಧಿಸಿ ಮೂರು ಬಾರಿ ಸಂಸದರಾಗಿದ್ದಾರೆ. ಅದಕ್ಕೂ ಮುನ್ನ ರಾಜೀವ್​ ಗಾಂಧಿ ಕೂಡ ಅಮೇಥಿಯಿಂದಲೇ ಲೋಕಸಭೆ ಆಯ್ಕೆಯಾಗಿದ್ರು. 1967ರಿಂದ ನಿರಂತರವಾಗಿ ಅಮೇಥಿಯಲ್ಲಿ ಕಾಂಗ್ರೆಸ್​ ಗೆಲ್ಲುತ್ತಾ ಬಂದಿತ್ತು. ನೆಹರೂ ಮತ್ತು ಗಾಂಧಿ ಪರಿವಾರದ ನಿಷ್ಠಾವಂತರೇ ಅಮೇಥಿಯಿಂದ ಆಯ್ಕೆಯಾಗುತ್ತಿದ್ರು. ಇಷ್ಟಾದ್ರೂ 2019ರ ಲೋಕಸಭೆ ಚುನಾವಣೆ ವೇಳೆ ಅಮೇಥಿಯಲ್ಲಿ ರಾಹುಲ್​ ವಿರುದ್ಧ ಭಾರಿ ಆಡಳಿತ ವಿರೋಧಿ ಅಲೆಯಿತ್ತು. ಹಾಗೆಯೇ 2014ರಲ್ಲಿ ಸೋತ್ರೂ 2019ರಲ್ಲಿ ಗೆಲ್ಲಲೇಬೇಕು ಅಂತಾ ಶಪಥ ಮಾಡಿ ಸ್ಮೃತಿ ಇರಾನಿ ಐದು ವರ್ಷಗಳ ಅಮೇಥಿಯಲ್ಲಿ ಸಾಕಷ್ಟು ಗ್ರೌಂಡ್ ವರ್ಕ್ ಮಾಡಿದ್ರು. ರಾಹುಲ್​ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆಯನ್ನ ಎನ್​ಕ್ಯಾಶ್ ಮಾಡಿಕೊಂಡಿದ್ರು. ಹೀಗಾಗಿಯೇ 2019ರಲ್ಲಿ ಅಮೇಥಿಯಲ್ಲಿ ಮೂರು ಸಂಸದರಾಗಿದ್ದ ರಾಹುಲ್​ ಗಾಂಧಿಯನ್ನ ಸ್ಮೃತಿ ಇರಾನಿ ಸೋಲಿಸಿದ್ರು. ಇದ್ರ ಜೊತೆಗೆ 2019ರಲ್ಲಿ ಇಡೀ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಒಂದು ಸೀಟ್ ಮಾತ್ರ ಗೆದ್ದಿತ್ತು. ಸೋನಿಯಾ ಗಾಂಧಿ ಸ್ಪರ್ಧಿಸಿದ್ದ ಮತ್ತೊಂದು ಕೈ ಕೋಟೆ ರಾಯ್​​ಬರೇಲಿ ಬಿಟ್ರೆ ಇಡೀ ರಾಜ್ಯದಲ್ಲಿ ಇನ್ಯಾವುದೇ ಕ್ಷೇತ್ರವನ್ನ ಕಾಂಗ್ರೆಸ್ ಗೆದ್ದಿರಲಿಲ್ಲ. ಆದ್ರೆ 2024ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ರಾಯ್​ಬರೇಲಿಯಿಂದ ಸ್ಪರ್ಧಿಸ್ತಾ ಇಲ್ಲ. ಸೋನಿಯಾ ಗಾಂಧಿ ರಾಜಸ್ಥಾನದಿಂದ ರಾಜ್ಯಸಭೆಗೆ ಎಂಟ್ರಿಯಾಗೋಕೆ ನಿರ್ಧರಿಸಿದ್ದಾರೆ. ಹೀಗಾಗಿ ರಾಹುಲ್​ ಗಾಂಧಿ ಈ ಬಾರಿ ವಯನಾಡಿನ ಜೊತೆಗೆ ಅಮೇಥಿಯಿಂದ ಅಖಾಡಕ್ಕಿಳೀತಾರಾ? ಇಲ್ಲಾ ತಾಯಿಯಿಂದ ತೆರವಾಗ್ತಾ ಇರೋ ರಾಯ್​ಬರೇಲಿಯಿಂದ ಸ್ಪರ್ಧಿಸ್ತಾರಾ ಅನ್ನೋ ಪ್ರಶ್ನೆಯೂ ಎದ್ದಿದೆ. ಒಂದು ವೇಳೆ ರಾಹುಲ್ ಅಮೇಥಿಯನ್ನೇ ಚೂಸ್ ಮಾಡಿದ್ರೆ, ಪ್ರಿಯಾಂಕಾ ಗಾಂಧಿ ರಾಯ್​​ಬರೇಲಿಯಿಂದ ಸ್ಪರ್ಧಿಸೋ ಸಾಧ್ಯತೆ ಕೂಡ ಇದೆ.

ಒಂದು ವೇಳೆ ರಾಹುಲ್ ಗಾಂಧಿ ಬಿಜೆಪಿ ನಾಯಕಿ ಸ್ಮೃತಿ ಇರಾನಿಯ ಚಾಲೆಂಜ್ ಎಕ್ಸ್​​ಪ್ಟ್ ಮಾಡಿ ಅಮೇಥಿಯಿಂದ ಸ್ಪರ್ಧಿಸಿದ್ದೇ ಆದಲ್ಲಿ, ಇಬ್ಬರ ನಡುವೆ ರೋಚಕ ಫೈಟ್ ನಡೆಯೋದಂತೂ ಗ್ಯಾರಂಟಿ. ರಾಹುಲ್ ಅಮೇಥಿಯಿಂದ ಸ್ಪರ್ಧಿಸೋ ಬಗ್ಗೆ ನಿರ್ಧಾರ ಕೈಗೊಳ್ಳೋ ಮುನ್ನವೇ ಸ್ಮೃತಿ ಇರಾನಿ ವಾಗ್ದಾಳಿ ಶುರು ಮಾಡಿದ್ದಾರೆ. ರಾಹುಲ್ ಭಾರತ್ ಜೋಡೋ ಯಾತ್ರೆ ವೇಳೆ ಅಮೇಥಿಯಲ್ಲಿ ರಸ್ತೆಗಳೆಲ್ಲಾ ಖಾಲಿ ಹೊಡೀತಿದ್ವು. ಜನರಿಗೆ ರಾಹುಲ್ ಮೇಲೆ ನಂಬಿಕೆಯೇ ಇಲ್ಲ ಎಂದಿದ್ರು. ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಿಂದ ರಾಹುಲ್ ದೂರವುಳಿದಿದ್ರು ಅಂತಾ ಸ್ಮೃತಿ ಇರಾನಿ ರಾಮಬಾಣ ಪ್ರಯೋಗಿಸಿದ್ದಾರೆ. ಜೊತೆಗೆ ಉತ್ತರಪ್ರದೇಶ ಹೂಡಿಕೆದಾರರ ಸಮಾವೇಶದಲ್ಲಿ ಅಮೇಥಿಗೆ 6,523 ಕೋಟಿ ಮೊತ್ತದ ಹೂಡಿಕೆಯಾಗಿದೆ ಅಂತಾ ತಮ್ಮ ಅವಧಿಯಲ್ಲಿ ಕ್ಷೇತ್ರ ಬದಲಾಗ್ತಿದೆ ಅನ್ನೋದಾಗಿ ಹೇಳಿಕೊಂಡಿದ್ದಾರೆ.

ಹೀಗಾಗಿ ಸದ್ಯದ ಪರಿಸ್ಥಿತಿ ನೋಡಿದ್ರೆ ಅಮೇಥಿಯಲ್ಲಿ ಸ್ಮೃತಿ ಇರಾನಿಯನ್ನ ಮಣಿಸೋದು ರಾಹುಲ್​ಗೆ ಅಷ್ಟು ಸುಲಭ ಇಲ್ಲ. ಅದು ಬೇರೆ ಈ ಬಾರಿಯ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ದೊಡ್ಡ ಫ್ಯಾಕ್ಟರ್ ಆಗಲಿದೆ. ಸಾಲದ್ದಕ್ಕೆ ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. 2019ರ ಲೋಕಸಭೆ ಚುನಾವಣೆಯಲ್ಲಂತೂ ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಗೆದ್ದಿದ್ದು ಒಂದು ಕ್ಷೇತ್ರವಷ್ಟೇ. ಆದ್ರೆ 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ 403 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನಷ್ಟೇ ಗಳಿಸಿತ್ತು. ಅದು ಕೂಡ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲೇ ಪ್ರಚಾರ ನಡೆಸಿದ್ರೂ 2.33% ವೋಟ್​ಶೇರ್ ಮಾತ್ರ ಕಾಂಗ್ರೆಸ್​​ಗೆ ದಕ್ಕಿತ್ತು. ಹೀಗಾಗಿಯೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟ್ ಗೆಲ್ಲೋಕೆ ಅಂತಾನೆ ರಾಹುಲ್​​ ಗಾಂಧಿ ಅಮೇಥಿ ಸೇರಿದಂತೆ ಉತ್ತರಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕ್ಷೇತ್ರ ವಾರಾಣಸಿಯಲ್ಲಿ ರಾಹುಲ್​ ಗಾಂಧಿ ನೀಡಿರೋ ಒಂದು ಸ್ಟೇಟ್​ಮೆಂಟ್ ಈಗ ಕಿಚ್ಚು ಹಚ್ಚಿದೆ. ವಾರಾಣಸಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಕುಡಿದು ಬೀದಿಯಲ್ಲಿ ಬಿದ್ದಿರ್ತಾರೆ. ​ಉತ್ತರಪ್ರದೇಶದ ಭವಿಷ್ಯ ಕುಡಿಯೋದೆ ಆಗ್ತಾ ಇದೆ ಅಂತಾ ಹೇಳಿದ್ದಾರೆ. ಇದಕ್ಕೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕ ಕಾಶಿಯ ಜನರನ್ನ ಅವಮಾನ ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ. ಹೀಗೆ ಭಾರತ್ ಜೋಡೋ ಯಾತ್ರೆ ಉತ್ತರಪ್ರದೇಶದಲ್ಲಿ ಸಾಗ್ತಾ ಇದ್ದಂತೆ ರಾಹುಲ್-ಇರಾನಿ ನಡುವಿನ ಟಾಕ್ ವಾರ್​ ಕೂಡ ತಾರಕಕ್ಕೇರಿದೆ.

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಕೂಡ ಇದೆ. ಒಂದು ವೇಳೆ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸೋದೇ ಆದಲ್ಲಿ, ಕೇರಳದ ವಯನಾಡನ್ನ ಬಿಟ್ಟು ಕೊಡ್ತಾರಾ ಅನ್ನೋದು. ಯಾಕಂದ್ರೆ, ಸ್ಮೃತಿ ಇರಾನಿ ಮಾಡಿರೋ ಚಾಲೆಂಜ್​​ನಲ್ಲಿ ಇದು ಕೂಡ ಇದೆ. ವಯನಾಡು ಬಿಟ್ಟು ಅಮೇಥಿಯಿಂದ ಮಾತ್ರ, ಅಂದ್ರೆ ಒಂದು ಕ್ಷೇತ್ರದಿಂದಷ್ಟೇ ಅಖಾಡಕ್ಕಿಳಿಯುವಂತೆ ಸವಾಲೊಡ್ಡಿದ್ದಾರೆ. ಆದ್ರೆ ರಾಹುಲ್​ ವಯನಾಡನ್ನ ಬಿಡೋದು ಅನುಮಾನ ಅಂತಾನೇ ಹೇಳಲಾಗ್ತಿದೆ. ಯಾಕಂದ್ರೆ ಉತ್ತರಪ್ರದೇಶದಲ್ಲಿ ಭಾರತ್​ ಜೋಡೋ ಯಾತ್ರೆ ಸಂದರ್ಭದಲ್ಲಿ ವಯನಾಡಿನಲ್ಲಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟ ಕಾರಣ ರಾಹುಲ್​ ಯಾತ್ರೆಯನ್ನ ಅರ್ಧಕ್ಕೆ ನಿಲ್ಲಿಸಿ ಸಂತ್ರಸ್ತ ಕುಟುಂಬವನ್ನ ಭೇಟಿ ಮಾಡಿ ಬಂದಿದ್ರು. ಅಷ್ಟರ ಮಟ್ಟಿಗೆ ರಾಹುಲ್ ವಯನಾಡಿನ ಜನರಿಗೆ ಸ್ಪಂದಿಸೋ ಪ್ರಯತ್ನ ಮಾಡ್ತಾ ಇದ್ದಾರೆ. ಆದ್ರೆ ವಯನಾಡಿನಲ್ಲೇ ರಾಹುಲ್​​ಗೆ ಇನ್ನೊಂದು ಚಾಲೆಂಜ್ ಕೂಡ ಎದುರಾಗಿದೆ. ಕೇರಳದಲ್ಲಿ ಕಾಂಗ್ರೆಸ್​ನ ಮಿತ್ರ ಪಕ್ಷವಾಗಿರೋ ಸಿಪಿಐ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನ ವಯನಾಡಿನಿಂದ ಕಣಕ್ಕಿಳಿಸೋಕೆ ಪ್ಲ್ಯಾನ್ ಮಾಡ್ತಿದೆ. ಹೀಗಾಗಿ ವಯನಾಡನ್ನ ಬಿಟ್ಟುಕೊಂಡುವಂತೆ ಸಿಪಿಐ ಮುಂದಿನ ದಿನಗಳಲ್ಲಿ ರಾಹುಲ್​ ಗಾಂಧಿಗೆ ಒತ್ತಾಯ ಮಾಡೋ ಸಾಧ್ಯತೆ ಇದೆ. 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್​​ ಸಿಪಿಐ ಅಭ್ಯರ್ಥಿಯನ್ನೇ ಸುಮಾರು ನಾಲ್ಕು ಲಕ್ಷ ಮತಗಳ ಅಂತರದಿಂದ ವಯನಾಡಿನಲ್ಲಿ ಸೋಲಿಸಿದ್ರು. 2009 ಮತ್ತು 2014ರ ಲೋಕಸಭೆ ಚುನಾವಣೆಯಲ್ಲೂ ವಯನಾಡಿನಲ್ಲಿ ಕಾಂಗ್ರೆಸ್​ ಸಿಪಿಐಯನ್ನ ಮಣಿಸಿತ್ತು. ಆದ್ರೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ, ಸಿಐಪಿ ಕಾಂಗ್ರೆಸ್​​ನ ದೋಸ್ತಿಯಾಗಿದೆ. ಹೀಗಾಗಿ ರಾಹುಲ್​ ಗಾಂಧಿ ವಯನಾಡು ಸೀಟನ್ನ ಮಿತ್ರಪಕ್ಷಕ್ಕೆ ಬಿಟ್ಟು ಕೊಡಬೇಕಾದ ಸನ್ನಿವೇಶ ಬಂದ್ರೂ ಆಶ್ಚರ್ಯ ಇಲ್ಲ. ಸಿಐಪಿ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗ್ಲೇ ತನ್ನ ವಯನಾಡು ಕ್ಯಾಂಡಿಟೇಟ್​ನ್ನ ಕೂಡ ರೆಡಿ ಮಾಡಿಕೊಂಡಿದೆ. ಅದು ಮತ್ಯಾರೂ ಅಲ್ಲ ಸಿಐಪಿ ನಾಯಕ ಡಿ.ರಾಜಾ ಪತ್ನಿ ಅನ್ನಿ ರಾಜಾರನ್ನ ಅಖಾಡಕ್ಕಿಳಿಸೋಕೆ ಮುಂದಾಗಿದೆ. ಹೀಗಾಗಿ ರಾಹುಲ್ ಗಾಂಧಿ ವಯನಾಡನ್ನ ಬಿಟ್ಟು ಅಮೇಥಿಯಲ್ಲಿ ಸ್ಮೃತಿ ಇರಾನಿ ಚಾಲೆಂಜ್ ಫೇಸ್​ ಮಾಡ್ತಾರಾ? ಇಲ್ಲಾ ತಾಯಿಯಿಂದ ತೆರವಾಗಿರೋ ರಾಯ್​​ಬರೇಲಿಯಲ್ಲಿ ಸ್ಪರ್ಧಿಸ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ. ​

ಇಲ್ಲಿ ಒಂದಂತೂ ಸ್ಪಷ್ಟ.. ವಯನಾಡನ್ನಾದ್ರೂ ರಾಹುಲ್​​ ಗಾಂಧಿಗೆ ಬಿಟ್ಟು ಕೊಡಬಹುದು. ಆದ್ರೆ ಅಮೇಥಿ ಮತ್ತು ರಾಯ್​ಬರೇಲಿ ವಿಚಾರದಲ್ಲಿ ಗಾಂಧಿಗಳಿಗೆ ಕಾಂಪ್ರಮೈಸ್ ಮಾಡೋದಿಕ್ಕೆ ಸಾಧ್ಯವಿಲ್ಲ. ಇವೆರಡೂ ಕ್ಷೇತ್ರಗಳಲ್ಲಿ ಪಕ್ಷಕ್ಕೆ​ ಇರುವ ಇತಿಹಾಸ, ಭಾವನಾತ್ಮಕ ಸಂಬಂಧದಿಂದಾಗಿಯೇ ಕಾಂಗ್ರೆಸಿಗರು, ಗಾಂಧಿ ಕುಟುಂಬ ಅಮೇಥಿ, ರಾಯ್​ಬರೇಲಿಯನ್ನ ಕನಸಲ್ಲೂ ಕನವರಿಸ್ತಾರೆ. ಹೀಗಾಗಿ ಅಮೇಥಿಯನ್ನ ಮರಳಿ ಪಡೆಯೋಕೆ, ರಾಯ್​​​ಬರೇಲಿಯಲ್ಲೂ ಗಾಂಧಿ ಕುಡಿಯನ್ನೇ ಕಣಕ್ಕಿಳಿಸೋಕೆ ಕಾಂಗ್ರೆಸ್ ಚಿಂತನೆ ನಡೆಸ್ತಿದೆ. ಹೀಗಾಗಿ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ.

Sulekha