ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ – ‘ಲಿಂಗಾಯತ’ ದಾಳ ಉರುಳಿಸಿತಾ ಕಾಂಗ್ರೆಸ್?

ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ – ‘ಲಿಂಗಾಯತ’ ದಾಳ ಉರುಳಿಸಿತಾ ಕಾಂಗ್ರೆಸ್?

ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಮತದಾನಕ್ಕೆ ಮೂರು ವಾರಗಳಷ್ಟೇ ಬಾಕಿ ಉಳಿದಿದೆ. ಎಲೆಕ್ಷನ್ ಹೊತ್ತಲ್ಲೇ ರಾಜ್ಯದಲ್ಲಿ ಲಿಂಗಾಯತ ಫೈಟ್ ಶುರುವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಾತಿ ರಾಜಕಾರಣದ ಕಚ್ಚಾಟ ನಡೆಯುತ್ತಿದೆ. ಇದೀಗ ಲಿಂಗಾಯತ ಅಸ್ತ್ರವನ್ನೇ ಬಳಸಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಹೊಸ ದಾಳ ಉರುಳಿಸಲು ಸಜ್ಜಾಗಿದೆ. ಸ್ವತಃ ರಾಹುಲ್ ಗಾಂಧಿಯವರೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಬಂಗಲೆ ಖಾಲಿ ಮಾಡಲು ಇಂದೇ ಕೊನೆ ದಿನ – ರಾಹುಲ್ ಗಾಂಧಿ ಮುಂದಿನ ಪಯಣ ಗೊತ್ತಾ?

ರಾಹುಲ್‌ ಗಾಂ​ಧಿ ಅವರು ಏ.23 ರಂದು ಬೆಳಗ್ಗೆ 10 ಗಂಟೆಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದು, ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದ ದರ್ಶನ ಬಳಿಕ ಬಸವಣ್ಣನವರ ಐಕ್ಯಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಬಸವ ಮಂಟಪದಲ್ಲಿ ನಡೆಯುವ ಬಸವ ಪಂಚಮಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಕೂಡಲಸಂಗಮದಿಂದ ವಿಜಯಪುರಕ್ಕೆ ತೆರಳಲಿದ್ದಾರೆ. ರಾಹುಲ್‌ ಆಗಮನ ಹಿನ್ನೆಲೆಯಲ್ಲಿ ಕೂಡಲಸಂಗಮಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ, ಬಾಗಲಕೋಟೆ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ, ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿಯಾಗಿ ಕಾರ್ಯಕ್ರಮದ ಸಿದ್ಧತೆ ವೀಕ್ಷಣೆ ಮಾಡಿದರು.

ಸಮಾರಂಭದಲ್ಲಿ ರಾಹುಲ್ ಗಾಂಧಿ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲಿಂಗಾಯತ ಮುಖಂಡರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಶುಕ್ರವಾರ ಕೂಡಲಸಂಗಮಕ್ಕೆ ಭೇಟಿ ನೀಡಿ ಸಭಾ ಭವನ ವೀಕ್ಷಿಸಿದ್ದಾರೆ. ಆದರೆ ಈವರೆಗೂ ಕಾರ್ಯಕ್ರಮದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೂ, ಇಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುವ ಸಾಧ್ಯತೆಯಿದೆ. ಹಾಗಾಗಿಯೇ, ಈ ಸಭಾಂಗಣವನ್ನು ಬುಕ್ ಮಾಡಲಾಗಿದೆ ಎಂಬ ವದಂತಿಯಂತೂ ಹರಿದಾಡುತ್ತಿದೆ. ಹಾಗೊಮ್ಮೆ ರಾಹುಲ್ ಗಾಂಧಿಯವರು ಕೂಡಲ ಸಂಗಮಕ್ಕೆ ಬರುವುದು ಪಕ್ಕಾ ಆದರೆ, ಅದು ಖಂಡಿತವಾಗಿಯೂ ಬಿಜೆಪಿ ಟಕ್ಕರ್ ಕೊಡುವ ಉದ್ದೇಶವೇ ಆಗಿರುತ್ತದೆಯೇ ಹೊರತು ಮತ್ತೇನೂ ಅಲ್ಲ.

suddiyaana