ದೇಶದಾದ್ಯಂತ ತರಕಾರಿ ಬೆಲೆ ಏರಿಕೆ – ಆಜಾದ್‌ಪುರ ತರಕಾರಿ ಮಾರುಕಟ್ಟೆಗೆ ರಾಹುಲ್‌ ಗಾಂಧಿ ಭೇಟಿ

ದೇಶದಾದ್ಯಂತ ತರಕಾರಿ ಬೆಲೆ ಏರಿಕೆ – ಆಜಾದ್‌ಪುರ ತರಕಾರಿ ಮಾರುಕಟ್ಟೆಗೆ ರಾಹುಲ್‌ ಗಾಂಧಿ ಭೇಟಿ

ನವದೆಹಲಿ: ದೇಶದಾದ್ಯಂತ ಅಕ್ಕಿ, ಧಾನ್ಯ, ತರಕಾರಿ ಬೆಲೆ ಎಲ್ಲವೂ ಹೆಚ್ಚಾಗಿದೆ. ದರ ಏರಿಕೆಯಿಂದಾಗಿ ಜನರು ಕಂಗಾಲಾಗಿ ಹೋಗಿದ್ದಾರೆ. ಟೊಮ್ಯಾಟೋ ಬೆಲೆಯಂತೂ 200ರ ಗಡಿ ದಾಟಿದೆ. ಇತರ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ. ಈ ಹಿನ್ನೆಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿಯ ಆಜಾದ್‌ಪುರ ತರಕಾರಿ ಮಾರುಕಟ್ಟೆಗೆ ದಿಢೀರ್‌ ಭೇಟಿ ನೀಡಿದ್ದಾರೆ.

ರಾಹುಲ್‌ ಗಾಂಧಿ ಸದಾ ಜನರೊಂದಿಗೆ ಬೆರೆತು ಜನರ ಕಷ್ಟಗಳನ್ನು ಆಲಿಸುತ್ತಾರೆ. ತಾವು ಹೋದಲ್ಲೆಲ್ಲಾ ಸಾರ್ವಜನಿಕರೊಂದಿಗೆ ಬೆರೆತು ಅವರೊಂದಿಗೆ ಮಾತುಕತೆ ನಡೆಸುತ್ತಾರೆ. ಇದೀಗ ಮಂಗಳವಾರ ಮುಂಜಾನೆ ರಾಹುಲ್‌ ಗಾಂಧಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ತರಕಾರಿ ವರ್ತಕರೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ.  ರಾಹುಲ್‌ ಗಾಂಧಿ ಮಾರುಕಟ್ಟೆಗೆ ಭೇಟಿ ನೀಡಿ, ತರಕಾರಿ ವರ್ತಕರೊಂದಿಗೆ ಮಾತುಕತೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ದುನಿಯಾ ಮತ್ತಷ್ಟು ದುಬಾರಿ – ಹಾಲು, ತರಕಾರಿ, ಹೋಟೆಲ್​ ತಿನಿಸು ಎಲ್ಲವೂ ತುಟ್ಟಿ

ಕಳೆದ ಶನಿವಾರ ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ತರಕಾರಿ ವ್ಯಾಪಾರಿ ರಾಮೇಶ್ವರ್ ಎಂಬವರು ಕಣ್ಣಿರು ಹಾಕುತ್ತಾ, ಟೊಮೆಟೋ ತುಂಬಾ ದುಬಾರಿಯಾಗಿದೆ. ಅದನ್ನು ಖರೀದಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ. ಯಾವ ಬೆಲೆಗೆ ಮಾರಾಟ ಮಾಡುತ್ತೇವೆ ಎಂದು ಹೇಳಲು ಅಸಾಧ್ಯ. ಮಳೆಯಲ್ಲಿ ತೇವವಾದರೆ ಅಥವಾ ಸ್ಟಾಕ್‌ಗೆ ಏನಾದರೂ ಹಾನಿಯಾದರೆ ನಾವು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಹಣದುಬ್ಬರವು ತನ್ನನ್ನು ಹತಾಶ ಪರಿಸ್ಥಿತಿಗೆ ತಳ್ಳಿದ್ದು, ದಿನಕ್ಕೆ 100ರಿಂದ 200 ರೂ. ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬೆನ್ನಲೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತರಕಾರಿ ಮಂಡಿಗೆ ಭೇಟಿ ನೀಡಿ ವರ್ತಕರೊಂದಿಗೆ ನೇರವಾಗಿ ಮಾತನಾಡಿದ್ದಾರೆ.

suddiyaana