ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ
ಜನಪ್ರತಿನಿಧಿಗಳ ಕಾಯ್ದೆ ಏನು ಹೇಳುತ್ತದೆ..?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಜನಪ್ರತಿನಿಧಿಗಳ ಕಾಯ್ದೆ ಏನು ಹೇಳುತ್ತದೆ..?

ರಾಷ್ಟ್ರ ರಾಜಕಾರಣದಲ್ಲಿ ಇವತ್ತು ದೊಡ್ಡ ಬೆಳವಣಿಗೆಯಾಗಿದೆ. ನಿನ್ನೆಯಷ್ಟೇ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಮೋದಿ ಸರ್‌ನೇಮ್ ಕುರಿತು ಹೇಳಿಕೆ ನೀಡುವ ವೇಳೆ ಒಬಿಸಿ ಜಾತಿಗಳ ನಿಂದನೆ ಮಾಡಿದ್ದ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲಿಯೇ ರಾಹುಲ್ ಗಾಂಧಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಮೋದಿ ಉಪನಾಮ ಹೇಳಿಕೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ಶಿಕ್ಷೆಗೊಳಗಾಗಿದ್ದರು.

ಇದನ್ನೂ ಓದಿ : ಮೋದಿ ವಿರುದ್ಧದ ಮಾನಹಾನಿ ಮೊಕದ್ದಮೆ ಕೇಸ್ ಸಾಬೀತು – ರಾಹುಲ್ ಗಾಂಧಿಗೆ ತಪ್ಪಲ್ವಾ ಸಂಕಷ್ಟ?

ಸೂರತ್ ಕೋರ್ಟ್ ಶಿಕ್ಷೆ ನೀಡಿದ ಬೆನ್ನಲ್ಲಿಯೇ ರಾಹುಲ್ ಗಾಂಧಿ ಜಾಮೀನು ಪಡೆದು ದೆಹಲಿಗೆ ವಾಪಸಾಗಿದ್ದರು. ಆದರೆ, ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ರಾಹುಲ್ ಗಾಂಧಿ ಅವರನ್ನು ವಯನಾಡು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿದೆ ಎಂದು ಲೋಕಸಭಾ ಕಾರ್ಯಾಲಯದಿಂದ ಅಧಿಕೃತ ಆದೇಶ ನೀಡಲಾಗದೆ. ಕ್ರಿಮಿನಲ್ ಮೊಕದ್ದಮೆಯಲ್ಲಿ ಅವರು ದೋಷಿ ಎಂದು ತೀರ್ಮಾನವಾಗಿರುವ ಕಾರಣ ಅವರ ಲೋಕಸಭೆ ಸದಸ್ಯತ್ವ ಸ್ಥಾನ ಅನರ್ಹಗೊಂಡಿದೆ.  2019ರಲ್ಲಿ ಕೋಲಾರದಲ್ಲಿ ನಡೆದ ಲೋಕಸಭೆ ಚುನಾವಣೆ ಸಮಾವೇಶದಲ್ಲಿ ಕೆ.ಹೆಚ್ ಮುನಿಯಪ್ಪ ಪರವಾಗಿ ಮತಯಾಚನೆ ಮಾಡುವ ವೇಳೆ ರಾಹುಲ್ ಗಾಂಧಿ, ಕಳ್ಳರೆಲ್ಲಾ ಮೋದಿ ಎನ್ನುವ ಸರ್‌ನೇಮ್ ಅನ್ನೇ ಯಾಕೆ ಹೊಂದಿರುತ್ತಾರೆ ಎಂದು ಪ್ರಶ್ನೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕೆ ಮಾಡುವ ಭರದಲ್ಲಿ ರಾಹುಲ್ ಗಾಂಧಿ ಮೋದಿ ಎನ್ನುವ ಇತರೆ ಹಿಂದುಳಿದ ಜಾತಿಯನ್ನು ನಿಂದನೆ ಮಾಡಿದ್ದರು. ಈ ಕುರಿತಾಗಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲು ಮಾಡಿದ್ದರು. ಇದರ ಸೂಕ್ತ ವಿಚಾರಣೆ ಮಾಡಿದ ಸೂರತ್ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಪ್ರಕಟ ಮಾಡಿತ್ತು. ರಾಹುಲ್ ಗಾಂಧಿಯನ್ನು ದೋಷಿ ಎಂದಿದ್ದ ಕೋರ್ಟ್ 2 ವರ್ಷದ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಹುಲ್ ಗಾಂಧಿಗೆ 30 ದಿನಗಳ ಕಾಲಾವಕಾಶ ಇರಲಿದೆ.

ಜನಪ್ರತಿನಿಧಿಗಳ ಕಾಯ್ದೆ ಏನು ಹೇಳುತ್ತದೆ?

1951ರ ಜನಪ್ರತಿನಿಧಿಗಳ ಕಾಯ್ದೆಯಂತೆ ಶಾಸಕರು/ ಸಂಸದರು ಎರಡು ನಿದರ್ಶನಗಳಲ್ಲಿ ತಮ್ಮ ಸ್ಥಾನದಿಂದ ಅನರ್ಹರಾಗಬಹುದು. ಮೊದಲು ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು)ನಂತಹ ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದರೆ ತಮ್ಮ ಸ್ಥಾನವನ್ನು ಸಂಸದರು ಕಳೆದುಕೊಳ್ಳಲಿದ್ದಾರೆ. ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದಾರೆ ಅವರನ್ನು ಶಾಸಕ/ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ರಾಹುಲ್‌ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾದ ಕಾರಣ ಈಗ ಈ ಕಾಯ್ದೆಯ ಅಡಿ ಅನರ್ಹ ಮಾಡಲಾಗಿದೆ.

suddiyaana