ರಾಜಸ್ಥಾನ ರಾಯಲ್ಸ್ ನಿಂದ ಹೊರ ಬಿದ್ದ ದ್ರಾವಿಡ್ – ಜವಾಬ್ದಾರಿ ನೆಪ ಮಾಡಿತಾ ಫ್ರಾಂಚೈಸಿ?

ಟೀಂ ಇಂಡಿಯಾದ ದಿ ವಾಲ್, ಭಾರತೀಯ ಕ್ರಿಕೆಟ್ನ ದಂತಕಥೆ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯಿಂದ ಹೊರಬಂದಿದ್ದಾರೆ. ಫ್ರಾಂಚೈಸಿ ನೀಡಿದ ಆಫರ್ ಅನ್ನು ನಿರಾಕರಿಸಿ ಕೋಚ್ ಹುದ್ದೆಯನ್ನೇ ತೊರೆದಿದ್ದಾರೆ. ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ತಂಡದವನ್ನ ಫ್ರಾಂಚೈಸಿ ಸ್ಟ್ರಾಂಗ್ ಮಾಡೋಕೆ ಪ್ಲ್ಯಾನ್ ಮಾಡುವಾಗ್ಲೇ ಈ ನಿರ್ಧಾರ ಹೊರ ಬಿದ್ದಿದೆ.
ಇದನ್ನೂ ಓದಿ : ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಹರ್ಭಜನ್ – 2008ರ ವಿಡಿಯೋ ಈಗ ರಿಲೀಸ್ ಯಾಕೆ?
ಹೆಚ್ಚಿನ ಜವಾಬ್ದಾರಿ ನೀಡಿದ್ದೇ ರಾಜೀನಾಮೆಗೆ ಕಾರಣನಾ?
ರಾಜಸ್ತಾನ ರಾಯಲ್ಸ್ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಒಂದಷ್ಟು ಸುದ್ದಿಗಳು ಹರಿದಾಡ್ತಿದ್ವು. ಸಂಜು ಸ್ಯಾಮ್ಸನ್ ಹೊರ ಬರ್ತಾರೆ ಅನ್ನೋ ಟಾಕ್ ಇತ್ತು. ಬಟ್ ಅಚ್ಚರಿ ಎನ್ನುವಂತೆ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ. ತಂಡದ ಆಡಳಿತದಲ್ಲಿ ಒಂದಷ್ಟು ಮೇಜರ್ ಚೇಂಜಸ್ ತರೋ ಉದ್ದೇಶದಿಂದ ಫ್ರಾಂಚೈಸಿಯು ರಾಹುಲ್ ದ್ರಾವಿಡ್ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲು ಮುಂದಾಗಿತ್ತು. ಆದರೆ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದು, ಕೋಚ್ ಹುದ್ದೆಯನ್ನು ತೊರೆದಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ತಂಡಕ್ಕಾಗಿ ರಾಹುಲ್ ದ್ರಾವಿಡ್ ನೀಡಿರುವ ಕೊಡುಗೆಯನ್ನು ಸ್ಮರಿಸಿರುವ ರಾಜಸ್ಥಾನ್ ರಾಯಲ್ಸ್, “ಹಲವು ವರ್ಷಗಳಿಂದ ರಾಹುಲ್ ಅವರು ರಾಯಲ್ಸ್ ಪಯಣದ ಅವಿಭಾಜ್ಯ ಅಂಗವಾಗಿದ್ದರು. ಅವರ ನಾಯಕತ್ವವು ಯುವ ಆಟಗಾರರ ಮೇಲೆ ಅಗಾಧ ಪ್ರಭಾವವನ್ನು ಬೀರಿದೆ. ತಂಡದಲ್ಲಿ ಮೌಲ್ಯಗಳನ್ನು ಬೆಳೆಸಿದ್ದಾರೆ, ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಅಸಾಧಾರಣ ಸೇವೆಗಾಗಿ ರಾಜಸ್ಥಾನ್ ರಾಯಲ್ಸ್, ತಂಡದ ಆಟಗಾರರು ಮತ್ತು ವಿಶ್ವದಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳು ರಾಹುಲ್ಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಾರೆ, ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅಧಿಕೃತ ಹೇಳಿಕೆಯನ್ನ ಬಿಡುಗಡೆ ಮಾಡಿದೆ.
ಬಹುವರ್ಷಗಳ ಒಪ್ಪಂದ ಒಂದೇ ವರ್ಷಕ್ಕೆ ಕೊನೆಯಾಗಿದ್ದೇಗೆ?
2024ರ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಭಾರತ ತಂಡದೊಂದಿಗಿನ ತಮ್ಮ ಮೂರು ವರ್ಷಗಳ ಹೆಡ್ ಕೋಚ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ದ್ರಾವಿಡ್ ಅವರು ನಂತರ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದರು. ತಂಡದ ಮುಖ್ಯ ಕೋಚ್ ಆಗಿ ಬಹು ವರ್ಷಗಳ ಒಪ್ಪಂದದೊಂದಿಗೆ ನೇಮಕಗೊಂಡಿದ್ದರು. ಅಲ್ದೇ ಈ ಹಿಂದೆ 2012 ಮತ್ತು 2013ರಲ್ಲಿ ಇದೇ ತಂಡದ ನಾಯಕರೂ ಆಗಿದ್ರು. ಜೊತೆಗೆ 2014 ಮತ್ತು 2015ರಲ್ಲಿ ತಂಡದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, 2025ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ರದರ್ಶನವು ತೀರಾ ಕಳಪೆಯಾಗಿತ್ತು. ಆಡಿದ 14 ಲೀಗ್ ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಜಯಗಳಿಸಿ, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಗಾಯದ ಕಾರಣದಿಂದ ಕೇವಲ ಒಂಬತ್ತು ಪಂದ್ಯಗಳಲ್ಲಷ್ಟೇ ಆಟವಾಡಿದ್ದರು. ಅವರ ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಿದ್ದರು. ಇದೀಗ, ದ್ರಾವಿಡ್ ಅವರ ಎರಡನೇ ಇನ್ನಿಂಗ್ಸ್ ಒಂದು ವರ್ಷ ತುಂಬೋ ಮೊದಲೇ ಕೊನೆಯಾಗಿದೆ. 2026ರ ಐಪಿಎಲ್ ಸೀಸನ್ಗಾಗಿ ಹೊಸ ಕೋಚ್ನೊಂದಿಗೆ ರಾಜಸ್ಥಾನ ಕಣಕ್ಕಿಳಿಯಲಿದೆ.
18ನೇ ಸೀಸನ್ ಐಪಿಎಲ್ ನಲ್ಲಿ ಕಾಲು ನೋವಿನ ನಡುವೆಯೇ ಬ್ಯಾಂಡೇಜ್ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ರು. ಇದು ದ್ರಾವಿಡ್ ಅವ್ರ ಡೆಡಿಕೇಷನ್ ಲೆವೆಲ್. ಹೀಗಿದ್ರೂ ಟೀಂ ಶೈನ್ ಆಗಿರಲಿಲ್ಲ. ಸೋ ಮುಂದಿನ ಆವೃತ್ತಿಗೆ ಎಲ್ಲವನ್ನೂ ಸರಿ ಮಾಡ್ಕೊಂಡು ಜಬರ್ದಸ್ತ್ ಪ್ರದರ್ಶನ ನೀಡ್ತಾರೆ ಅನ್ನುವಾಗ್ಲೇ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದಿರೋದು ಅನುಮಾನ ಮೂಡಿಸಿದೆ.

ನೋಡಿರಿ

