ವಿಶ್ವಕಪ್‌ನಲ್ಲಿ ದಾಖಲೆ ಬರೆಯುತ್ತಿರುವ ರಚಿನ್ ರವೀಂದ್ರಗೆ ದೃಷ್ಟಿ ತೆಗೆದ ಅಜ್ಜಿ – ನ್ಯೂಝಿಲೆಂಡ್ ಆಟಗಾರನಿಗೆ ಬೆಂಗಳೂರಿನಲ್ಲಿ ಅಜ್ಜಿಯ ಮಮಕಾರ

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ನ್ಯೂಝಿಲೆಂಡ್ ತಂಡದ ಪರ ಆಡುತ್ತಿರುವ ರಚಿನ್ ರವೀಂದ್ರ ಕನ್ನಡಿಗರ ಮನ ಗೆದ್ದಿದ್ದಾರೆ. ಇವರು ಕನ್ನಡಿಗ ಎಂಬುದು ಕೂಡಾ ಅಭಿಮಾನಿಗಳಿಗೂ ಹೆಮ್ಮೆಯ ವಿಷಯ. ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲೆ ಮೇಲೆ ದಾಖಲೆ ಬರೆದು ಮಿಂಚುತ್ತಿರುವ ರಚಿನ್ ಅವರು ಬೆಂಗಳೂರಿನ ಅಜ್ಜಿ ಮನೆಗೆ ಬಂದಿದ್ದರು. ಈ ವೇಳೆ ಅವರ ಅಜ್ಜಿ ದೃಷ್ಟಿ ತೆಗೆಯುವ ವೀಡಿಯೋ ವೈರಲ್ ಆಗಿದೆ.
ಶ್ರೀಲಂಕಾ ಪಂದ್ಯದ ನಂತರ ಬೆಂಗಳೂರಿನಲ್ಲೇ ಇರುವ ತಮ್ಮ ಅಜ್ಜಿ ಮನೆಗೆ ನ್ಯೂಝಿಲೆಂಡ್ ತಂಡದ ಆಟಗಾರ ರಚಿನ್ ರವೀಂದ್ರ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಮೊಮ್ಮಗನಿಗೆ ಯಾರ ದೃಷ್ಟಿಯೂ ಬೀಳಬಾರದು ಎಂದು ಅಜ್ಜಿ ಪ್ರೀತಿಯಿಂದ ದೃಷ್ಟಿ ತೆಗೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ರಚಿನ್ ಈ ಆವೃತ್ತಿಯಲ್ಲಿ ಒಟ್ಟು ಮೂರು ಶತಕ ಬಾರಿಸಿ ಕ್ರಿಕೆಟ್ ದಂತಕತೆ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಆಟಗಾರರ ದಾಖಲೆಯನ್ನು ಮುರಿದಿದ್ದಾರೆ. ಸದ್ಯ 565 ರನ್ ಗಳಿಸಿರುವ ಅವರು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ರಚಿನ್ ರವೀಂದ್ರ 1999 ರಲ್ಲಿ ಜನಿಸಿದರು. ರಚಿನ್ ಅವರು ಬೆಂಗಳೂರು ಮೂಲದ ರವೀಂದ್ರ ಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ಆಗಿರುವ ರವೀಂದ್ರ ಕೃಷ್ಣಮೂರ್ತಿ ಅವರು 1990ರಲ್ಲಿ ನ್ಯೂಝಿಲೆಂಡ್‌ಗೆ ತೆರಳಿದ್ದರು. ಆ ಬಳಿಕ ಅಲ್ಲಿಯೇ ನೆಲೆಸಿದ್ದರು. ರಚಿನ್ ಅವರ ತಂದೆ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಇಬ್ಬರೂ ಆಟಗಾರರ ಹೆಸರಿನ ಅಕ್ಷರಗಳನ್ನು ಸೇರಿಸಿ ರಾಹುಲ್ ಹೆಸರಿಂದ ‘ರಾ’ ಮತ್ತು ಸಚಿನ್ ಹೆಸರಿಂದ ‘ಚಿನ್’ ತೆಗೆದುಕೊಂಡು ರಚಿನ್ ಎಂದು ನಾಮಕರಣ ಮಾಡಿದ್ದರು.
ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 171 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ್ದ ಕಿವೀಸ್ 23.2 ಓವರ್‌ಗಳಲ್ಲೇ 172 ರನ್ ಗಳಿಸುವ ಮೂಲಕ ಬಹುತೇಕ ಸೆಮಿಫೈನಲ್ ಪ್ರವೇಶಿಸಿದೆ.