ಒಂದೇ ಗಂಟೆಯಲ್ಲಿ 29 ಜನರಿಗೆ ಕಚ್ಚಿದ ಬೀದಿ ನಾಯಿ – ಶ್ವಾನದ ಪರೀಕ್ಷೆ ವೇಳೆ ರೇಬಿಸ್ ರೋಗ ಪತ್ತೆ
ಕಳೆದ ಎರಡು ದಿನಗಳ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ಬೀದಿ ನಾಯಿಯೊಂದು ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸಿತ್ತು. ಒಂದು ಗಂಟೆಯಲ್ಲಿ ಬರೋಬ್ಬರಿ 29 ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಇದೀಗ ಆ ಶ್ವಾನಕ್ಕೆ ರೇಬಿಸ್ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 2 ತಿಂಗಳ ಬಳಿಕ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್
ಕಳೆದ ಗುರುವಾರ ಚೆನ್ನೈನ ಅತ್ಯಂತ ಜನನಿಬಿಡ ಹಾಗೂ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾದ ಜಿಎ ರಸ್ತೆಯಲ್ಲಿ ಈ ನಾಯಿ ರಸ್ತೆ ಮೇಲೆ ಮಲಗಿತ್ತು. ಈ ರಸ್ತೆಯ ಫುಟ್‌ಪಾತ್ ಮೇಲೆ ಓಡಾಡುವ ಜನರ ಮೇಲೆ ನಾಯಿ ಏಕಾಏಕಿ ದಾಳಿ ನಡೆಸುತ್ತಿತ್ತು. ಒಂದು ಗಂಟೆಯಲ್ಲಿ ಸುಮಾರು 29 ಮಂದಿಯನ್ನು ಕಚ್ಚಿ ಜನರನ್ನು ಆತಂಕಕ್ಕೆ ದೂಡುವಂತೆ ಮಾಡಿತ್ತು. ಹೀಗಾಗಿ ಆ ನಾಯಿಯನ್ನು ಸಾರ್ವಜನಿಕರು ಹೊಡೆದು ಕೊಂದಿದ್ದರು. ಬಳಿಕ ಕಾರ್ಪೊರೇಷನ್ ಅಧಿಕಾರಿಗಳು ಸಾವನ್ನಪ್ಪಿದ ಶ್ವಾನದ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ್ದಾರೆ. ಇದೀಗ ಆ ನಾಯಿಗೆ ರೇಬಿಸ್ ಪಾಸಿಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಶ್ವಾನ 10 ವಿದ್ಯಾರ್ಥಿಗಳು ಸೇರಿ ಒಟ್ಟು 29 ಜನರಿಗೆ ಕಚ್ಚಿತ್ತು. ಶ್ವಾನಕ್ಕೆ ರೇಬಿಸ್ ಪತ್ತೆಯಾದ ಹಿನ್ನೆಲೆಯಲ್ಲಿ ಶ್ವಾನ ಕಚ್ಚಿದ ಪ್ರತಿಯೊಬ್ಬರನ್ನೂ ಸಂಪರ್ಕಿಸಿ ರೇಬಿಸ್ ಚುಚ್ಚುಮದ್ದು ಪಡೆಯಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.