ದೇವರ ಸಿನಿಮಾದಲ್ಲಿ ಎನ್‌ಟಿಆರ್ ಅಬ್ಬರ.. ಪ್ರೇಕ್ಷಕರ ನಿರೀಕ್ಷೆ ಏನಾಯ್ತು?- ಮೂರೇ ದೃಶ್ಯದಲ್ಲಿ ಮರೆಯಾದ ಜಾನ್ವಿ ಕಪೂರ್
ಜೂನಿಯರ್ ಎನ್‌ಟಿಆರ್ ನಟನೆಯ ದೇವರ ಸಿನಿಮಾ ರಿಲೀಸ್ ಆಗಿದೆ. ಮಧ್ಯ ರಾತ್ರಿಯಿಂದಲೇ ಶೋಗಳು ಪ್ರಾರಂಭವಾಗಿದ್ದು, ದೇವರ ಅಬ್ಬರ ಜೋರಾಗಿಯೇ ಇದೆ. ಆದ್ರೆ, ಸಿನಿಮಾ ನೋಡಿ ಬಂದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದೇವರ ಸಿನಿಮಾ ಮೇಲೆ ಪ್ರೇಕ್ಷಕರು ಇಟ್ಟ ನಿರೀಕ್ಷೆ ಏನಾಗಿದೆ ಅನ್ನೋ ವಿವರಣೆ ಇಲ್ಲಿದೆ.
ಇದನ್ನೂ ಓದಿ: ತಿರುಪತಿ ಪ್ರಸಾದ ವಿವಾದದ ಬೆನ್ನಲ್ಲೇ ಅಯೋಧ್ಯೆಯಲ್ಲಿ ಮಹತ್ವದ ನಿರ್ಧಾರ – ಏಜೆನ್ಸಿಗಳಿಂದ ತಯಾರಾಗುವ ಪ್ರಸಾದಕ್ಕೆ ನಿಷೇಧ ಹೇರಿಕೆ!
ಎನ್‌ಟಿಆರ್ ಅವರನ್ನು ತೆರೆಮೇಲೆ ನೋಡದೆ ಬಹಳ ದಿನಗಳೇ ಕಳೆದಿದ್ದವು. ಹಾಗಾಗಿ, ಫ್ಯಾನ್ಸ್ ದೇವರ ಸಿನಿಮಾಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ತಮ್ಮ ಎಂದಿನ ಡ್ಯಾನ್ಸ್ ಮತ್ತು ಆ್ಯಕ್ಷನ್ ಮೂಲಕ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದ್ದಾರೆ ಎನ್‌ಟಿಆರ್. ದೇವರ ಕಥೆ ಸಾಗೋದೇ ಸಾಗರದ ಸುತ್ತ..
ಆಂಧ್ರ ಪ್ರದೇಶ & ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಸಮುದ್ರ ದಡದಲ್ಲಿರುವ ನಾಲ್ಕು ಪುಟ್ಟ ಪುಟ್ಟ ಹಳ್ಳಿಗಳು. ಅಲ್ಲಿರುವವರು ಬುಡಕಟ್ಟು ಮಂದಿ. ಅವರ ಪೂರ್ವಿಕರು ಬ್ರಿಟಿಷರನ್ನೇ ಒದ್ದು ಓಡಿಸಿದ ಸಾಹಸಿಗಳು. ಅಂತಹ ವೀರ ಪರಂಪರೆಯಲ್ಲಿ ಹುಟ್ಟಿದವರು ಈಗ ಕಡಲ್ಗಳ್ಳರಾಗಿದ್ದಾರೆ. ಅವರಲ್ಲಿ ದೇವರ ಕೂಡ ಒಬ್ಬ. ಸರಕು ಸಾಗಾಣಿಕೆಯ ಹಡಗುಗಳನ್ನು ಗುರಿಯಾಗಿಸಿಕೊಂಡು, ಸಮುದ್ರದ ನಡುವೆಯೇ ಅವುಗಳನ್ನು ದೋಚುವುದು ಈ ಜನರ ಕೆಲಸ. ಒಂದು ಹಂತದಲ್ಲಿ ಇದು ತಪ್ಪು ಎಂಬುದು ದೇವರನಿಗೆ ಅರಿವಾಗುತ್ತದೆ. ಆದರೆ ಅದೇ ಊರಿನ ಭೈರನಿಗೆ ಆಗುವುದಿಲ್ಲ. ಮೀನು ಹಿಡಿಯಲು ಸಮುದ್ರಕ್ಕಿಳಿಯಬೇಕೇ ವಿನಃ ಬೇರೆ ಯಾವ ಕೆಟ್ಟ ಕೆಲಸಕ್ಕೂ ಕೈ ಹಾಕಬಾರದು ಎಂಬ ಕಟ್ಟಪ್ಪಣೆಯನ್ನು ದೇವರ ಹೊರಡಿಸುತ್ತಾನೆ. ಆನಂತರ ದೇವರನೇ ಕಾಣೆಯಾಗುತ್ತಾನೆ. ಇತ್ತ ದೇವರನ ಮಗ ವರ ಬೆಳೆದು ದೊಡ್ಡವನಾಗುತ್ತಾನೆ. ಆದರೆ ಆತ ಅಪ್ಪನಂತೆಯೇ ರೋಷಾವೇಶ ಹೊಂದಿದವನಲ್ಲ. ವರ ಏಕೆ ಹೇಡಿ ಆಗಿರುತ್ತಾನೆ? ದೇವರ ಏಕೆ ಕಣ್ಮರೆಯಾಗುತ್ತಾನೆ? ಭೈರ ಮತ್ತು ದೇವರ ನಡುವಿನ ವೈಷಮ್ಯಕ್ಕೆ ಕಾರಣವೇನು? ದರೋಡೆಕೋರನಾಗಿದ್ದ ದೇವರ ಬದಲಾಗಿದ್ದು ಹೇಗೆ? ಪಾರ್ಟ್ 2ರಲ್ಲಿ ಏನೆಲ್ಲಾ ಆಸಕ್ತಿಕರ ವಿಚಾರಗಳಿವೆ..? ಇವೆಲ್ಲದರ ಬಗ್ಗೆ ಕುತೂಹಲವಿದ್ದವರೂ ‘ದೇವರ’ ಸಿನಿಮಾ ನೋಡಬಹುದು.
ಇನ್ನು ದೇವರ ಸಿನಿಮಾ ನೋಡಿದ ಪ್ರೇಕ್ಷಕರು ತಮ್ಮದೇ ಅಭಿಪ್ರಾಯವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನೆಲ್ಲಾ ನೋಡ್ತಾ ಹೋಗೋದಾದರೆ,
‘ದೇವರ’ ಸಿನಿಮಾ ಅರ್ಧ ಬೇಯಿಸಿದ ಅಡುಗೆಯಂತಿದೆ. ಬೇಸರ ಮೂಡಿಸುವ ನಿರೂಪಣೆ, ಕೇಳಲು ಹಿಂಸೆಯಾಗುವ ರೊಟೀನ್ ಮಾದರಿಯ ಡೈಲಾಗ್ಗಳು ಇವೆ. ಡೈಲಾಗ್ ವಿಷಯದಲ್ಲಂತೂ ಕೊರಟಾಲ ಶಿವ ಸಂಪೂರ್ಣವಾಗಿ ಸೋತಿದ್ದಾರೆ. ಸಿನಿಮಾದ ಎರಡನೇ ಅರ್ಧಕ್ಕಿಂತಲೂ ಮೊದಲಾರ್ಧ ತುಸು ಪರವಾಗಿಲ್ಲ ಎನ್ನಬಹುದು. ಅವಶ್ಯಕತೆ ಇಲ್ಲದ ಹಲವು ದೃಶ್ಯಗಳು ಸಿನಿಮಾದಲ್ಲಿವೆ. ಕ್ಲೈಮ್ಯಾಕ್ಸ್ಗೆ ಮುನ್ನ 5-10 ನಿಮಿಷ ಮಾತ್ರವೇ ಸಿನಿಮಾದ ಕತೆ ಇದೆ ಉಳಿದೆದ್ದಲ್ಲವೂ ಅನವಶ್ಯಕ’ ಎಂದಿದ್ದಾರೆ ಒಬ್ಬ ಟ್ವಿಟ್ಟರ್ ಬಳಕೆದಾರ.
‘ದೇವರ’ ಸಿನಿಮಾನಲ್ಲಿ ಕೆಲವು ಒಳ್ಳೆಯ ಮಾಸ್ ಮೂಮೆಂಟ್ಗಳನ್ನು ಕೊರಟಾಲ ಸೃಷ್ಟಿಸಿದ್ದಾರೆ. ಆ ಮಾಸ್ ಮೂಮೆಂಟ್ಗಳಿಗೆ ಎನ್‌ಟಿಆರ್ ಸಖತ್ ಶಕ್ತಿ ತುಂಬಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಖತ್ ಆಗಿದೆ. ದೃಶ್ಯಗಳನ್ನು ಎಲಿವೇಟ್ ಮಾಡಿದೆ. ಕೊರಟಾಲ ಶಿವ ಸಿನಿಮಾದ ಪೂರ್ತಿ ಎನರ್ಜಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕೆಲವು ಪಾತ್ರಗಳನ್ನು ಇನ್ನೂ ಚೆನ್ನಾಗಿ ಕೆತ್ತಬಹುದಿತ್ತು. ಮುಂದಿನ ಭಾಗಕ್ಕೆ ಪ್ರೇಕ್ಷಕರನ್ನು ಸೆಟ್ ಮಾಡುವ ಕೊನೆಯ ದೃಶ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಇರಬೇಕಿತ್ತು. ಆದರೂ ಸಹ ಒಳ್ಳೆಯ ಪರ್ಫಾರ್ಮೆನ್ಸ್ ಮತ್ತು ಸಂಗೀತಕ್ಕೆ ಪೂರ್ಣ ಅಂಕ’ ಎಂದಿರುವುದು ಥೈವಿವ್ಯೂ ಹೆಸರಿನ ಟ್ವಿಟ್ಟರ್ ಖಾತೆ.
‘ಮೊದಲಾರ್ಧ ಸಾಧಾರಣವಾಗಿದೆ. ದ್ವೀತೀಯಾರ್ಧ ಕೆಟ್ಟದಾಗಿದೆ. ಕೊರಟಾಲ ಶಿವ ಪಾಲಿಗೆ ಇದು ಮತ್ತೊಂದು ‘ಆಚಾರ್ಯ’. ಜೂ ಎನ್‌ಟಿಆರ್ ಮತ್ತು ಜಾನ್ಹವಿ ಚೆನ್ನಾಗಿ ಮಾಡಿದ್ದಾರೆ. ನೀರಿನಲ್ಲಿ ನಡೆವ ಆಕ್ಷನ್ ದೃಶ್ಯಗಳು ಹಾಗೂ ಶಾರ್ಕ್ ಜೊತೆಗಿನ ದೃಶ್ಯ ಚೆನ್ನಾಗಿದೆ. ಮೊದಲೇ ಎಚ್ಚರಿಕೆ ಕೊಡುತ್ತಿದ್ದೀನಿ, ಮೊದಲಾರ್ಧ ಸಿನಿಮಾ ನೋಡಿ ಹೊರಬಂದು ಬಿಡಿ ಎರಡನೇ ಅರ್ಧ ನೋಡಲು ಹೋಗಬೇಡಿ ಬೇಸರ ಆಗುತ್ತದೆ’ ಎಂದಿದ್ದಾರೆ ಪ್ರಿನ್ಸ್ ವರ್ಮಾ ಹೆಸರಿನ ಒಬ್ಬ ಅಭಿಮಾನಿ.
‘ಫ್ಲ್ಯಾಷ್ಬ್ಯಾಕ್ನಿಂದ ಸಿನಿಮಾ ಆರಂಭ ಆಗುತ್ತದೆ. ಡ್ಯಾನ್ಸ್ ಮೂಲಕ ಇಂಟ್ರೊ ಅದಾದ ಬಳಿಕ ತುಸು ಫ್ಲ್ಯಾಟ್ ಆಗಿ ಕತೆ ಸರಿದು ಹೋಗುತ್ತದೆ. ಚಿತ್ರಕತೆಯಲ್ಲಿ ಧಂ ಇಲ್ಲ. ಕಂಟೇನರ್ ಸೀನ್ ಚೆನ್ನಾಗಿದೆ. ಇಂಟರ್ವೆಲ್ಗೆ ಮುಂಚಿನ 30 ನಿಮಿಷ ಚೆನ್ನಾಗಿದೆ. ಎರಡನೇ ಅರ್ಧ ಪ್ರಾರಂಭ ಆಗುವುದು 2.0 ಮೂಲಕ. ಜಾನ್ಹವಿ ಗ್ಲಾಮರ್ ಚೆನ್ನಾಗಿದೆ, ಚುಟ್ಟುಮಲ್ಲೆ ಹಾಡು ಚೆನ್ನಾಗಿದೆ. ಅದರ ಹೊರತಾಗಿ ಎಲ್ಲವೂ ಫ್ಲ್ಯಾಟ್ ಆಗಿ ನಡೆಯುತ್ತದೆ. ಹೈ ಸೀನ್ಗಳು ಕಡಿಮೆ, ಬಹುತೇಕ ಫ್ಲ್ಯಾಟ್ ಆಗಿಯೇ ನಡೆಯುತ್ತದೆ ಕತೆ. ಕ್ಲೈಮ್ಯಾಕ್ಸ್ ಸಹ ಇನ್ನೂ ಚೆನ್ನಾಗಿರಬಹುದಿತ್ತು’ ಎಂದು ಟಾಲಿಮಸ್ತಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗಿದೆ.
ಇನ್ನು, ದೇವರ ಚಿತ್ರದ ಮೂಲಕ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈಗಾಗಲೇ ಚುಟ್ಟಮಲ್ಲೆ ಹಾಡಿನಿಂದ ಅವರು ಫೇಮಸ್ ಆಗಿದ್ದರು. ಸಿನಿಮಾದಲ್ಲೂ ಅದೊಂದೇ ಹಾಡಿನಲ್ಲಿ ಅವರು ಗಮನಸೆಳೆದಿರುವುದು ವಿಪರ್ಯಾಸ. ಜಾನ್ವಿಗೆ ನಟನೆಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ಅಷ್ಟಕ್ಕೂ ದೇವರದಲ್ಲಿ ಅವರ ದರ್ಶನ ಆಗುವುದೇ ಸೆಕೆಂಡ್ ಹಾಫ್‌ನಲ್ಲಿ. ಇದು ಜಾನ್ವಿ ಕಪೂರ್ ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ.