KRSಗೆ ಟಿಪ್ಪು ಹೆಸರು ಇಡೋಕೆ ಹುನ್ನಾರ – ಕಾಂಗ್ರೆಸ್ ಮೇಲೆ ಆರ್ ಅಶೋಕ್ ಕಿಡಿ

ಕೆಆರ್‌ಎಸ್ ಡ್ಯಾಂಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೈಸೂರು ರಾಜ ಮನೆತನಕ್ಕೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಈಗ ಕೆಆರ್‌ಎಸ್ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪದೇ ಪದೇ ಟಿಪ್ಪು ಸುಲ್ತಾನರ ಹೆಸರು ತಂದು ಕಳಂಕಿತ ಹೇಳಿಕೆಗಳನ್ನು ನೀಡುತ್ತಿದ್ದು, ಇದೇ ಹಾದಿಯಲ್ಲಿ ನಡೆದಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಯಾವುದೋ ಇದುವರೆಗೂ ಕಾಣದ ಶಿಲಾನ್ಯಾಸವನ್ನು ಇಟ್ಟುಕೊಂಡು ಕೆಆರ್‌ಎಸ್‌ನ ಹೆಸರು ಬದಲಿಸಲು ಪೀಠಿಕೆ ಹಾಕಿದ್ದಾರೆ. ಕೆಆರ್‌ಎಸ್ ಹೆಸರು ಬದಲಿಸಲು ಯಾರದೋ ಕೈವಾಡವಿದ್ದು, ಹುನ್ನಾರವೆಸಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 5ನೇ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ – ಭಾರತ Vs ಇಂಗ್ಲೆಂಡ್ ಟೆಸ್ಟ್ ಸರಣಿ ಸಮಬಲ
ಟಿಪ್ಪು ಎಂದರೆ ಸಿಎಂ ಸಿದ್ದರಾಮಯ್ಯಗೆ ಹೆಚ್ಚು ಪ್ರೀತಿ, ಟಿಪ್ಪುವಿನ ಮೇಲೆ ಅಷ್ಟು ಪ್ರೀತಿಯಿದ್ದರೆ, ತಮ್ಮ ಪಕ್ಷಕ್ಕೆ ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಹೆಸರಿಡಲಿ. ಟಿಪ್ಪು ಓರ್ವ ನಾಡದ್ರೋಹಿ, ಲಕ್ಷಾಂತರ ಹಿಂದುಗಳ ಹತ್ಯೆಗೈದ ಟಿಪ್ಪು, ಪರ್ಷಿಯಾ ದೇಶದವನಾಗಿದ್ದು, ಟಿಪ್ಪು ಸತ್ತ 112 ವರ್ಷಗಳ ನಂತರ 1911ರಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಶಿಲಾನ್ಯಾಸ ಹೇಗೆ ಬಂತೆಂದು ಪ್ರಶ್ನಿಸಿದ್ದಾರೆ. ಟಿಪ್ಪು ಮರಣಕ್ಕೂ ಮುನ್ನವೇ ಶಿಲಾನ್ಯಾಸ ಮಾಡಲಾಗಿತ್ತು ಎಂದಾದರೆ, 1799ರ ಮೊದಲು ಹಳೆಗನ್ನಡ ಬಳಸಲಾಗುತ್ತಿತ್ತು. ಶಿಲಾನ್ಯಾಸದಲ್ಲಿ ಬಳಸಲಾದ ಕನ್ನಡ ಹಳೆಗನ್ನಡವಲ್ಲ. ಇಷ್ಟು ವರ್ಷಗಳು ಆ ಶಿಲಾನ್ಯಾಸವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯಾರು? ಯಾವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು ಎಂಬುದು ಬಹಿರಂಗವಾಗಬೇಕಿದೆ ಎಂದು ಹೇಳಿದ್ದಾರೆ.
1911ರಲ್ಲಿ ನಾಲ್ವಡಿ ಅವರಿಗೆ ಅಣೆಕಟ್ಟು ಕಟ್ಟಲು 80 ಅಡಿಗಳಿಗೆ ಅನುಮತಿ ದೊರೆತಿತ್ತು. ಆದರೂ 124 ಅಡಿಗಳಿಗೆ ನಾಲ್ವಡಿಯವರು ಅಣೆಕಟ್ಟು ಕಟ್ಟಿದ್ದರು. ಅಣೆಕಟ್ಟು ಕಟ್ಟುವ ಆರಂಭಕ್ಕೆ 2.34 ಕೋಟಿ ರೂ. ಹಣ ವ್ಯಯಿಸಲಾಗಿತ್ತು. ಪೂರ್ಣಗೊಳಿಸಲು ಅರಮನೆಯ ಹಾಗೂ ಮಹಾರಾಣಿಯರ ಒಡವೆಗಳನ್ನು ಮುಂಬೈನಲ್ಲಿ ಮಾರಿ ಅಣೆಕಟ್ಟು ಪೂರ್ಣಗೊಳಿಸಿದ್ದನ್ನು ಹಳೆ ಮೈಸೂರು ಭಾಗದ ಜನತೆ ಮರೆತಿಲ್ಲ ಎಂದು ತಿಳಿಸಿದ್ದಾರೆ.
ಪ್ರಾರಂಭದಿಂದ ಇಲ್ಲಿಯವರೆಗೂ ದಾಖಲೆಗಳಿವೆ. ಈ ಟಿಪ್ಪು ಶಿಲಾನ್ಯಾಸಕ್ಕೆ ಇರುವ ದಾಖಲೆಯಾದರೂ ಏನು? ಉತ್ತರ ಕರ್ನಾಟಕದ ಭಾಗದಲ್ಲಿ ನಿಜಾಮರ ಆಳ್ವಿಕೆಯಿತ್ತು. ಅಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಅಭಿವೃದ್ಧಿ ಕಾಣುವಂತಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ. ರಾಜ್ಯದ ಜನತೆಯ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಪದೇ ಪದೇ ಕೃಷ್ಣರಾಜ ಒಡೆಯರ್ ಹೆಸರಿಗೆ ಅಪಮಾನ ಮಾಡುವ ಕೆಲಸವಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೋಡಿರಿ

