`ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಹಣ ಹಾಕುವ ಘೋಷಣೆ – ಅಂಚೆ ಕಚೇರಿಯಲ್ಲಿ ಮಹಿಳೆಯರ ಕ್ಯೂ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಕ್ಕೆ ಬಂದ್ರೆ ಬಡ ಮಹಿಳೆಯರಿಗಾಗಿ 1 ಲಕ್ಷ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರನಾಳಿಕೆಯಲ್ಲಿಘೋಷಣೆ ಮಾಡಿತ್ತು. ಚುನಾವಣಾ ಫಲಿತಾಂಶ ಬರುವುದಕ್ಕೂ ಮುನ್ನವೇ ರಾಜ್ಯದ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆ ಕಳೆದ ಎರಡು ದಿನಗಳಿಂದ ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ ಮಹಿಳೆಯರು ಆಗಮಿಸಿ ಅಂಚೆ ಖಾತೆ ತೆರೆಯಲು ಮುಗಿಬೀಳುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: “ಸ್ವರ್ಗದಲ್ಲಿ ಜನ್ಮದಿನದ ಶುಭಾಶಯಗಳು” – ಅಂಬಿ ನೆನೆದು ಸುಮಲತಾ ಭಾವುಕ
ಹೌದು, ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ಪ್ರತಿ ತಿಂಗಳು ಖಾತೆಗೆ 8 ಸಾವಿರ ರೂ. ಹಣ ಜಮೆಯಾಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಮಹಿಳೆಯರು ಇದ್ದಾರೆ. ಹೀಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಕಚೇರಿಯಲ್ಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು. ಇದರಿಂದ ಮಹಿಳೆಯರು ಪೋಸ್ಟ್ ಆಫೀಸ್‌ಗಳಿಗೆ ಮುಗಿ ಬಿಳುತ್ತಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಉಳಿತಾಯ ಖಾತೆಯಾಗಿರುತ್ತದೆ. ಆದರೆ ಈಗ ವದಂತಿ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಖಾತೆ ತೆರೆಯಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಖಾತೆ ಮಾಡಿಸಲು ದಾಂಗುಡಿಯಿಡುತ್ತಿದ್ದು, ಬೆಂಗಳೂರು ಅಂಚೆ ಕಚೇರಿ ಸಿಬ್ಬಂದಿ ಸಂಪೂರ್ಣ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಟೋಕನ್ ಪಡೆದು ಖಾತೆ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಚೇರಿ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಮಹಿಳೆಯರನ್ನ ಕೇಳಿದ್ರೆ `ಅಕ್ಕಪಕ್ಕದವರು ಅಕೌಂಟ್‌ಗೆ ಹಣ ಬರುತ್ತೆ ಅಂತ ಹೇಳಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಣ ನೀಡುತ್ತಾರಂತೆ. ಅದಕ್ಕಾಗಿ ಖಾತೆ ಮಾಡಿಸಲು ಕ್ಯೂನಲ್ಲಿ ನಿಂತಿದ್ದೇವೆ’ ಅಂತಾ ಹೇಳಿದ್ದಾರೆ.